ಪ್ರಿಯ ರೈತ ಬಾಂಧವರೇ,
ಸಮಗ್ರ ಕೃಷಿ ಮಾಡಿ ಯಶಸ್ಸು ಕಂಡ ರೈತನ ಕಥೆ ಇದು.
ಶ್ರೀ ಬಸಯ್ಯಾ ಉಳವಯ್ಯಾ ಮಂಠಯ್ಯನವರ ಹುಬ್ಬಳ್ಳಿ ತಾಲ್ಲೂಕಿನ ಅಗಡಿ ಗ್ರಾಮದ ಪ್ರಗತಿಪರ ರೈತರಾಗಿದ್ದು 15 ಎಕರೆ ಜಮೀನು ಹೊಂದಿದ್ದಾರೆ. ಹತ್ತನೆ ತರಗತಿಯಲ್ಲಿ ಓದುತ್ತಿದ್ದ ಬಸಯ್ಯಾ ಇವರ ಮನೆಯ ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದಾ ಅನಿವಾರ್ಯವಾಗಿ ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಹುಬ್ಬಳ್ಳಿಯಲ್ಲಿ ಗಾರೆ ಕೆಲಸಕ್ಕೆ ಹೊರಟರು. ಎರಡು ವರುಷ ಹೀಗೆ ಹೊರಗೆ ದುಡಿದು ಬೇಸತ್ತು ಕೃಷಿಯತ್ತ ಮುಖಮಾಡಿದರು. ಶ್ರಮದಿಂದ ನಮ್ಮ ಜಮೀನಿನಲ್ಲಿಯೇ ದುಡಿದರೆ ಭೂಮಿತಾಯಿ ಕೈ ಬಿಡಿವುದಿಲ್ಲ ಎಂಬ ಅಚಲ ವಿಶ್ವಾಸದಿಂದ ಮೊದಲಿಗೆ ಎರಡು ಎಕರೆ ಜಮೀನನ್ನು ಬಡ್ಡಿಯಿಂದ ಬಿಡಿಸಿಕೊಂಡರು. ಆ ಜಮೀನಿನಲ್ಲಿ ಮೊದಲಿಗೆ ಕೃಷಿ ಹೊಂಡ ನಿರ್ಮಿಸಿದರು, ಜಮೀನಿನಲ್ಲಿ ಸೋಯಾಬಿನ್ ಬಿತ್ತಿದರು. ಇವರ ಊರಿನ ಒಬ್ಬ ರೈತರು ಬೀಜೋತ್ಪಾದನೆ ಮಾಡಿ ಆ ಬೀಜಗಳನ್ನು ಕೃಷಿ ವಿಶ್ವವಿದ್ಯಾಲಯಕ್ಕೆ ಮಾರಾಟ ಮಾಡುತ್ತಿದ್ದರು. ಬಸಯ್ಯಾ ತಾವು ಕೂಡ ಬಿಜೋತ್ಪಾದನೆ ಮಾಡಬೇಕು ಎಂಬ ಆಸೆಯಿಂದ ಕೃಷಿ ವಿಶ್ವವಿದ್ಯಾಲಯಕ್ಕೆ ಬೇಟಿ ನೀಡಿದರು ಆಗ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಲಹೆಯಂತೆ ಹಿಂಗಾರಿಯಲ್ಲಿ ಸಾವೆ ಬಿತ್ತಿದರು. ಪ್ರತಿ ಎಕರೆಗೆ 10 ಕ್ವಿಂಟಲ್ ಇಳುವರಿ ತೆಗೆದು ಊರಿನ ಜನರೆಲ್ಲಾ ಅಚ್ಚರಿಗೊಳ್ಳುವಂತೆ ಮಾಡಿದರು. ಬಸಯ್ಯಾ ಅವರಿಗೆ ಕೃಷಿಯ ಮೇಲಿದ್ದ ಅವರ ಅಪಾರ ನಂಬಿಕೆ ಅವರನ್ನು ಕೈ ಬಿಡಲಿಲ್ಲ ಪ್ರತಿ ವರುಷ ಮುಂಗಾರಿನಲ್ಲಿ ಸೋಯಾಬಿನ್ ಮತ್ತು