ಕರ್ನಾಟಕ ಸರ್ಕಾರ 2023-2024ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮಿಡ್ ಸೀಸನ್ ಅಡ್ವರ್ಸಿಟಿ ಇನ್ವೆಕ್ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯಲ್ಲಿ 13 ತಾಲೂಕಿನ ಮಳೆಯಾಶ್ರಿತ ತೊಗರಿಗೆ ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮಾ ನಷ್ಟದ ಪರಿಹಾರದಲ್ಲಿ 25% ಹಣವನ್ನು ರೈತರಿಗೆ ನೀಡಲು ಸರ್ಕಾರ ಆದೇಶ ಹೊರಡಿಸಲಾಗಿತ್ತು. ಅದರಂತೆ ಜಿಲ್ಲೆಯ ತೊಗರಿ ಬೆಳೆದ ರೈತರ ಖಾತೆಗೆ 85.50 ಕೋಟಿ ಬೆಳೆಗೆ ವಿಮೆ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ವಿಜಯಪುರ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನ್ ಲೈನ್ ನಲ್ಲಿ ವಂಚನೆ : ಇಬ್ಬರು ಮಹಿಳೆಯರಿಗೆ ಲಕ್ಷಾಂತರ ರೂ. ಮೋಸ
ಆನ್ ಲೈನ್ ನಲ್ಲಿ ಪಾರ್ಟ್ ಟೈಂ ಉದ್ಯೋಗದ ಹಗರಣದ ವಂಚನೆಗೆ ಬಿದ್ದು ರೂ. 4.69 ಲಕ್ಷ ಕಳೆದುಕೊಂಡಿರುವುದಾಗಿ ಗಂಗೊಳ್ಳಿಯ 30 ವರ್ಷದ ಮಹಿಳೆಯೊಬ್ಬರು ಹೇಳಿದ್ದಾರೆ. ಬೆಂಗಳೂರಿನ ಹೆಚ್ ಆರ್ ದಿವ್ಯಾ ಎಂದು ಹೆಸರು ಹೇಳಿಕೊಂಡ ಮಹಿಳೆಯೊಬ್ಬರು ವಾಟ್ಸಾಪ್ ನಲ್ಲಿ ಮೇಸೆಜ್ ಕಳುಹಿಸಿದ್ದು, ಪಾರ್ಟ್ ಟೈಂ ಉದ್ಯೋಗದ ಬಗ್ಗೆ ಮಾಹಿತಿ ನೀಡಿದ್ದಾರೆ.
ನಂತರ ಲಿಂಕ್ ಹಂಚಿಕೊಂಡಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಿದ್ದು, ಹಣ ಜಮೆ ಮಾಡಲು ತಿಳಿಸಿದ್ದಾರೆ. ಫೆಬ್ರವರಿ 3 ರಿಂದ 14ರವರೆಗೂ ರೂ. 5.26 ಲಕ್ಷ ಹಣ ವಂಚಿಸಿದ್ದು, ನಂತರ ರೂ. 57,201ಯನ್ನು ತನ್ನ ಖಾತೆಗೆ ವರ್ಗಾಯಿಸಿರುವುದಾಗಿ ಮಹಿಳೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ರೂ. 12. 85 ಲಕ್ಷ ಹಣ ಕಳೆದುಕೊಂಡಿರುವುದಾಗಿ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಮನೆಯಿಂದಲೇ ಕೆಲಸ ನೀಡುವ ಆಮಿಷವೊಡ್ಡಿದ ಅಪರಿಚಿತ ವ್ಯಕ್ತಿಯೊಬ್ಬ, ಆಕೆಯಿಂದ ಅಪರಿಚಿತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿಕೊಂಡಿದ್ದಾರೆ.
ಫೆಬ್ರವರಿ 8 ರಿಂದ ಫೆಬ್ರವರಿ 16ರವರೆಗೂ ಹಂತ ಹಂತವಾಗಿ ಮಹಿಳೆ ರೂ. 12.85 ಲಕ್ಷ ಹಣ ಕಳುಹಿಸಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಐಟಿ ಕಾಯ್ದೆ ಸೆಕ್ಷನ್ 66 (ಡಿ) ಅಡಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ವಿಕಲಚೇತನರ ಅಭಿವದ್ಧಿಗೆ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳಿಗೆ ಸಹಾಯ ಧನಕ್ಕೆ ಅರ್ಜಿ ಆಹ್ವಾನ
ಕೊಪ್ಪಳ ನಗರಸಭೆಯಿಂದ ನಗರದ ವಿಕಲಚೇತನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳಿಗೆ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2023-24ನೇ ಸಾಲಿನ ಶೇ.5ರ ಯೋಜನೆಯಡಿ ನಗರಸಭೆ ಅನುದಾನದಡಿಯಲ್ಲಿ ಶೇ. 50ರಷ್ಟು ವ್ಯಕ್ತಿಸಂಬಂಧಿತ ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಿಕಲಚೇತನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳಿಗೆ ಸಹಾಯ ಧನವಾಗಿ ರೂ. 50,000 ಗಳ ಅನುದಾನ ನೀಡಲಾಗುತ್ತಿದೆ.
