ಬರದಿಂದ 5,11,208 ಎಕರೆ ತೋಟಗಾರಿಕೆ ಬೆಳೆಗೆ ಹಾನಿ, 30 ಲಕ್ಷ ರೈತರಿಗೆ ₹574 ಕೋಟಿ ಪರಿಹಾರ. “ರಾಜ್ಯದಲ್ಲಿ ತೀವ್ರ ಬರಗಾಲದಿಂದ 5,11,208 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎ೦ದು ಅಂದಾಜಿಸಲಾಗಿದ್ದು, ಬೆಳೆ ನಷ್ಟದಿಂದ ನೊಂದ ಪ್ರತಿ ರೈತರಿಗೆ ತಲಾ ಎರಡು ಸಾವಿರ ರೂ.ನಂತೆ 30,24,795 ರೈತರಿಗೆ 573.28 ಕೋಟಿ ರೂ. ಪರಿಹಾರ ನೀಡಲಾಗಿದೆ.” ಚಲುವರಾಯಸ್ವಾಮಿ, ಕೃಷಿ ಸಚಿವರು.
ಶೇಂಗಾ ಬೆಳೆಗೆ ತಗಲುವ ಕತ್ತುಕೊಳೆ ರೋಗದ
ಶೇಂಗಾ ಬೆಳೆಗೆ ತಗಲುವ ಕತ್ತುಕೊಳೆ ರೋಗದ ನಿರ್ವಹಣೆಯ ಕ್ರಮಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಅಗತ್ಯ ಮಾಹಿತಿ ನೀಡಿದ್ದಾರೆ. ಬೆಳೆಯ ಯಾವುದೇ ಹಂತದಲ್ಲಿ ನೆಲದ ಸಮಾನಾಂತರ ಕಾಂಡಕ್ಕೆ ಬಿಳಿ ಬಣ್ಣದ ಶಿಲೀಂಧ್ರದ ಸೋಂಕು ಕಂಡುಬರುವುದು. ರೋಗಪೀಡಿತ ಗಿಡ ಮೊದಲು ಗಿಡ್ಡದಾಗಿದ್ದು, ಹಳದಿ ಬಣ್ಣಕ್ಕೆ ತಿರುಗುತ್ತದೆ. ನಂತರ ಪೂರ್ತಿ ಗಿಡ ಒಣಗಿ ಸಾಯುವುದು.
ರೋಗ ಲಕ್ಷಣಗಳು ಕಾಯಿ ಹಾಗೂ ಕಾಯಿದೇಟಿಗೂ ಹರಡುವುದು, ಗಿಡಗಳನ್ನು ಕೀಳುವ ವೇಳೆ ಕಾಯಿಗಳು ಭೂಮಿಯಲ್ಲಿ ಉಳಿಯುವುವು. ಪ್ರತಿ ಕೆಜಿ ಬೀಜಕ್ಕೆ 2 ಗ್ರಾಂ ಕ್ಯಾಪ್ಟಾನ್ 80 ಡಬ್ಲೂ.ಪಿ ಅಥವಾ ಜೈರಾಮ್ 75 ಡಬ್ಲೂ.ಪಿ ಅಥವಾ ಟೈಕೋಡರ್ಮಾ 10 ಗ್ರಾಂ ಅಥವಾ 1 ಗ್ರಾಂ ಟೆಲ್ಯೂಕೊನಜೋಲ್ 2% ಡಿಎಸ್ ಶಿಲೀಂದ್ರ ನಾಶಕದಿಂದ ಬೀಜೋಪಚಾರ ಮಾಡಬೇಕು.
