ಕರ್ನಾಟಕ ಮರಾಠಾ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳಾದ ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆ ( ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ), ಜೀಜಾವು ಜಲಭಾಗ್ಯ ಯೋಜನೆ ( ಕಲ್ಯಾಣ ನೀರಾವರಿ ಯೋಜನೆ), ಅರಿವು ಶೈಕ್ಷಣಿಕ ಸಾಲ ಯೋಜನೆ ( ಫ್ರೆಶ್ ಸ್ಟುಡೆಂಟ್ಸ್ ), ಅರಿವು ಶೈಕ್ಷಣಿಕ ಸಾಲ ಯೋಜನೆ ( ರಿನ್ಯೂವಲ್ ), ರಾಜಶ್ರೀ ಶಾಹು ಮಹಾರಾಜ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ ( ಫ್ರೆಶ್ ಸ್ಟುಡೆಂಟ್ಸ್ ), ಮರಾಠ ಮಿಲ್ಟಿ ಹೋಟೆಲ್ ಯೋಜನೆ. ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವಾವಲಂಬಿ ಸಾರಥಿಯೋಜನೆ, ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆ ಗಳ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡಿರಬೇಕು. ಬ್ಯಾಂಕ್ ಖಾತೆಗೆ ಆಧಾರ ಸಂಖ್ಯೆಯನ್ನು ಮಾಡಿರಬೇಕು. ಅರ್ಜಿ ಸಲ್ಲಿಸಲು ಅಗಸ್ಟ 31 ಕೊನೆಯ ದಿನವಾಗಿದ್ದು ಯೋಜನೆಗಳ ಮಾರ್ಗಸೂಚಿ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಹೆಚ್ಚಿನ ವಿವರಗಳಿಗಾಗಿ https://kmcdc.karnataka.gov.in ಸಂಪರ್ಕಿಸಬಹುದಾಗಿದೆ.
15.08.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ, ಸಂಜೆ, ರಾತ್ರಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. (ನಿನ್ನೆ ಸುಳ್ಯ ತಾಲೂಕು ಹಲವು ಭಾಗಗಳಲ್ಲಿ ಮತ್ತು ಕಡಬ ತಾಲೂಕಿನ ಕೆಲವು ಭಾಗಗಳಲ್ಲಿ ಮೇಘ ಸ್ಪೋಟದಂತಹ ಮಳೆಯಾಗಿತ್ತು. ಇವತ್ತು ಆ ರೀತಿಯ ಮಳೆಯ ಸಾಧ್ಯತೆ ಕಡಿಮೆ ಇರಬಹುದು) ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಮೂಡಿಗೆರೆ, ಕುದುರೆಮುಖ, ಬಾಳೆಹೊನ್ನೂರು, ಶಿೃಂಗೇರಿ ಸುತ್ತಮುತ್ತ ಭಾಗಗಳಲ್ಲಿ ಉತ್ತಮ ಮಳೆಯ ಸಾಧ್ಯತೆ ಇದೆ.
ಮೈಸೂರು, ಚಾಮರಾಜನಗರದ ಕೊಳ್ಳೇಗಾಲ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ, ಗದಗ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ಆಗಸ್ಟ್ 15ರಿಂದ ಮುಂದಿನ 10 ದಿನಗಳವರೆಗೂ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚೆನೆ ಇದೆ. ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ಜಾಸ್ತಿ ಇರಬಹುದು.
