ಗೃಹಲಕ್ಷ್ಮಿ ಯೋಜನೆಯ ಇಕೆವೈಸಿ
ಗೃಹಲಕ್ಷ್ಮಿ ಯೋಜನೆಯ 2,000ರೂ ಪಡೆಯಲು ಇಕೆವೈಸಿ ಮರು ಪರಿಶೀಲನೆ ಪ್ರಕ್ರೀಯೆ ಪ್ರಾರಂಭಗೊಂಡಿರುತ್ತದೆ. ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳು ಮುಂದಿನ ಕಂತನ್ನು ಪಡೆಯಲು ಇಕೆವೈಸಿ ಮರುಪರಿಶೀಲನೆ ಮಾಡಿಸಬೇಕಾಗಿರುತ್ತದೆ.
ಬೇಕಾಗುವ ದಾಖಲೆಗಳು
1) ರೇಷನ್ ಕಾರ್ಡ್,
2) ಆಧಾರ್ ಕಾರ್ಡ್ ಮತ್ತು ಆಧಾರ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸಲು ಅವಕಾಶ
ಕುಟುಂಬದ ಮುಖ್ಯಸ್ಥರನ್ನು ಬದಲಿಸಿದ ಕಾರ್ಡ್ ಗಳು ಹೊಸ ಕಾರ್ಬ್‌ಗಳು, ಇನ್ನಿತರ ಬದಲಾವಣೆ ಮಾಡಿಸಿದ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸದ ಎಲ್ಲಾ ಕಾರ್ಡ್‌ಗಳು ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಬಹುದು.
ಬೆಕಾಗುವ ದಾಖಲೆಗಳು
1) ರೇಷನ್ ಕಾರ್ಡ್.
2) ಆಧಾರ್ ಕಾರ್ಡ್ ಮತ್ತು ಆಧಾರ್ ಅಂಲ್ಡ್ ಫೋನ್
3) ಬ್ಯಾಂಕ್ ಪಾಸ್ ಬುಕ್
ಮೊಬೈಲ್ ಆ್ಯಪ್ ಮೂಲಕ ಬೆಳೆ ಮಾಹಿತಿ ದಾಖಲಿಸಲು ಸೂಚನೆ
ಮೊಬೈಲ್ ಆ್ಯಪ್ ಮೂಲಕ ಹಿಂಗಾರು ಬೆಳೆ ಸಮೀಕ್ಷೆ ನಡೆಸುವ ಕಾರ್ಯ ಜಿಲ್ಲೆಯಲ್ಲಿ ಡಿಸೆಂಬರ್ 30 ರಿಂದ ಆರಂಭವಾಗಿದ್ದು, ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳ ವಿವರ ದಾಖಲಿಸಲು ಆಂಡ್ರಾಯ್ಡ್ ಆ್ಯಪ್ ಮೂಲಕ ವಿವರಗಳನ್ನು ತಾವೇ ಸ್ವತಃ ಮೊಬೈಲ್ ತಂತ್ರಾಂಶದ ಮೂಲಕ ದಾಖಲಿಸಬಹುದಾಗಿದೆ.
ರೈತರು ತಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇಸ್ಟೋರ್ ನಿಂದ ಬೆಳೆ ಸಮೀಕ್ಷೆ ಹಿಂಗಾರು Rabi Season Farmer Crop Survey 2023-24 ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬಹುದಾಗಿದೆ. ಬೆಳೆ ಸಮೀಕ್ಷೆ ದತ್ತಾಂಶ ಮಾಹಿತಿಯನ್ನು ಬೆಳೆ ವಿಸ್ತರಣೆ ಎಣಿಕೆ ಕಾರ್ಯದಲ್ಲಿ, ಬೆಳೆ ಕಟಾವು ಪ್ರಯೋಗದಲ್ಲಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ, ಬೆಳೆಹಾನಿ ವರದಿ ಸಿದ್ದಪಡಿಸಲು, ಬೆಳೆ
ವಿಮಾ ಯೋಜನೆ, ಬೆಂಬಲ ಬೆಲೆ ಯೋಜನೆ, ಆರ್.ಟಿ.ಸಿ ಯಲ್ಲಿ ಬೆಳೆ ವಿವರ ದಾಖಲಿಸಲು, ರಾಷ್ಟ್ರೀಯ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮಂಜೂರು ಮಾಡಲು ಬೆಳೆ ಸಮೀಕ್ಷೆ ಮಾಹಿತಿಯನ್ನು ಉಪಯೋಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 3,38,006 ಬೆಳೆ ತಾಕುಗಳಿದ್ದು, ಈ ತಾಕುಗಳಿಗೆ ರೈತರು ಬೆಳೆಗಳ ಮಾಹಿತಿಯನ್ನು ಸ್ವಯಂ ದಾಖಲಿಸಬೇಕೆಂದು ವಿನಂತಿಸಲಾಗಿದೆ.