ರೋಗರಹಿತ ಬೀಜಗಳನ್ನು ಉಪಯೋಗಿಸಿ, ರೋಗವು ಹೆಚ್ಚು ಕಂಡುಬಂದ ಹೊಲವನ್ನು ಸಜ್ಜೆ, ಜೋಳ, ಅಥವಾ ಮೆಕ್ಕೆಜೋಳದಿಂದ ಬೆಳೆಪರಿವರ್ತನೆ ಮಾಡಬೇಕು. ಮಾಗಿ ಉಳುಮೆಯನ್ನು ಹೆಚ್ಚು ಆಳವಾಗಿ ಮಾಡಿ, ಮಣ್ಣಿಗೆ ಹೆಚ್ಚು ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ ಹಾಕಬೇಕು. ಶೇಂಗಾ ಅಥವಾ ಔಡಲ ಅಥವಾ ಬೇವಿನಹಿಂಡಿ ಎಕರೆಗೆ 200 ಕೆಜಿಯಂತೆ ಮಣ್ಣಿನಲ್ಲಿ ಬೆರೆಸಬೇಕು. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ದ್ರಾಕ್ಷಿಹಣ್ಣು ಕೊಲ್ಲೋತ್ತರ ನಿರ್ವಹಣೆ
ಈ ಭಾಗದಲ್ಲಿ ಉತ್ತಮ ಗುಣಮಟ್ಟದ ದ್ರಾಕ್ಷಿಯನ್ನು ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿದೆ. ಬೆಳೆದ ದ್ರಾಕ್ಷಿಗಳನ್ನು ರಫ್ತು ಮಾಡಲು ಉತ್ತಮ ಗುಣ ಕಾಯ್ದಕೊಳ್ಳಲು ಹಲವು ಕ್ರಮಗಳಿವೆ. ಈ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಸಲಹೆ ನೀಡಿದ್ದಾರೆ. ಗ್ರಾಹಕರ ಅದ್ಯತೆಗನುಸಾರ ತಳಿ ಆಯ್ಕೆ ಗೊಂಚಲಿನ ಆಕಾರ, ಗಾತ್ರ, ಬಣ್ಣ, ಮಾಗುವಿಕೆ, ರುಚಿಯನ್ನು ಕಾಯ್ದುಕೊಳ್ಳಬೇಕು. ದ್ರಾಕ್ಷಿಗೊಂಚಲು ಮತ್ತು ಅದರಲ್ಲಿನ ಹಣ್ಣುಗಳು ಯಾವುದೇ ಕೀಟ ಹಾಗೂ ರೋಗ ಬಾಧೆಗೆ ಒಳಗಾಗಿರಬಾರದು. ಗೊಂಚಲುಗಳಲ್ಲಿ ಮಣ್ಣಿನಾಂಶ, ಹೆಚ್ಚಿನ ತೇವಾಂಶ, ಕೊಳೆತ ಹಣ್ಣುಗಳು ಇರಬಾರದು. ಗೊಂಚಲುಗಳು ಉತ್ತಮ ಆಕಾರ ಹೊಂದಿದ್ದು, ಹಣ್ಣುಗಳು ಸಾಮಾನ್ಯ ಗಾತ್ರ ಹೊಂದಿರಬೇಕು.
ಸಾಮಾನ್ಯವಾಗಿ ಒಂದು ಪೆಟ್ಟಿಗೆಯಲ್ಲಿ 2-4 ಕೆಜಿ ಗೊಂಚಲಿನಂತೆ ಪ್ಯಾಕ್ ಮಾಡಿ ತುಂಬಬಹುದಾಗಿದೆ. ಅಂತಾರಾಷ್ಟ್ರೀಯ ಆರೋಗ್ಯ ಮತ್ತು ನೈರ್ಮಲ್ಯತೆ ಕಾಯ್ದೆಗೆ ಅನುಸಾರ ದ್ರಾಕ್ಷಿ ಹಣ್ಣಿನ ರಸ್ತಿಗೆ ಸೂಚಿಸಿದ ಎಲ್ಲ ಗುಣಮಟ್ಟ ಹೊಂದಿದ ಮತ್ತು ಕೀಟ ಹಾಗೂ ಸಸ್ಯ ರೋಗಗಳು ಇರದೇ ಇರುವ ಬಗ್ಗೆ ದೃಡೀಕರಿಸಲ್ಪಡುವ ಪ್ರಮಾಣ ಪತ್ರವನ್ನು ಭಾರತ ಸರ್ಕಾರದಿಂದ ಪಡೆದಿರಬೇಕು. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಜಾನುವಾರು ಪೋಷಣೆ
ತೀವ್ರ ಮಳೆಯ ಅಭಾವವಿರುವ ಹಿನ್ನೆಲೆಯಲ್ಲಿ ಮೇವಿನ ಕೊರತೆ ಉಂಟಾಗುವುದರಿಂದ ಜಾನುವಾರು ಸಾಕಾಣಿಕೆ ದುಸ್ತರವಾಗುತ್ತಿದೆ. ಈ ಸಂದರ್ಭದಲ್ಲಿ ಸಾಗುವಳಿ ಭೂಮಿ ಹಾಗೂ ಗೋಮಾಳುಗಳು ನಾಶವಾಗಿ ಮೇವಿನ ಕೊರತೆ ಸಂಭವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜಾನುವಾರು ಪಾಲನೆ-ಪೋಷಣೆ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಸಲಹೆ ನೀಡಿದ್ದಾರೆ.