ಹಿಂಗಾರಿಯಲ್ಲಿ ಸಾವೆ, ನವಣೆ ಬೆಳೆದು ಹೆಚ್ಚು ಇಳುವರಿ ತೆಗೆದು ಲಾಭ ಪಡೆದುಕೊಂಡು ಬಡ್ಡಿಯಲ್ಲಿದ್ದ ಉಳಿದ 13 ಎಕರೆ ಜಮೀನನ್ನು ಬಿಡಿಸಿಕೊಂಡರು. ಪ್ರಸ್ತುತ ಇವರು ಆರು ಎಕರೆ ಜಮೀನಿನಲ್ಲಿ ಕಬ್ಬಿನ ಜೊತಗೆ ಅಲಸಂದೆ, ಉದ್ದು ಬೆಳೆಯುತ್ತಿದ್ದು, ಉಳಿದ ಜಮೀನಿನಲ್ಲಿ ಸೋಯಾ, ನವಣೆ, ಚಿಯಾ ಬೀಜಗಳು, ರೇಷ್ಮೆ ಬೆಳೆಯುವುದರ ಜೊತೆಗೆ ಮಿಶ್ರ ಮೀನು ಸಾಕಾಣಿಕೆಯನ್ನೂ ಮಾಡುತ್ತಾರೆ. ಇವರು ತಮ್ಮ ಉತ್ಪನ್ನಗಳಿಗೆ ಯಾವುದೇ ರಾಸಾಯನಿಕ ಔಷಧಿಗಳನ್ನು ಸಿಂಪರಣೆ ಮಾಡುವದಿಲ್ಲ, ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ, ಪಂಚಗವ್ಯ, ಬೀಜಾಮೃತ, ಜೀವಾಮೃತ ತಯಾರಿಸಿ ಸಿಂಪರಣೆ ಮಾಡುತ್ತಾರೆ ಹಾಗಾಗಿ ಇವರು “ಸಾವಯವ ಬೆಳೆಗಳ ಉತ್ಪಾದಕರ ಸರ್ಟಿಫೀಕೇಟ್ ಹೊಂದಿದ್ದಾರೆ. ಸಾವಯವ ಗೊಬ್ಬರ ತಯಾರಿಸುವುದಕ್ಕಾಗಿ ಇವರು ಒಂದು ಜವಾರಿ ಮತ್ತು ಎರಡು ಜರ್ಸಿ ಆಕಳನ್ನು ಸಾಕಿದ್ದಾರೆ ಇದರಿಂದ ಪ್ರತಿ ದಿನ 15-18 ಲೀ ಹಾಲನ್ನು ಮಾರಾಟ ಮಾಡುತ್ತಾರೆ.
ಸ್ಪೂರ್ತಿ ಏನು?
ದೂರದರ್ಶನದಲ್ಲಿ ಪ್ರಸಾರವಾಗುವ ಅನ್ನದಾತ ಕಾಠ್ಯಕ್ರಮದಲ್ಲಿ ಚಿಯಾ ಬೀಜಗಳ ಬಗ್ಗೆ ಮಾಹಿತಿ ನೋಡಿ ತಾವೂ ಬೆಳೆಯಬೇಕೆಂದು ಮೊಬೈಲಿನ ಯುವ್ ಟ್ಯೂಬ್ ನಲ್ಲಿ ಚೀಯಾ ಬೀಜಗಳ ಬಗ್ಗೆ ಮಾಹಿತಿ ತಿಳಿದುಕೊಂಡರು ಚಿಯಾ ಧಾನ್ಯದ ಮೂಲ ಮೆಕ್ಸಿಕನ್ ಮತ್ತು ದಕ್ಷಿಣ ಅಮೇರಿಕಾ, ಇ೦ದು ಜಗತ್ತಿನೆಲ್ಲಡೆ ಇದರ ಖ್ಯಾತಿ ಹರಡಿದೆ. ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದ್ದು, ಕೆಲವು ರೋಗಗಳಿಗೆ ರಾಮಬಾಣವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಇದರ ಬೆಲೆ ಪ್ರತಿ ಕಿ.