ಅರ್ಜಿ ಸಲ್ಲಿಸುವ ವಿಕಲಚೇತನರ ಸಂಸ್ಥೆಯು ಕೊಪ್ಪಳ ನಗರದ ವ್ಯಾಪ್ತಿಯಲ್ಲಿ ಇರಬೇಕು. ವಿಕಲಚೇತನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅರ್ಹ ಸಂಘ ಸಂಸ್ಥೆಗಳು ತಮ್ಮ ಸಂಸ್ಥೆ ಪ್ರಮಾಣ ಪತ್ರ, ಸಂಸ್ಥೆಯ ಐದು ವರ್ಷಗಳ ವಾರ್ಷಿಕ ವರದಿ, ಸಂಸ್ಥೆಯ ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಪ್ರತಿಗಳನ್ನು ಲಗತ್ತಿಸಿ, ಮಾರ್ಚ್ 04ರ ಒಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಅವಧಿ ಮೀರಿ ಬಂದ ಹಾಗೂ ಅಪೂರ್ಣ ದಾಖಲಾತಿ ಲಗತ್ತಿಸಿದ ಅರ್ಜಿಗಳನ್ನು ಪರಿಗಣಿಸಿಲಾಗುವುದಿಲ್ಲ ಎಂದು ಕೊಪ್ಪಳ ನಗರಸಭೆಯ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ರಾಜ್ಯ ಕಾಂಗ್ರೆಸ್ ಸರಕಾರ ಎಸ್.ಸಿ./ಎಸ್.ಟಿ. ಸಮುದಾಯಕ್ಕೆ ಮೀಸಲಾದ ಎಸ್.ಇ.ಪಿ. ಟಿ.ಇ.ಪಿ. ಯೋಜನೆಯಲ್ಲಿನ ಅಂದಾಜು 11,600 ಕೋಟಿ ಅನುದಾನವನ್ನು ಕಡಿತ ಮಾಡಿ ಬೇರೆ ಯೋಜನೆಗಳಿಗೆ ಉಪಯೋಗಿಸಿ ಈ ಸಮುದಾಯಕ್ಕೆ ಅನ್ಯಾಯ ಮಾಡಿದ್ದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಎಸ್.ಸಿ. ಮತ್ತು ಎಸ್.ಟಿ. ಮೋರ್ಚಾ ವತಿಯಿಂದ ಪ್ರತಿಭಟನೆ ಶುಕ್ರವಾರ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಗರದ ಗಾಂಧಿ ಸರ್ಕಲ್‌ನಿಂದ ಪ್ರತಿಭಟನೆ ಹೊರಟು ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ರಾಜ್ಯ ಕಾಂಗ್ರೆಸ್ ಸರಕಾರದ ಬಿಟ್ಟಿ ಭಾಗ್ಯ ಯೋಜನೆಗಳಿಂದ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ ಪ್ರತಿ ವರ್ಷ 6 ಸಾವಿರ ರೂ. ರಾಜ್ಯ ಸರಕಾರದಿಂದ 4 ಸಾವಿರ ರೂ. ಸೇರಿ ಒಟ್ಟು 10 ಸಾವಿರ ದೊರೆಯುತ್ತಿತ್ತು.
ಅದೇ ರೀತಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ಜಾರಿಯಲ್ಲಿತ್ತು. ಇಂತಹ ಅನೇಕ ಜನಪರ ಯೋಜನೆಗಳನ್ನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ನಿಲ್ಲಿಸಿದೆ. ಈ ಸರಕಾರ ಬಂದು 9 ತಿಂಗಳು ಗತಿಸುತ್ತ ಬಂದರೂ ಈ ವರೆಗೆ ಹೊಸ ಯೋಜನೆಗಳ ಜಾರಿಗೆ ಮುಂದಾಗಿಲ್ಲ. ಅಭಿವೃದ್ಧಿ ಶೂನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.