ಮೇವಿನ ಲಭ್ಯತೆಗೆ ಅನುಗುಣವಾಗಿ ಜಾನುವಾರು ಸಂಖ್ಯೆಯನ್ನು ಮಿತಿಗೊಳಿಸಬೇಕು, ಖಾಲಿ ಇರುವ ಜಮೀನು, ಬಂಜರು ಭೂಮಿ, ಜವಳು, ಕೊರಕಲು ಭೂಮಿ, ಹೊಲದ ಬದು, ತೋಟಪಟ್ಟಿಗಳಲ್ಲಿ ಸುಧಾರಿತ ಹುಲ್ಲು ಹಾಗೂ ದ್ವಿದಳಧಾನ್ಯ ಮೇವುಗಳಿಂದ ಮತ್ತು ಮೇವಿನ ಗಿಡಗಳಿಂದ ಅಭಿವೃದ್ಧಿಪಡಿಸಬೇಕು. ಲಭ್ಯವಿರುವ ಮೇವನ್ನು ಯಂತ್ರದಿಂದ ಸಣ್ಣದಾಗಿ ಕತ್ತರಿಸಬೇಕು. ಇದರಿಂದ ಮೇವು ಹಾಳಾಗುವುದಿಲ್ಲ. ಹಸಿರು ಮೇವು ಹೇರಳವಾಗಿ ಲಭ್ಯವಿದ್ದಾಗ, ಅದನ್ನು ಕೆಡದಂತೆ ಒಣಹಸಿರು ಮೇವಾಗಿ ಅಥವಾ ರಸಮೇವಾಗಿ ಶೇಖರಿಸಿಡಬೇಕು. ಜಾನುವಾರು ಮೇವನ್ನು ಇಷ್ಟಪಟ್ಟು ತಿನ್ನುವ ಹಾಗೆ ಉಪ್ಪು, ಯೂರಿಯಾ, ಕಾಕಂಬಿ, ಅಡುಗೆ ಸೋಡಾ, ಸುಣ್ಣದ ದ್ರಾವಣದಿಂದ ರುಚಿಪಡಿಸಬೇಕು.
ಜಾನುವಾರು ಸಾಕಣೆ ಅಸಾಧ್ಯವಾದಾಗ ರೈತರು ಸರ್ಕಾರ, ಖಾಸಗಿ ಸಂಸ್ಥೆ ವ್ಯಕ್ತಿಗಳಿಂದ ನಡೆಸಲ್ಪಡುವ ಗೋರಕ್ಷಾ ಕೇಂದ್ರ ಅಥವಾ ಗೋಶಾಲೆಗಳಿಗೆ ಜಾನುವಾರು ಬಿಟ್ಟು ಬರುವುದರಿಂದ ಅವುಗಳ ರಕ್ಷಣೆ ಮತ್ತು ಪೋಷಣೆ ಮಾಡುವುದು ಸುಲಭವಾಗುತ್ತದೆ. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.