ಗ್ರಾಂ 1000 ರೂ. ಇದೆ. ಇವುಗಳ ಬೇಸಾಯಕ್ಕೆ ಹೆಚ್ಚು ಫಲವತ್ತಾದ ಭೂಮಿ ಬೇಕಿಲ್ಲ ಹಾಗೂ ಬರ ಪರಸ್ಥಿತಿಯಲ್ಲೂ ಕೂಡ ಬೆಳೆಯುವುದರಿಂದ ಮಳೆಯಾಶ್ರಿತ ರೈತರಿಗೂ ಕೂಡ ವರವಾಗಬಲ್ಲವು. ಇದೊಂದು ಗಿಡಮೂಲಿಕೆ ಬೆಳೆಯಾಗಿದ್ದು ಹೆಚ್ಚು ನಾರಿನಾಂಶವನ್ನು ಹೊಂದಿದೆ. ಬಿತ್ತಿದ 85-90 ದಿನಗಳಲ್ಲಿ ಬೆಳೆ ಕಟಾವಿಗೆ ಸಿದ್ಧವಾಗಿ ಪ್ರತಿ ಎಕರೆಗೆ 3.5-4 ಕ್ವಿಂಟಲ್ ಇಳುವರಿಯನ್ನು ಕೊಡುತ್ತದೆ. ಮುಂಗಾರು ಮತ್ತು ಹಿಂಗಾರಿನಲ್ಲಿ ಬೇಸಾಯ ಕೈ ಕೊಳ್ಳಬಹುದು. ಕಡಿಮೆ ನೀರಿನಲ್ಲಿ ಹುಲುಸಾಗಿ ಬೆಳೆಯುವ ಶಕ್ತಿ ಇದೆ. ಈ ಎಲ್ಲ ವಿಷಯಗಳನ್ನು ಅರಿತು ಇವರ ಚಿಯಾ ಬೆಳೆಯಲು ನಿರ್ಧಸಿರಿದರು. ತಾವು ಚಿಯಾ ಬೀಜಗಳನ್ನು ಬೆಳೆಯಬೇಕೆಂಬ ಹಂಬಲದಿಂದ ಮೈಸೂರಿನಿಂದ ಪ್ರತಿ ಕಿ. ಗ್ರಾಂ ಗೆ ರೂ. 500 ರಂತೆ ಒಂದು ಕಿ. ಗ್ರಾಂ ಚಿಯಾ ಬೀಜಗಳನ್ನು ತರಸಿ ಒಂದು ಎಕರೆ ಭೂಮಿಯಲ್ಲಿ ಬಿತ್ತಿದರು ಆದರೆ ಮಳೆಯ ಅಭಾವದಿಂದ ಆ ವರುಷ ಫಸಲು ಚೆನ್ನಾಗಿ ಬರಲಿಲ್ಲ ಆದರೂ ಅವರು ಛಲ ಬಿಡದೆ ಮತ್ತೆ ಬೀಜಗಳನ್ನು ತರಸಿ ಬಿತ್ತನೆ ಮಾಡಿದರು, ವರುಷ ಎಕರೆಗೆ ಮೂರು ಕ್ವಿಂಟಲ್ ಚಿಯಾ ಬೀಜಗಳನ್ನು ಬೆಳೆದರು ಆದರೆ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಕೇವಲ ಎಂಟರಿಂದ ಹತ್ತು ಸಾವಿರ ದರ ಕೇಳಿದ್ದರಿಂದ ಚಿಯಾ ಬೀಜಗಳ ಮಹತ್ವ ತಿಳಿದಿದ್ದ ಬಸಯ್ಯಾ ಅವರು ಬೀಜಗಳನ್ನು ಮಾರಾಟ ಮಾಡದೆ ಬೀಜಗಳನ್ನು ಚೆನ್ನಾಗಿ ಶುಚಿಗೊಳಿಸಿ ಅರ್ಧ ಕಿ.ಗ್ರಾಂ ಮತ್ತು ಒಂದು ಕಿ. ಗ್ರಾಂ ಪೊಟ್ಟಣಗಳನ್ನು ಮಾಡಿ ತಾವೇ ಸ್ವತಃ ಮಾರಾಟ ಮಾಡಲು ಕೃಷಿ ವಿಶ್ವವಿದ್ಯಾಲಯಕ್ಕೆ ಬಂದು ತಮಗೆ ಪರಿಚಯವಿದ್ದ ಕಡೆಗೆಲ್ಲಾ ಹೋಗಿ ಪ್ರತಿ ಕಿ. ಗ್ರಾಂ ಗೆ ರೂ. 