ಪ್ರವಾಸಿ ಮಾರ್ಗದರ್ಶಿ ತರಬೇತಿ : ಅರ್ಜಿ ಆಹ್ವಾನ
ಪ್ರವಾಸೋದ್ಯಮ ಇಲಾಖೆಯಿಂದ 2024- 25ನೇ ಸಾಲಿನ ಕೊಪ್ಪಳ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಹಿಂದುಳಿದ/ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಪ್ರವಾಸಿ ಮಾರ್ಗದರ್ಶಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಹಾಗೂ ಪ್ರಚಾರಪಡಿಸುವ ಉದ್ದೇಶದಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶಿಯ- ವಿದೇಶಿಯ ಪ್ರವಾಸಿಗರಿಗೆ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ ಸಾಹಿತ್ಯಕ್ಕೆ, ಸಾಂಸ್ಕೃತಿಕ ಹಾಗೂ ಕಲಾವೈವಿದ್ಯತೆಗಳನ್ನು ಒಳಗೊಂಡ ಸೃಜನಶೀಲತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಅಂದರೆ ‘ಒಂದು ರಾಜ್ಯ ಹಲವು ವಿಸ್ಮಯಗಳು’ ಎಂಬುದನ್ನು ಪರಿಚಯಿಸಲು ಪ್ರವಾಸಿ ಮಾರ್ಗದರ್ಶಿ ತರಬೇತಿಯನ್ನು ನೀಡಲಾಗುವುದು.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 10 ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸಾಮಾನ್ಯ, ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರಿಗೆ ವಯೋಮಿತಿ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 45 ವರ್ಷಗಳು, ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ವಿಧವೆ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 48 ವರ್ಷ ವಯೋಮಿತಿಯಲ್ಲಿರಬೇಕು. ಅರ್ಜಿಯನ್ನು ಪ್ರವಾಸೋದ್ಯಮ ಇಲಾಖೆ, ಕೊಪ್ಪಳ ಕಛೇರಿಯಿಂದ ಪಡೆದು ಭರ್ತಿ ಮಾಡಿ, ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಕಚೇರಿಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, 2ನೇ ಮಹಡಿ, ಜಿಲ್ಲಾಡಳಿತ ಭವನ, ಹೊಸಪೇಟೆ ರಸ್ತೆ, ಕೊಪ್ಪಳ 583231, ವಿಳಾಸಕ್ಕೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಶಿಕ್ಷು ತರಬೇತಿಗಾಗಿ ಅರ್ಜಿ ಆಹ್ವಾನ
ಹೊಸಪೇಟೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸಪೇಟೆ ವಿಭಾಗದ ವ್ಯಾಪ್ತಿಗೆ ಬರುವ ವಿಭಾಗೀಯ ಕಾರ್ಯಾಗಾರ, ಹೊಸಪೇಟೆ, ಕೂಡ್ಲಿಗಿ, ಹಡಗಲಿ, ಹೆಚ್.ಬಿ.ಹಳ್ಳಿ. ಮತ್ತು ಹರಪನಹಳ್ಳಿ ಘಟಕಗಳಲ್ಲಿ ಆಟೋ ಎಲೆಕ್ನಿಷಿಯನ್, ಡಿಸಲ್ ಮೆಕ್ಯಾನಿಕ್, ಆಟೋ ವೆಲ್ಡರ್, ಆಟೋ ಬಾಡಿ ಬಿಲ್ಡರ್, ಶೀಟ್ ಮೆಟಲ್ ವರ್ಕ್ಸ್ (ಎಂ.ಎಂ.ವಿ) ವೃತ್ತಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಒಂದು ವರ್ಷದ ಶಿಶಿಕ್ಷು ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
www.apprenticeshipindia.gov.in ನಲ್ಲಿ ನೋಂದಣಿ ಮಾಡಿಕೊಂಡು ಸದರಿ ಪೋರ್ಟಲ್‌ನಿಂದ ಡಿವಿಜಿನಲ್ ಕಂಟ್ರೋಲರ್, ಕೆಕೆಆರ್‌ಟಿಸಿ ಹೊಸಪೇಟೆ ಡಿವಿಜನ್ (ಇ03232900221) ಈ ವಿಳಾಸಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ವಿಭಾಗೀಯ ಕಚೇರಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸಪೇಟೆ ವಿಭಾಗದಲ್ಲಿ ಆಗಸ್ಟ್ 23ರಂದು ಬೆಳಿಗ್ಗೆ 11 ಗಂಟೆಗೆ ಕಚೇರಿ ವೇಳೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಸ್ವಂತ ಖರ್ಚಿನಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
14.08.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು. (ಸುಬ್ರಮಣ್ಯ ಹಾಗೂ ಸುಳ್ಯ ಸುತ್ತಮುತ್ತ ಹೆಚ್ಚಿರಬಹುದು). ಉತ್ತರ ಕನ್ನಡ ಮೋಡದ ವಾತಾವರಣ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
ಮೈಸೂರು, ಮಂಡ್ಯ, ಚಾಮರಾಜನಗರ (ಸಾಮಾನ್ಯ), ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು(ಪಾವಗಢ ಸಹಿತ), ಚಿತ್ರದುರ್ಗ, ಹಾವೇರಿ, ಧಾರವಾಡ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ವಿಜಯಪುರ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಒಂದೆರಡು ಕಡೆ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ಆಗಸ್ಟ್ 18ರ ತನಕ ರಾಜ್ಯದ ಮಲೆನಾಡು ಹಾಗೂ ಉತ್ತರ ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. (ಹೆಚ್ಚಿನ ಮಳೆ ದಕ್ಷಿಣ ಒಳನಾಡು ಭಾಗಗಳಲ್ಲಿ). ಆಗಸ್ಟ್ 19ರಿಂದ ಕರಾವಳಿ ಭಾಗಗಳಲ್ಲಿ ಮಳೆ ಆರಂಭವಾಗುವ ಮುನ್ಸೂಚನೆ ಇದೆ.
