ಪ್ರಿಯ ರೈತ ಬಾಂಧವರೇ,ಸಿರಿಧಾನ್ಯ ಬೆಳೆಗೆ ಒಂದು ಮಳೆ ಆದರೂ ಸಾಕು. ಎರಡು ಬಾರಿ ಗಳೆ ಹೊಡೆಯಬೇಕು. ಒಂದು ಬಾರಿ ಕುಂಟೆ ಹೊಡೆಯಬೇಕು. ಎರೆಹುಳು ಗೊಬ್ಬರ ನೀಡಿ ಒಮ್ಮೆ ಕಳೆ ತೆಗೆದರೆ ಸಾಕು ಸಿರಿಧಾನ್ಯ ಪೀಕು ಚೆನ್ನಾಗಿ ಬರುತ್ತದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಒಣ ಬೇಸಾಯದ ಭೂಮಿಯೇ ಹೆಚ್ಚು ಇದೆ. ಇಂಥ ಒಣ ಭೂಮಿಯಲ್ಲಿ ಭರಪೂರ ಸಿರಿಧಾನ್ಯ ಫಸಲು ಕೊಯ್ದು ಮಾಡುತ್ತಿದ್ದಾರೆ ರೈತ ಮಹಿಳೆ ಭಾರತಿ ಅಶೋಕ ಮೆಡೆದಾರ ಬಗ್ಗೆ ತಿಳಿಯೋಣ.
ಅವರು ಸಿರಿಧಾನ್ಯಗಳ ಮೂಲಕ ಜೀವನದ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಎರೆಹುಳು ಗೊಬ್ಬರ ತಯಾರಿಕೆ ಮಾಡುವುದು ಅವರ ಕೈಹಿಡಿದಿದೆ.ಅವರದು ಒಟ್ಟು 19 ಎಕರೆ ಹೊಲವಿದೆ. ಭಾರತಿ ಅವರು ಎರಡು ದಶಕದಿಂದ ಕೃಷಿ ಚಟುವಟಿಕೆಯಲ್ಲಿ ನಿರತವಾಗದ್ದು, ಹೊಲದಲ್ಲಿ ಸ್ವಂತ ದುಡಿಮೆ ಮಾಡುವರು. ಇದರಿಂದ ಕೂಲಿ ಅವಲಂಬನೆ ಕಡಿಮೆಯಾಗಿದೆ ಮತ್ತು ಬೇಸಾಯ ವೆಚ್ಚವೂ ತಗ್ಗಿದೆ. ಅವರು ಹೊಲದ ಕಾಳಜಿ- ಆರೋಗ್ಯ ಹೆಚ್ಚಿದೆ. 19 ಎಕರೆಯಲ್ಲಿ 6 ಎಕರೆಗೆ ನೀರಾವರಿ ಸೌಲಭ್ಯ ಇದೆ. ಮಿಕ್ಕ 13 ಎಕರೆ ಒಣ ಭೂಮಿ, 2 ಎಕರೆಯಲ್ಲಿ ಸಿರಿಧಾನ್ಯಗಳನ್ನು ಅವರು ಬೆಳೆಯುತ್ತಾರೆ. ಈ ಬೆಳೆಗೆ ಅತಿ ಬಲ ನೀಡುವುದು ಎರೆಹುಳು ಗೊಬ್ಬರ. ಅವರು ಹೊಲದಲ್ಲೇ ಎರೆಹುಳು ಗೊಬ್ಬರ ತಯಾರಿಸಿ ಬೆಳೆಗೆ ನೀಡುತ್ತಾರೆ. ಈ ಎರೆಹುಳು ಗೊಬ್ಬರದಿಂದ ಭರಪೂರ ಫಸಲು, ಕೈ ತುಂಬ ಆದಾಯ ಬರುತ್ತಿದೆ.ಅವರು ಸಿರಿಧಾನ್ಯ ಬೆಳೆಯಲು ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸುವುದಿಲ್ಲ. ಈ ಬೆಳೆಗೆ ರಾಸಾಯನಿಕ ಗೊಬ್ಬರದ ಅಗತ್ಯವೂ ಇಲ್ಲ ಎಂಬುದು ಅವರ ಅಭಿಮತ. ಹಳದಿ, ಬಿಳಿ, ಕರಿ ಹಾಗೂ ಕೆಂಪು ತಳಿಯ ನವಣೆ, ಕೊರಲೆ, ರಾಗಿ, ಸಜ್ಜೆ ಬಾರ್ಲಿ, ಸಾಮೆಯನ್ನು ತಮ್ಮ ಹೊಲದಲ್ಲಿ ಬೆಳೆದು ಲಾಭ ಪಡೆದಿದ್ದಾರೆ. ಜತೆಗೆ ಶೇಂಗಾ, ತೊಗರಿ, ಜೋಳ, ಗೋಧಿ, ಕಡಲೆ, ಗೋವಿನ ಜೋಳದ ಬೆಳೆಯೂ ಕೂಡ ಇದೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ ನವಣೆಗೆ 3.5 ರಿಂದ 4ಸಾವಿರ ರೂ. ದರ ಇದೆ. ಪಾಲಿಶ್ ಮಾಡಿದ ನವಣಕ್ಕಿಯನ್ನು ಕೆಜಿಗೆ 180 ರಿಂದ 200 ರೂ.ದರದಲ್ಲಿ ಕೊರಲೆ ಕೆಜಿಗೆ 220 ರೂ. ದರದಲ್ಲಿ ಮಾರಾಟ ಮಾಡಿ ಲಾಭ ಪಡೆದಿದ್ದಾರೆ. ವಿಜಯಪುರ ಹಾಗೂ ಪಕ್ಕದ ಸೊಲ್ಲಾಪುರ ಮುಖ್ಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಅವರು ಹಂಗಾಮಿನಲ್ಲಿ ಸಿರಿಧಾನ್ಯಗಳ ಬಿತ್ತನೆ ಬೀಜವನ್ನೂ ಮಾರಾಟ ಮಾಡುತ್ತೇವೆ. ಬಿತ್ತನೆ ಬೀಜಕ್ಕೆ ಹೆಚ್ಚಿನ ದರ ಸಿಗುತ್ತದೆ. ವಿಜಯಪುರ ಜಿಲ್ಲೆಯ ತುಂಬಾ ರೈತರು – ಸಿರಿಧಾನ್ಯಗಳ ಬೀಜವನ್ನು ಖರೀದಿಸುತ್ತಾರೆ.