350 ನಂತೆ ಮಾರಾಟ ಮಾಡಿದರು ಹೀಗೆ ಒಬ್ಬರಿಂದ ಒಬ್ಬರಿಗೆ ಪರಿಚಯವಾಗಿ ಧಾರವಾಡದಲ್ಲಿರುವ ಎಲ್ಲಾ ಸರಕಾರಿ ಕಛೇರಿಗಳಲ್ಲಿ ಮಾರಾಟ ಮಾಡಿ ಹೆಚ್ಚು ಆದಾಯ ಪಡೆದರು. ಚಿಯಾ ಬೀಜಗಳ ಬೇಡಿಕೆ ಹೆಚ್ಚಾಗಿದ್ದು ಪೋನಿನ ಮುಖಾಂತರ ಚಯಾಬೀಜಗಳ ಆರ್ಡರ ತೆಗೆದುಕೊಂಡು ಅವರಿಗೆ ತಲುಪಿಸುತ್ತಾರೆ.
ಶ್ರೀ ಬಸಯ್ಯಾ ಇಂದು ತಂಬಾ ಸಂತೋಷದಿಂದ ಹೇಳುತ್ತಾರೆ, ದಿನಗೂಲಿ ಕೆಲಸ ಮಾಡಿ ದಿನಕ್ಕೆ ರೂ. 350-400 ಸಂಪಾದಿಸುತ್ತಿದ್ದ ನಾನು ಇಂದು ಭೂಮಿ ತಾಯಿಯ ಆಶೀರ್ವಾದದಿಂದ ಒಂದು ವರುಷಕ್ಕೆ 15 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದೇನೆ. ಇದರಲ್ಲಿ ಖರ್ಚೆಲ್ಲಾ ಸೇರಿ ಆರು ಲಕ್ಷ ರೂಪಾಯಿಗಳನ್ನು ತೆಗೆದರು ಒಂಭತ್ತು ಲಕ್ಷ ರೂ. ನಿವ್ವಳ ಲಾಭ ಎಂದು ತಿಳಿಸುತ್ತಾರೆ. ಇವರಿಗೆ ಅನೇಕ ಪುರಸ್ಕಾರಗಳು ದೊರತಿವೆ, 2019 ರಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ ಹಾಗೂ ರೇಷ್ಮೆ ಇಲಾಖೆ ವತಿಯಿಂದ 2019ರಲ್ಲಿ ಉತ್ತಮ ರೇಷ್ಮೆ ಫಸಲಿಗಾಗಿ ಮುಖ್ಯಮಂತ್ರಿಗಳು ಇವರಿಗೆ ರೂ. 25,000 ಪ್ರೋತ್ಸಾಹ ಧನ ನೀಡಿ ಗೌರವಿಸಿದ್ದಾರೆ. ಬಸಯ್ಯಾ ತುಂಬಾ ಶ್ರಮ ಜೀವಿ ಹೊಲದಲ್ಲಿ ಎನೇ ಕೆಲಸಗಳಿದ್ದರೂ ಖುದ್ದಾಗಿ ತಾವೇ ಮಾಡುತ್ತಾರೆ, ಅಗತ್ಯವಿದ್ದಾಗ ಮಾತ್ರ ಆಳುಗಳನ್ನು ನೇಮಕ ಮಾಡಿಕೊಳ್ಳುತ್ತಾರೆ ಇದರ ಜೊತೆಗೆ ಹಾಲನ್ನು ಕರೆದು ತಾವೇ ಡೈರಿಗೆ ಹಾಕಿ ಬರುತ್ತಾರೆ ಇವರ ಈ ಎಲ್ಲಾ ಕೆಲಸಗಳಲ್ಲಿ ಅವರ ಹೆಂಡತಿ ಮತ್ತು ತಾಯಿ ಸಹಾಯ ಹಸ್ತ ಇದ್ದೇ ಇರುತ್ತದೆ. “ಕೈ ಕೆಸರಾದರೆ ಬಾಯಿ ಮೊಸರು” ಎಂಬ ನಾಣ್ಣುಡಿಯಂತೆ ಕಷ್ಟಪಟ್ಟು ದುಡಿದರೆ ಪ್ರತಿಫಲ ದೊರಕುವುದು ಖಚಿತ, ಆದರೆ ತಾಳ್ಮೆ ಅವಶ್ಯಕ ಎಂಬುದು ಇವರ ಅಭಿಪ್ರಾಯ. ಇವರು ಬೆಳೆದ ಸಾವಯವ ಉತ್ಪನ್ನಗಳಿಗೆ ಅಪಾರ ಬೇಡಿಕೆಯಿದ್ದು ಗ್ರಾಹಕರು ಇವರ ಹೊಲಕ್ಕೆ ಬಂದು ಉತ್ಪನ್ನಗಳನ್ನು ಖರೀದಿಸುತ್ತಾರೆ.