13.08.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗಿನೊಂದಿಗೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರು, ಶಿೃಂಗೇರಿ, ಕುದುರೆಮುಖ ಸುತ್ತಮುತ್ತ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಮೋಡ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ.
ಶಿವಮೊಗ್ಗದ ಆಗುಂಬೆ ಸುತ್ತಮುತ್ತ ಸಂಜೆ, ರಾತ್ರಿ ಸಾಮಾನ್ಯ ಮಳೆಯ ಸಾಧ್ಯತೆ ಇದ್ದರೆ ಉಳಿದ ಭಾಗಗಳಲ್ಲಿ ಮೋಡದ ವಾತಾವರಣ ಇರಬಹುದು. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಪಾವಗಢ ಸಹಿತ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಬಳ್ಳಾರಿ ಹಾಗೂ ಆಂದ್ರಾ ಗಡಿಭಾಗಗಳಲ್ಲಿ ಮಳೆಯ ಸಾಧ್ಯತೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿ ಭಾಗಗಳಲ್ಲಿ ಆಗಸ್ಟ್ 16ರ ತನಕ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, 17ರಿಂದ ಅಲ್ಲಲ್ಲಿ ಮತ್ತೆ ಮಳೆ ಆರಂಭವಾಗುವ ಲಕ್ಷಣಗಳಿವೆ. ಕೊಡಗು, ಹಾಸನ ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮುಂದಿನ 10 ದಿನಗಳವರೆಗೂ ಮಳೆಯ ಮುನ್ಸೂಚೆನೆ ಇದೆ. ಉತ್ತರ ಒಳನಾಡು ಭಾಗಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣ ಮುಂದುವರಿಯಲಿದ್ದು, ಮಳೆಯ ಸಾಧ್ಯತೆ ಕ್ಷೀಣಿಸುತ್ತಿದೆ.
ನಿರ್ವಹಣೆ ಇಲ್ಲದ ಸಿಂಗಟಾಲೂರು ಬ್ಯಾರೇಜ್, ಮೂರು ಜಿಲ್ಲೆಗಳಿಗೆ ಆಸರೆ
ಈ ಭಾಗದ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ ಚಾಲನೆಗೊಂಡು 12 ವರ್ಷ ಕಳೆದಿದೆ. ಈ ಯೋಜನೆಯ ನಿರ್ವಹಣೆಗೆ ಸರ್ಕಾರ ಒಮ್ಮೆಯೂ ಅನುದಾನ ನೀಡದೇ ಇರುವುದರಿಂದ ಜಖಂಗೊಂಡಿರುವ ಗೇಟುಗಳ ದುಸ್ಥಿತಿಯಲ್ಲೇ ನೀರು ನಿರ್ವಹಣೆ ಮಾಡುವಂತಾಗಿದೆ. ಬ್ಯಾರೇಜ್‌ನ 28 ಗೇಟುಗಳ ಪೈಕಿ ಮೂರು ಗೇಟುಗಳು ದುರಸ್ತಿಗೀಡಾಗಿವೆ. ತಾತ್ಕಾಲಿಕ ದುರಸ್ತಿ ಬಳಿಕವೂ ಅಪಾರ ನೀರು ಪೋಲಾಗುತ್ತಲೇ ಇರುತ್ತದೆ. ಗೇಟಿನ ರೋಲರ್‌ಗಳು ಜಖಂಗೊಂಡಿವೆ. ರೋಲರ್ ಮೇಲೆತ್ತಿದರೆ ಕೆಳಗೆ ಇಳಿಯುವುದಿಲ್ಲ, ಕೆಳಗಿಳಿದರೆ ಮೇಲೆತ್ತುವುದು ಕಷ್ಟವಾಗಿದೆ. ಒಳ ಹರಿವು ದಿಢೀರ್ ಹೆಚ್ಚಳವಾದಾಗ ಗೇಟುಗಳನ್ನು ತೆರೆಯಲು ಸಿಬ್ಬಂದಿಯ ಕಷ್ಟ ಹೇಳತೀರದಾಗಿದೆ.
ಈ ಯೋಜನೆಯಿಂದ ತುಂಗಭದ್ರಾ ನದಿಯ ಬಲದಂಡೆ ಹೂವಿನಹಡಗಲಿ ತಾಲ್ಲೂಕಿನಲ್ಲಿ 35,791 ಎಕರೆ ಕಾಲುವೆ ನೀರಾವರಿಗೆ ಒಳಪಟ್ಟಿದ್ದರೆ. ಎಡ ದಂಡೆಯ ಗದಗ, ಕೊಪ್ಪಳ ಜಿಲ್ಲೆಯ 1,34,445 ಎಕರೆ ಪ್ರದೇಶ ಸೂಕ್ಷ್ಮ ನೀರಾವರಿಗೆ ಒಳಪಟ್ಟಿದೆ. ಈ ಮಹತ್ವಾಕಾಂಕ್ಷಿ ಯೋಜನೆ ನೀರಾವರಿಗೆ ಸೀಮಿತವಾಗಿರದೇ ಮೂರು ಜಿಲ್ಲೆಗಳ ನಗರ, ಪಟ್ಟಣ, 500ಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರಿಗೆ ಆಸರೆಯಾಗಿದೆ. ಎರಡೂ ಭಾಗದ ನೂರಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲು, ಮಾಲ್ವಿ ಜಲಾಶಯಕ್ಕೆ ನೀರು ಹರಿಸಲು ಈ ಯೋಜನೆ ಸಹಕಾರಿಯಾಗಿದೆ. ಜಲಶಕ್ತಿ ಬಳಸಿಕೊಂಡು 18 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ನಿರ್ಲಕ್ಷಿಸಿರುವುದು ಸರಿಯಲ್ಲ ಎಂಬುದು ರೈತರ ಅನಿಸಿಕೆ. ಇನ್ನು ಕಾಲುವೆಗಳ ಸ್ಥಿತಿ ಹೇಳತೀರದಾಗಿದೆ.
ಮುಖ್ಯ ಕಾಲುವೆಯಲ್ಲಿ ನೀರು ಹರಿದರೂ ಉಪ ಕಾಲುವೆಗಳು ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಹೊಲಗಾಲುವೆಗಳು ನಿರ್ಮಾಣ ಆಗದೇ ಇರುವುದರಿಂದ ರೈತರು ಮುಖ್ಯ ಕಾಲುವೆಗೆ ಮೋಟಾರ್ ಅಳವಡಿಸಿಕೊಂಡು ನೀರು ಹರಿಸಿಕೊಳ್ಳುವಂತಾಗಿದೆ. ಬಹುತೇಕ ಕಡೆ ಕಾಲುವೆಗಳು ಕಿತ್ತು ಹೋಗಿವೆ. ಕೆಲವೆಡೆ ಹೂಳು ತುಂಬಿಕೊಂಡು ಮುಚ್ಚಿ ಹೋಗಿವೆ. ಜಾಲಿ ಪೊದೆಗಳು ಬೆಳೆದು ನೀರು ಬಸಿಯಲಾರಂಭಿಸಿವೆ. ತುಂಗಭದ್ರಾ ಜಲಾಶಯದ ಗೇಟು ಮುರಿದು ಅಪಾರ ಜಲಸಂಪನ್ಮೂಲ ಎಂಬುದು ಇಲ್ಲಿನ ರೈತರ ಆಗ್ರಹ. ಬ್ಯಾರೇಜ್‌ಗೆ ಭದ್ರತೆ ಇಲ್ಲ 5 ಸಾವಿರ ಕೋಟಿ ಮೊತ್ತದ ನೀರಾವರಿ ಯೋಜನೆ ಜಾರಿಯಾಗಿದ್ದರೂ ಬ್ಯಾರೇಜ್‌ಗೆ ಸರ್ಕಾರ ಕನಿಷ್ಟ ಭದ್ರತೆಯನ್ನೂ ಒದಗಿಸಿಲ್ಲ. ಬ್ಯಾರೇಜ್ ಮೇಲೆ ಹಾದು ಹೋಗುವವರ ತಪಾಸಣೆ ಮಾಡುವವರಿಲ್ಲ ನಿಗಾ ವಹಿಸುವವರೂ ಇಲ್ಲ. ಸುರಕ್ಷತೆ ದೃಷ್ಟಿಯಿಂದ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಪೊಲೀಸ್ ಆಂತರಿಕ ಭದ್ರತಾ ವಿಭಾಗ ಮೂರು ವರ್ಷಗಳ ಹಿಂದೆಯೇ ಪತ್ರ ಬರೆದಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿಲ್ಲ.