ಕೃಷಿ ಭಾಗ್ಯ ಯೊಜನೆ. ಶ್ರೀ ಸಿದ್ದರಾಮಯ್ಯ ಸನ್ಮಾನ್ಯ ಮುಖ್ಯಮಂತ್ರಿಗಳು 2023-24 ನೇ ಸಾಲಿನಲ್ಲಿ ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯ ಅನುಷ್ಠಾನ. ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕೃಷಿ ಇಲಾಖಾ ಸವಲತ್ತುಗಳ ವಿತರಣಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾನ್ಯ ಶ್ರೀ ಎನ್.ಚಲುವರಾಯಸ್ವಾಮಿ, ಕೃಷಿ ಸಚಿವರು ಭಾಗವಹಿಸಿರುವ ಸಂದರ್ಭ. ಕೃಷಿ ಭಾಗ್ಯ ಪ್ಯಾಕೇಜ್‌ನಲ್ಲಿ ಈ ಕೆಳಕಂಡ ಘಟಕಗಳು ಒಳಗೊಂಡಿದ್ದು, ಯೋಜನೆಯ ಸಮಗ್ರ ಸದುಪಯೋಗ ಪಡೆಯಲು ರೈತ ಬಾಂಧವರಲ್ಲಿ ವಿನಂತಿ.
ಕ್ಷೇತ್ರ ಬದು ನಿರ್ಮಾಣ
ರೈತರ ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಪೋಲಾಗದಂತೆ ಅದೇ ಜಮೀನಿನಲ್ಲಿ ಇಂಗಿಸಲು ಹಾಗೂ ಕೃಷಿ ಹೊಂಡದಲ್ಲಿ ಸಂಗ್ರಹಿಸಲು ಕ್ಷೇತ್ರ ಬದು ನಿರ್ಮಾಣ.
ಕೃಷಿ ಹೊಂಡ
ಎಲ್ಲಾ ರೀತಿಯ ಮಣ್ಣುಗಳಲ್ಲಿ ಮಳೆ ನೀರು ಸಂಗ್ರಹಣೆಗಾಗಿ ವಿವಿಧ ಅಳತೆಯ (10x10x3 ಮೀ, 12x12x3 ಮೀ 15x15x3 ಮೀ, 18x18x3 ше, 21x21x3 ಮೀ) ಕೃಷಿ ಹೊಂಡಗಳ ನಿರ್ಮಾಣ.
ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (Gl Wire Fencing)
ಕೃಷಿ ಹೊಂಡದಲ್ಲಿ ಆಕಸ್ಮಿಕ ಅವಘಡಗಳು/ ಪ್ರಾಣ ಹಾನಿ ಸಂಭವಿಸದಂತೆ ತಡೆಯಲು ಕಡ್ಡಾಯವಾಗಿ ತಂತಿ ಬೇಲಿ ನಿರ್ಮಾಣ.
ಕೃಷಿ ಹೊಂಡದಿಂದ ನೀರು ಎತ್ತಲು ಪಂಪ್ ಸೆಟ್
ಕೃಷಿ ಹೊಂಡದಲ್ಲಿ ಸಂಗ್ರಹಣೆಯಾದ ನೀರನ್ನು ಬೆಳೆಗಳಿಗೆ ಬಳಸಿಕೊಳ್ಳಲು ಡೀಸೆಲ್ /ಪೆಟ್ರೋಲ್/ ಸೋಲಾರ್ ಪಂಪ್ ಸೆಟ್ ಖರೀದಿಸಲು ಅವಕಾಶ.
ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ(ತುಂತುರು/ಹನಿ ನೀರಾವರಿ
ಕೃಷಿ ಹೊಂಡಗಳಲ್ಲಿ ಸಂಗ್ರಹವಾದ ಮಳೆ ನೀರನ್ನು ಬೆಳೆಗಳಿಗೆ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿಗಾಗಿ ಬಳಸಿಕೊಳ್ಳಲು ಸೂಕ್ಷ್ಮ ನೀರಾವರಿ ಘಟಕ ಅನುಷ್ಠಾನ.
ರೈತರು ಸಲ್ಲಿಸಬೇಕಾದ ದಾಖಲೆಗಳು
ರೈತರ ಅರ್ಜಿ, ರೈತರ ಭಾವಚಿತ್ರ, FID (FID ಇಲ್ಲವಾದಲ್ಲಿ ಅಧಾರ್ ಪ್ರತಿ, ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ)
ಅರ್ಜಿ ಸಲ್ಲಿಕೆ
ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು. ಸ್ವೀಕೃತವಾದ ಅರ್ಹ ಅರ್ಜಿಗಳ ಜೇಷ್ಠತೆಯನ್ವಯ ಹಾಗೂ ಹೋಬಳಿಗೆ ನಿಗದಿಪಡಿಸಿದ ಗುರಿಗಳನ್ವಯ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು.
ಜನಸೇವಾ ವಿದ್ಯಾಕೇಂದ್ರ ವಿದ್ಯಾಲಯಕ್ಕೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನ
ಪ್ರಸ್ತುತ ಸಾಲಿಗೆ ಪರಿಶಿಷ್ಟ ವರ್ಗದ ಮಕ್ಕಳಿಗೆ 5ನೇ ತರಗತಿ ಕನ್ನಡ ಮತ್ತು 8ನೇ ತರಗತಿ ಕನ್ನಡ, ಆಂಗ್ಲ ಮಾದ್ಯಮಗಳಿಗೆ ಪ್ರವೇಶ ಪಡೆಯಲು ಬೆಂಗಳೂರಿನ ಚೆನ್ನಹಳ್ಳಿ ಮಾಗಡಿರಸ್ತೆಯ ಜನಸೇವಾ ವಿದ್ಯಾಕೇಂದ್ರ ವಿದ್ಯಾ ಶಾಲೆವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಸಲು ಇಚ್ಚಿಸುವ ವಿದ್ಯಾರ್ಥಿಗಳು ಧಾರವಾಡ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೆಶಕರ ಕಾರ್ಯಾಲಯ ಹಾಗೂ ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ಹಾಗೂ ನವಲಗುಂದ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಾಲಯದಿಂದ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಪ್ರವೇಶ ಪರಿಕ್ಷೇಯನ್ನು ಮಾರ್ಚ್ 20, 2024 ಮತ್ತು21,2024 ರಂದು ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 0836-2447201 ಗೆ ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರತ್ನ ಡಾ.ಪುನೀತ ರಾಜಕುಮಾರ್ ಹೃದಯ ಜೋತಿ ಯೋಜನೆಯ ಉದ್ಘಾಟನೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಮಾರ್ಚ್ 15, 2024 ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡದ ಸತ್ತೂರಿನ ಡಾ.ಡಿ. ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರ ಭವನದಲ್ಲಿ ಆಯೋಜಿಸಲಾಗಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲಾದ ಜೋಶಿ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸುವರು. ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕ ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯ ಪ್ರಸಾದ, ಶಾಸಕರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಅಧ್ಯಕ್ಷ ವಿನಯ ಕುಲಕರ್ಣಿ, ಶಾಸಕರು ಹಾಗೂ ಕರ್ನಾಟಕ ಕೈಮಗ್ಗ ನಿಗಮದ ಅಧ್ಯಕ್ಷರಾದ ಜೆ.ಎಂ.ಗಣೇಶ, ಶಾಸಕ ಹಾಗೂ ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷ ಭರಮಗೌಡ ಅಲಗೌಡ ಕಾಗೆ, ಶಾಸಕರಾದ ಎನ್.ಎಚ್ ಕೋನರಡ್ಡಿ, ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ್, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ವೀಣಾ ಚೇತನ ಭರದ್ವಾಡ ಹಾಗೂ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ ಸನದಿ ಅವರು ಭಾಗವಹಿಸುವರು. ಸೇವೆಗಳ ಯೋಜನಾ ನಿರ್ದೇಶಕ ಡಾ. ಶ್ರೀನಿವಾಸ.ಜಿ ಎನ್., ಎಸ್.ಡಿ.ಎಂ.ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ ಕುಮಾರ ಅವರು ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.