ಅಲ್ಲದೆ ಇವರು ಸಹ ಖುದ್ದಾಗಿ ವಿವಿಧ ಗ್ರಾಹಕರಿಗೆ, ಕೃಷಿ ವಿಶ್ವವಿದ್ಯಾಲಯದ ಕಛೇರಿಗಳಿಗೆ ಹೋಗಿ ಮಾರಾಟ ಮಾಡುತ್ತಾರೆ. ಇವರು ಇಂದಿನ ಯುವ ಕೃಷಿಕರಿಗೆ ಮಾದರಿಯಾಗಿದ್ದಾರೆ. ಸದಾಕಾಲ ಕೃಯಾಶೀಲರಾಗಿರುವ ಶ್ರೀ ಬಸಯ್ಯಾ ಕೃಷಿಗೆ ಸಂಭಂದಿಸಿದ ಅಧ್ಯಯನದಲ್ಲಿ ನಿರತರಾಗಿ ಹೊಸ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮುಕ್ತ ಮನಸ್ಸನ್ನು ಹೊಂದಿದ್ದು, ಗ್ರಾಮದ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ರೈತರಿಗೆ ಮಾರ್ಗದರ್ಶಕರಾಗಿದ್ದಾರೆ. ಕೃಷಿಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಇವರದಾಗಲಿ ಎನ್ನುವದು ನಮ್ಮಾ.
ನಾಟಿ ಕೋಳಿ ಸಾಕಾಣಿಕೆಯಲ್ಲಿ ಯಶಸ್ಸು ಕಂಡ ರೈತ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದ ಶ್ರೀ. ಬಸವರಾಜ ಹನುಮಂತಪ್ಪ ಕೊಗಲೇರ್‌ರವರು ಸುಮಾರು ಒಂದು ದಶಕದಿಂದ ನಾಟಿ ಕೋಳಿ ಸಾಕಣೆಯಲ್ಲಿ ತೊಡಗಿದ್ದಾರೆ. ಬಸವರಾಜ ಅವರು ಓದಿದ್ದು ಪಿ.ಯು.ಸಿ ಇವರು ಮೂಲತಃ – ಕೃಷಿ ಕುಟುಂಬದವರಾಗಿದ್ದ ಬಸವರಾಜ ತಮ್ಮ ಹೊಲದ ಕೇವಲ ಒಂದು ಎಕರೆ 27 ಗುಂಟೆ ಜಾಗದಲ್ಲಿ ಲಕ್ಷರೂ ಖರ್ಚು ಮಾಡಿ ಕೋಳಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಪ್ರಾರಂಭದಲ್ಲಿ 10 ಸಾವಿರ ರೂ. ಗಳಿಗೆ ಸುಮಾರು 100 ನಾಟಿ ಮರಿಗಳನ್ನು ತಂದು ನಾಟಿ ಕೋಳಿ ಸಾಕಾಣಿಕೆ ಪ್ರಾರಂಭಿಸಿದರು. ಪ್ರಾರಂಭದಲ್ಲಿ ಅನುಭವ, ಮಾಹಿತಿ ಕೊರತೆಯಿಂದ ಪೆಟ್ಟು ತಿಂದರೂ ತಮ್ಮ ಅಧ್ಯಯನ, ಉತ್ಸಾಹ, ಶ್ರಮದಿಂದ ಬೇಗನೆ ಚೇತರಿಸಿಕೊಂಡರು. ಸುತ್ತಮುತ್ತ ಪೌಲ್ಟಿಫಾರಂಗಳೇ ಹೆಚ್ಚು ಜವಾರಿ ಕೋಳಿಗಳನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಸಾಕುವುದಿಲ್ಲ. ಸಹಜವಾಗಿ ಈ ಕೋಳಿಗಳಿಗೆ ಬೇಡಿಕೆ ಹೆಚ್ಚಿದೆ. ಹಬ್ಬಗಳಲ್ಲಿ ಅದರಲ್ಲೂ ವಿಶೇಷವಾಗಿ ಬ್ಯಾಟೆ, ಕರಿ ದಿನಗಳಲ್ಲಿ – ಸಿಕ್ಕಾಪಟ್ಟೆ ಬೇಡಿಕೆ. ಇಂತಹ ಸಮಯಕ್ಕೆ ಸರಿಯಾಗಿ ಕೋಳಿಗಳು ಕೈಗೆ ಬರುವಂತೆ ಬಸವರಾಜ ಪ್ಲಾನ್ ಮಾಡಿ ಕೋಳಿ ಸಾಕುತ್ತಾರೆ. ಒಂದು ವರ್ಷದಲ್ಲಿ ಸುಮಾರು 350-400 ಕೋಳಿಗಳನ್ನು ಸಾಕಾಣಿಕೆ ಮಾಡತೊಡಗಿದರು. ನಾಟಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚು ಇರುವುದರಿಂದ ಒಂದು ಮೊಟ್ಟೆಗೆ ರೂ. 10-12 ವರೆಗೆ ಮಾರಾಟ ಮಾಡುತ್ತಾರೆ. ದಿನಕ್ಕೆ ಸುಮಾರು 40-50 ಮೊಟ್ಟೆ ಮಾರಾಟ ಮಾಡುತ್ತಾರೆ. ಗಿರಾಕಿಗಳನ್ನು ಹುಡುಕಿಕೊಂಡು ಊರೂರು ಅಲೆಯುವುದೂ ಇಲ್ಲ ಸುತ್ತಲಿನ 25-30 ಹಳ್ಳಿಗಳ ಜನರೇ ಇವರ ಫಾರಂಗೆ ಬಂದು ಕೊಂಡು ಒಯ್ಯುತ್ತಾರೆ. ಕೋಳಿ ಮರಿಗಳಿಗೆ ಆರಂಭದ ಒಂದೂವರೆ ತಿಂಗಳು ಮಾತ್ರ ಕಂಪನಿ ಫುಡ್ ನೀಡುತ್ತಾರೆ. ನಂತರ ನಾವು ವೇಸ್ಟ್ ಎನ್ನುವ ಕೊಳೆತ ಕಾಯಿಪಲ್ಲೆಗಳೇ ಈ ಕೋಳಿಗಳಿಗೆ – ಬೆಸ್ಟ್ ಫುಡ್. ಇನ್ನು ಆಯಾ ಸೀಜನ್‌ನಲ್ಲಿ ಸೋವಿ ಸಿಗುವ ತರಕಾರಿಗಳನ್ನು ಕೊಂಡು ತಂದು ಹಾಕುತ್ತಾರೆ. ತಮ್ಮ ಹೊಲದಲ್ಲೇ ಬೆಳೆಯುವ ಮೆಕ್ಕೆಜೋಳ, ಜೋಳ, ಗೋಧಿ ಆದರೊಟ್ಟಿಗೆ ಹಿಂಡಿ ಬೆರೆಸಿ ಕೊಡುತ್ತಾರೆ. ಅದು ಬಿಟ್ಟರೆ ದಿನದಲ್ಲಿ ಕೋಳಿಗಳನ್ನು ಹೊರಗೆ ಮೇಯಲು ಬಿಡುತ್ತಾರೆ. ಈ ಕಾರಣಗಳಿಂದ ಮಿತ ಸಾಕಾಣಿಕೆ ವೆಚ್ಚ ಶ್ರಮದಲ್ಲಿ ಗರಿಷ್ಠ ಆದಾಯ ಗಳಿಸುತ್ತಿದ್ದಾರೆ. ನಂತರ ಬಸವರಾಜು ರವರು ಮೊಟ್ಟೆಯಿಂದ ಮರಿ ಮಾಡಲು ಪ್ರಾರಂಭಿಸಿದರು. ನೈಸರ್ಗಿಕ ಕಾವು ಸಮಯದಲ್ಲಿ ಆರಂಭದಲ್ಲಿ 4-5 ಮರಿಗಳು ಮೊಟ್ಟೆಯೊಡೆದ ತಕ್ಷಣ ತಾಯಿ ಕೋಳಿ ಉಳಿದ ಮೊಟ್ಟೆಗಳಿಗೆ ನೈಸರ್ಗಿಕ ಕಾವು ಕೊಡುವುದನ್ನು ನಿಲ್ಲಿಸುತ್ತದೆ. ಅವರು ಕೋಳಿ ಮೊಟ್ಟೆ ಮೊಟ್ಟೆಯೊಡೆಯುವ ಶೇಕಡಾವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಕೋಳಿ ಕೋಳಿಗಳು ಎಲ್ಲಾ ಮೊಟ್ಟೆಗಳನ್ನು ಮರಿ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಸಮಸ್ಯೆಗಳು ಅವನನ್ನು ಕೋಳಿ ಮೊಟ್ಟೆಯ ಇನ್ಯುಬೇಟರ್ ಮಾಡಲು ಪ್ರಚೋದಿಸಿತು. ಅವರು ಸಾಮಾಜಿಕ ಮಾಧ್ಯಮದಲ್ಲಿ ಮೊಟ್ಟೆಯ ಇನ್ಯುಬೇಟರ್ನ ಕೆಲವು ವೀಡಿಯೊಗಳನ್ನು ನೋಡಿದರು, ಒಂದು ಕಲ್ಪನೆಯನ್ನು ಪಡೆದರು ಮತ್ತು ಇನ್ಯುಬೇಟರ್ ನಿರ್ಮಾಣಕ್ಕೆ ಬಳಸಬಹುದಾದ ಕೆಲವು ಸ್ಥಳೀಯ ವಸ್ತುಗಳನ್ನು ಸಂಗ್ರಹಿಸಿಹಳೆಯ ಮರದ ಟೇಬಲ್ ಅನ್ನು ಇನ್ನು ಬೇಟರ್ನ ದೇಹವಾಗಿ ಬಳಸಿದರು. ತಾಪಮಾನ ಮತ್ತು ಆದ್ರತೆಯನ್ನು ಕಾಪಾಡಿಕೊಳ್ಳಲು 60 ವ್ಯಾಟ್ ಬಲ್ಬಗಳನ್ನು ಬಳಸಿದರು. ನೀರನ್ನು ಹೊಂದಿರುವ ಗಾಜಿನ ಪೆಟ್ಟಿಗೆಯನ್ನು ಬಳಸಿ ಮತ್ತು ವಿದ್ಯುತ್‌ಗೆ ಸಂಪರ್ಕ ಹೊಂದಿದ ಎರಡು ಬೇಡಗಳು ನೀರನ್ನು ಬಿಸಿಮಾಡುವ ಮತ್ತು ಆವಿಯಾಗಿಸುವ ಮತ್ತು ತೇವಾಂಶವನ್ನು ಕಾಪಾಡಿಕೊಳ್ಳುವ ರೀತಿಯಲ್ಲಿ ತಯಾರಿಸಿದರು. ತಾಪಮಾನ ಮತ್ತು ತೇವಾಂಶ ಎರಡನ್ನೂ ಸೂಚಿಸುವ ಸಣ್ಣ ನಿಯಂತ್ರಕ ಯಂತ್ರವನ್ನು ಖರೀದಿಸಿದರು ಮತ್ತು ಮೊಟ್ಟೆಗಳನ್ನು ಹಿಡಿದಿಡಲು ಮರಳು ಮತ್ತು ಪ್ಲಾಸ್ಟಿಕ್ ಪೈಪ್‌ಗಳನ್ನು ಬಳಸಿದರು. ಬಾಗಿಲು ಸೇರಿದಂತೆ ಇನ್ಯುಬೇಟರ್ ಒಳಗೆ ಥರ್ಮಾಕೋಲ್ ಅನ್ನು ಬಳಸಿದರು.