ರೈತರು ತಾವೇ ಸ್ವತಃ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ತಾವು ಬೆಳೆದ ಮಾಹಿತಿಯನ್ನು ನಿಖರವಾಗಿ ನೀಡವುದರಿಂದ ಮುಂಬರುವ ವ್ಯತ್ಯಾಸವನ್ನು ತಡೆಯಬಹುದಾಗಿದೆ. ಬೆಳೆ ಸಮೀಕ್ಷೆ ಕೈಗೊಳ್ಳಲು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಪಿ.ಆರ್ ಗಳನ್ನು/ಕೃಷಿ/ತೋಟಗಾರಿಕೆ/ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಯಲಬುರ್ಗಾ ಕೃಷಿ ನಿರ್ದೇಶಕರಾದ ಪ್ರಾಣೇಶ್ ಹಾದಿಮನಿ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎ.ಆರ್.ಸಿ. ಆಲೂಗಡ್ಡೆ ಕ್ಷೇತ್ರೋತ್ಸವ
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಅಂಗ ಸಂಸ್ಥೆಯಾದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಬೆಂಗಳೂರು, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಬೆಂಗಳೂರು, ಅಂತರಾಷ್ಟ್ರೀಯ ಆಲೂಗಡ್ಡೆ ಕೇಂದ್ರ ಬೆಂಗಳೂರು, ಜಿ. ಐ. ಝಡ್, ಭಾರತ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ, ಕೋಲಾರ, ಹಾಗೂ ತೋಟಗಾರಿಕೆ ಇಲಾಖೆ ಇವರ ಸಹಯೋಗದಲ್ಲಿ ಜನವರಿ 4 ರಂದು ಬೆಳಿಗ್ಗೆ 10.30 ಗಂಟೆಗೆ “ಎ.ಆರ್.ಸಿ. ಆಲೂಗಡ್ಡೆ ಕ್ಷೇತ್ರೋತ್ಸವ”ವನ್ನು ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಶ್ವವಿದ್ಯಾಲಯ ಆವರಣ, ದೊಡ್ಡಬೆಟ್ಟಹಳ್ಳಿ ಬಸ್ ನಿಲ್ದಾಣದ ಎದುರು, ವಿದ್ಯಾರಣ್ಯಪುರ ಯಲಹಂಕ ರಸ್ತೆ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.
ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಉಪಸ್ಥಿತರಿರುವರು. ಈ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಸುಮಾರು 120ಕ್ಕೂ ಹೆಚ್ಚು ಆಲೂಗಡ್ಡೆ ಬೆಳೆಗಾರ ರೈತರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎ.ಆರ್.ಸಿ. ಆಲೂಗಡ್ಡೆಯಲ್ಲಿ ಉತ್ಪಾದನಾ ತಾಂತ್ರಿಕತೆ, ಸ್ಥಳೀಯವಾಗಿ ಬೀಜೋತ್ಪಾದನೆಯ ಅವಶ್ಯಕತೆ, ನರ್ಸರಿ ನಿರ್ವಹಣೆ ಮತ್ತು ನರ್ಸರಿಯಲ್ಲಿ ವಾಣಿಜ್ಯ ಅವಕಾಶಗಳು, ಎ.ಆರ್.ಸಿ. ಆಲೂಗಡ್ಡೆ ಕುರಿತಾದ ಪ್ರಯೋಗಗಳು ಮತ್ತು ಫಲಿತಾಂಶಗಳು, ತೋಟಗಾರಿಕೆ ಇಲಾಖೆಯಲ್ಲಿ ಎ.ಆರ್.ಸಿ. ಆಲೂಗಡ್ಡೆ ಉತ್ಪಾದನೆಗೆ ಪ್ರೋತ್ಸಾಹ ಯೋಜನೆಗಳ ಕುರಿತು ತಾಂತ್ರಿಕ ಗೋಷ್ಠಿಗಳನ್ನು ಹಾಗೂ ಎ.ಆರ್.ಸಿ. ಆಲೂಗಡ್ಡೆ ಬೆಳೆ ಪ್ರಯೋಗ ಕ್ಷೇತ್ರ ಮತ್ತು ಎ.ಆರ್.ಸಿ. ಆಲೂಗಡ್ಡೆ ನರ್ಸರಿ ಭೇಟಿ ಏರ್ಪಡಿಸಲಾಗಿದೆ ಎಂದು ಬೆಂಗಳೂರು ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೆಶಕರು, ಡಾ. ಎಸ್. ಎಲ್. ಜಗದೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಪಾನ್ ಭೂಕಂಪ : ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆ
ಜಪಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಭೂಕಂಪ ತೀವ್ರತೆಗೆ ಇದುವರೆಗೂ 62 ಜನರು ಸಾವನ್ನಪ್ಪಿದ್ದು, ಮಾರಣಹೋಮಕ್ಕೆ ಜಪಾನ್ ತತ್ತರಿಸಿದೆ. ಭೂಕಂಪದ ನಂತರ ಭೂಕುಸಿತಗಳು ಮತ್ತು ಭಾರೀ ಮಳೆಯಾಗುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಹೊನ್ನು ಮುಖ್ಯ ದ್ವೀಪದ ಇಶಿಕಾವಾ ಪ್ರಾಂತ್ಯದಲ್ಲಿ ಜನವರಿ 1 ರಂದು ಸಂಭವಿಸಿದ 7.5 ತೀವ್ರತೆಯ ಭೂಕಂಪ ಒಂದು ಮೀಟರ್ ಎತ್ತರದ ಸುನಾಮಿ ಅಲೆಗಳನ್ನು ಸೃಷ್ಟಿಸಿತು. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹುಟ್ಟುಹಾಕಿತು. ಪರಿಣಾಮವಾಗಿ ನೂರಾರು ಕಟ್ಟಡಗಳು ಧ್ವಂಸಗೊಂಡಿವೆ. ವಾಜಿಮಾ ಮತ್ತು ಸುಜು ಸೇರಿದಂತೆ ಹಲವಾರು ಪಟ್ಟಣಗಳಲ್ಲಿ ಮನೆಗಳನ್ನು ನೆಲಸಮವಾಗಿವೆ.
ಗುತ್ತಿಗೆ ಆಧಾರಿತ ತಾಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ
2023-24 ನೇ ಸಾಲಿನಲ್ಲಿ ಆತ್ಮ ಯೋಜನೆಯಡಿ ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಧಾರವಾಡ ಕಚೇರಿಯ ಅಧೀನ ಕಚೇರಿಗಳಲ್ಲಿ ಖಾಲಿ ಇರುವ ಗುತ್ತಿಗೆ ಆಧಾರಿತ ತಾಲೂಕು ತಾಂತ್ರಿಕ ವ್ಯವಸ್ಥಾಪಕರು ಒಂದು (1) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕೃಷಿ ಮತ್ತು ಕೃಷಿ ಸಂಬಂಧಿತ ವಿಜ್ಞಾನಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಮತ್ತು ಕನಿಷ್ಠ 2 ವರ್ಷದ ಸೇವಾ ಅನುಭವ ಹೊಂದಿರಬೇಕು. ಅಭ್ಯರ್ಥಿ ಆಯ್ಕೆಯನ್ನು ಜಿಲ್ಲಾ ಮಟ್ಟದ ನೇಮಕಾತಿ ಸಮಿತಿ ಮೂಲಕ ಮಾಡಲಾಗುತ್ತದೆ.
ಅಭ್ಯರ್ಥಿಗಳು ತಮ್ಮ ಛಾಯಾಚಿತ್ರ ಲಗತ್ತಿಸಿದ ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ, ಅನುಭವ ಪ್ರಮಾಣ ಪತ್ರ, ಕಂಪ್ಯೂಟರ್ ಜ್ಞಾನ ಹೊಂದಿದ ಪ್ರಮಾಣ ಪತ್ರ, ವೈದ್ಯಕೀಯ ಪ್ರಮಾಣ ಪತ್ರ, ಆಧಾರ್ ಝರಾಕ್ಸ್ ಪ್ರತಿ ಇತ್ಯಾದಿ ದೃಢೀಕೃತ ದಾಖಲಾತಿಗಳನ್ನು ಜನವರಿ 16, 2024 ರ ಸಂಜೆ 4:30 ಗಂಟೆಯೊಳಗಾಗಿ ಧಾರವಾಡ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ.
ಮೃತರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರಿಗೆ 2 ಲಕ್ಷ ರೂ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ.ಪರಿಹಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಘೋಷಿಸಿದ್ದಾರೆ. ಅಪಘಾತದ ಬಗ್ಗೆ ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಘಿ(ಎಕ್ಸ್) ನಲ್ಲಿ ಪೋಸ್ಟ್ ಮಾಡಿದ್ದು, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಸಂಭವಿಸಿದ ಬಸ್ ಅಪಘಾತ ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ಪ್ರಧಾನಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಪ್ರಧಾನಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ. ರಾಷ್ಟ್ರಪತಿ ದೌಪದಿ ಮುರ್ಮು ಅವರು ಪೋಸ್ಟ್ ಮಾಡಿ, ಅಸ್ಸಾಂನ ಗೋಲಾಘಾಟ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಲವರ ಸಾವು ಅತೀವ್ರ ದುಃಖವನ್ನು ತಂದಿದೆ ದುಃಖಿತ ಕುಟುಂಬಗಳಿಗೆ ಸಂತಾಪವನ್ನು ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.