ಇವರು ಎಕರೆಗೆ 10 ಕ್ವಿಂಟಲ್ ಇಳುವರಿ ಹೇಗೆ ಬೆಳೆಯುತ್ತಾರೆ ಎಂದು ತಿಳಿಯಿರಿ?
ಭಾರತಿ ಅವರು ಈಗ 5 ವರ್ಷಗಳಿಂದ ಸಿರಿಧಾನ್ಯ ಬೆಳೆಯುತ್ತಿದ್ದಾರೆ. ಆರಂಭದಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಬೀಜ ತಂದು ಬೇಸಾಯ ಆರಂಭಿಸಿದ್ದರು. ಮುಂಗಾರು ಹಂಗಾಮಿನ ಜೂನ್ ತಿಂಗಳಲ್ಲಿ ಬೀಜ ಬಿತ್ತನೆ ಮಾಡುತ್ತಾರೆ. ಬಿತ್ತನೆ ಮಾಡಿದ ಮೂರೂವರೆ ತಿಂಗಳಿಗೆ ಬೆಳೆ ಕಟಾವಿಗೆ ಬರುವುದು. 1 ಎಕರೆಗೆ ನವಣೆ 10 ಕ್ವಿಂಟಲ್ ಇಳುವರಿ ಬರುತ್ತದೆ. ಈಗ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‌ಗೆ 3.5 ರಿಂದ 4 ಸಾವಿರ ರೂ. ದರ ಇದೆ. ಪಾಲಿಶ್ ಮಾಡಿದ ನವಣಕ್ಕಿಯನ್ನು ಕೆಜಿಗೆ 80-100 ರೂ. ದರದಲ್ಲಿ ಮಾರಾಟ ಮಾಡುವರು. ಸಿರಿಧಾನ್ಯ ಹಿಟ್ಟು ತಯಾರಿಸಿಯೂ ಮಾರಾಟ ಮಾಡುವರು. ಬೆಳೆಗಳ ಮೌಲ್ಯವರ್ಧನೆ ಯಿಂದಲೂ ಉತ್ತಮ ಆದಾಯ ಸಿಗುತ್ತಿದೆ.
20 ಸಾವಿರ ಖರ್ಚು ಮಾಡಿದರೆ ಸಾಕು 2 ಲಕ್ಷ ಆದಾಯ:-
ಸಿರಿಧಾನ್ಯದ ಬೆಳೆಗೆ ಹೆಚ್ಚು ನೀರು ಬೇಕಿಲ್ಲ. ರಾಸಾಯನಿಕ ಗೊಬ್ಬರ ಹಾಕುವ ಅಗತ್ಯ ಇಲ್ಲ. 2 ಎಕರೆಯಲ್ಲಿ ಸಿರಿಧಾನ್ಯ ಬೇಸಾಯ ಮಾಡಲು 20 ಸಾವಿರ ರೂ. ಖರ್ಚು ಮಾಡುತ್ತಾರೆ. ಸಿರಿ ಧಾನ್ಯ ಮಾರಾಟದಿಂದ 2 ರಿಂದ 2.50 ಲಕ್ಷ ರೂ. ಆದಾಯ ಸಿಗುತ್ತದೆ. ನೀರಾವರಿ ಸೌಲಭ್ಯ ಇಲ್ಲದ ಹೊಲದಲ್ಲಿ ಇನ್ನಿತರ ಬೆಳೆಗಿಂತ ಸಿರಿಧಾನ್ಯಗಳ ಉತ್ತಮವಾಗಿದೆ. ಆರೋಗ್ಯಕ್ಕೂ ಸಿರಿಧಾನ್ಯ ಆಹಾರ ಉತ್ತಮ. ಭಾರತಿ ಅವರು 2 ತೊಟ್ಟಿಯಲ್ಲಿ ಎರೆಹುಳು ಗೊಬ್ಬರ ತಯಾರಿಸುತ್ತಾರೆ. ತಮ್ಮ ಹೊಲದ ಬೆಳೆಗಳಿಗೆ ನೀಡಿ ಹೆಚ್ಚಿನದ್ದನ್ನು ಮಾರಾಟ ಮಾಡುವರು. ಬಾಳೆ, ಸೀತಾಫಲ, ನೇರಳೆ, ತೆಂಗು, ಪೇರಲ ಹಣ್ಣಿನ ಗಿಡಗಳನ್ನು ಬೆಳೆಸುತ್ತಿದ್ದಾರೆ. 5 ಎಮ್ಮೆ, 6 ಕುರಿ ಸಾಕಾಣಿಕೆ ಮಾಡುವರು.