ಪ್ರಕ್ರಿಯೆ ಏನು ?
ಈ ಇನ್ನು ಬೇಟರ್ ಯಂತ್ರವನ್ನು ಬಳಸಿಕೊಂಡು ಅವರು 80% ಮೊಟ್ಟೆಯಿಡುವ ಸಾಮರ್ಥ್ಯವನ್ನು ಪಡೆಯುತ್ತಿದ್ದಾರೆ.ಎಂದು ಮನದಾಳದ ಮಾತು ಹೇಳುತ್ತಾ ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಅಶೋಕ ಪಿ, ರವರ ದೀರ್ಘವಾಗಿ ತಮ್ಮ ಅನುಭವದ ಮಾತುಗಳನ್ನು ಚರ್ಚಿಸಿದರು. ಮರಿಗಳನ್ನು ಎರಡೂವರೆ 3 ತಿಂಗಳು ಸಾಕಿ ನಂತರ ಮಾರಾಟ ಮಾಡುತ್ತಾರೆ. 3-4 ತಿಂಗಳ ಕೋಳಿ ಅಂದಾಜು ಒಂದರಿಂದ ಒಂದೂವರೆ ಕೆ.ಜಿ ತೂಗುತ್ತದೆ. ಅದಕ್ಕೆ ಕನಿಷ್ಠ 250-300 ರೂ ದರ, ಹುಂಜವಾದರೆ 2 ಕೆ.ಜಿ ತೂಗುತ್ತದೆ. ರೂ. 450-500 ದರ ಇದೆ. ಕೋಳಿಗಳು ಐದು ತಿಂಗಳ ನಂತರ ಮೊಟ್ಟೆ ಇಡಲು ಆರಂಭಿಸುತ್ತವೆ. ಜೊತೆಗೆ ಕೋಳಿ ಗೊಬ್ಬರಕ್ಕೆ ತುಂಬಾ ಬೇಡಿಕೆ ಇದೆ. ಒಂದು ಟ್ರಾಕ್ಟರ್ ಗೊಬ್ಬರಕ್ಕೆ 5-6 ಸಾವಿರ ರೂ. ದರವಿದೆ. ಬಸವರಾಜರವರು 4-5 ಟ್ರಾಕ್ಟರ್ ಗೊಬ್ಬರವನ್ನು ಉತ್ಪಾದಿಸುತ್ತಾರೆ. ಒಟ್ಟಾರೆಯಾಗಿ ಕೋಳಿ ಫುಡ್, ಕೋಳಿ ಮಾಂಸದ ಬೆಲೆಯ ಏರಿಳಿತದ ನಡುವೆಯೂ ಖರ್ಚುವೆಚ್ಚ ತೆಗೆದು ಪ್ರತಿ ವರ್ಷ ಸರಾಸರಿ 3 ಲಕ್ಷ ನಿವ್ವಳ ಲಾಭ ಗಳಿಸುತ್ತಿದ್ದಾರೆ. ಕೋಳಿ ಸಾಕಾಣಿಕೆ, ವ್ಯವಸಾಯದ ಜೊತೆಯಲ್ಲೇ ದ್ವಿದಳ ಧಾನ್ಯ ಬೆಳೆಗಳಾದ ತೊಗರಿ ಹಾಗೂ ಹೂವಿನ ಬೆಳೆಗಳಾದ ಸೇವಂತಿಗೆ ಹಾಗೂ ಮಲ್ಲಿಗೆ ಸಣ್ಣ ಪ್ರಮಾಣದಲ್ಲಿ ಬೆಳೆಯುತ್ತಿದ್ದು ಕೋಳಿ ಆದಾಯದ ಜೊತೆಗೆ ಇತರೆ ಆದಾಯ ಇವರಿಗೆ ಆಶ್ರಯ. ರೈತರ ಅನುಭವಗಳನ್ನು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9901677316 ಸಂಪರ್ಕಿಸಬಹುದು.