ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆದಿರುವ ಅಥವಾ ತೋಟಗಾರಿಕೆ ಬೆಳೆ ಬೆಳೆಯಲು ಆಸಕ್ತಿ ಹೊಂದಿರುವ ನೀರಾವರಿ ಸೌಲಭ್ಯ ಹೊಂದಿರುವ ರೈತರು ಹನಿ ನೀರಾವರಿ ಘಟಕ ಅಳವಡಿಕೆಗೆ ಮೊದಲನೇ 2 ಹೆಕ್ಟರ್ ಪ್ರದೇಶಕ್ಕೆ ಸಾಮಾನ್ಯ ವರ್ಗದ ರೈತರಿಗೆ ಶೇ.75ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ ಹಾಗೂ ನಂತರದ 3 ಹೆಕ್ಟರ್ ಪದ್ರೇಶಕ್ಕೆ ಎಲ್ಲಾ ವರ್ಗದ ರೈತರಿಗೆ ಶೇ.45ರಷ್ಟು ಸಹಾಯಧನ ಪಡೆಯಲು ಅವಕಾಶವಿರುತ್ತದೆ.
ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರು ಈಗಾಗಲೇ ಹನಿ ನೀರಾವರಿ ಘಟಕ್ಕೆ ಸಹಾಯಧನ ಪಡೆದಿದ್ದರೆ, 7 ವರ್ಷದ ನಂತರ ಪುನಃ ಸಹಾಯಧನ ಪಡೆಯಲು ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ ಎಂದು ವಿಜಯನಗರ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಂಪಿ ಉತ್ಸವ: ಪುಸ್ತಕಗಳ ಮಳಿಗೆ ಕಾಯ್ದಿರಿಸಲು ಅರ್ಜಿ ಆಹ್ವಾನ
2024ನೇ ಸಾಲಿನ ಹಂಪಿ ಉತ್ಸವ ಹಿನ್ನಲೆಯಲ್ಲಿ ವಿವಿಧ ಮಳಿಗೆಗಳನ್ನು ಸಿದ್ಧಪಡಿಸಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರಕಾಶಕರಿಂದ ಮಳಿಗೆ ಕಾಯ್ದಿರಿಸಲು ಅರ್ಜಿ ಆಹ್ವಾನಿಸಲಾಗಿದೆ. ಉತ್ಸವದಲ್ಲಿ ಮಳಿಗೆಗಳು 10+10 ಅಡಿ ಅಳತೆಯಲ್ಲಿದ್ದು, 2 ಮೇಜುಗಳನ್ನು ಒದಗಿಸಲಾಗುವುದು. ಹೆಚ್ಚಿನ ಮೇಜುಗಳಿಗಾಗಿ ಮುಂಚಿತವಾಗಿ ಬೇಡಿಕೆ ಸಲ್ಲಿಸಬೇಕು.
ಪ್ರಕಾಶಕರು ತಮ್ಮ ಹೆಸರನ್ನು ನೋಂದಾಯಿಸಲು ಅಧ್ಯಕ್ಷರು, ಹಂಪಿ ಉತ್ಸವ, ವಿಜಯನಗರ ಇವರ ಹೆಸರಿನಲ್ಲಿ ರೂ. 3000 ಮೊತ್ತದ ಡಿ.ಡಿ.ಯನ್ನು ಜನವರಿ 18 ರೊಳಗಾಗಿ ಪಾವತಿಸಿ ತಮ್ಮ ಹೆಸರನ್ನು ನೋಂದಾಯಿಸಬಹುದು. ಕನ್ನಡ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಆರ್ಥಿಕ, ಸಾಮಾಜಿಕ, ವೈಜ್ಞಾನಿಕ, ಸಂಶೋಧನೆ, ಜನಪದ ಸಾಹಿತ್ಯ, ಪ್ರವಾಸ, ಹವ್ಯಾಸ ಮುಂತಾದ ಪ್ರಕಾರಗಳ ಪುಸ್ತಕಗಳನ್ನು ಪ್ರದರ್ಶನ ಮಾಡಬಹುದಾಗಿದೆ. ಯಾವುದೇ ಕಾರಣಕ್ಕೂ ಕೆಟ್ಟ ಅಭಿರುಚಿಯನ್ನು ಬೆಳೆಸುವ, ಜನರ ಮಧ್ಯೆ ವಿರಸ ಮೂಡಿಸುವ, ದೇಶದ ಐಕ್ಯತೆ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುವ ಹಾಗೂ ನಿಷೇಧಿತ ಪುಸ್ತಕಗಳನ್ನು ಪ್ರದರ್ಶಸಿ ಮಾರಾಟ ಮಾಡುವಂತಿಲ್ಲ.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾಣಿಗಾಗಿ ಬಳ್ಳಾರಿ/ವಿಜಯನಗರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಫಾಲಾಕ್ಷ ಟಿ. ಮೊ.ಸಂ: 8861128848, 8310969813 ಹಾಗೂ ಚಿತ್ತವಾಡಿಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ನೋಡಲ್ ಅಧಿಕಾರಿಗಳಾದ ನಾಗರಾಜ್ ಹವಾಲ್ದಾರ್ ಮೊ.ಸಂ: 8197123522, 8123890903 ಗೆ ಸಂಪರ್ಕಿಸಬಹುದಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗ್ನಿ ಅವಘಡ : 9 ಜಾನುವಾರು, 20 ಮೇಕೆ, ಕುರಿ ಸಜೀವದಹನ
ತುಮಕೂರು ಅಲ್ಲಿ ಚಿಕ್ಕಣ್ಣ ಎಂಬುವವರ ಕೊಟ್ಟಿಗೆಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕೊಟ್ಟಿಗೆಯಲ್ಲಿದ್ದ 9 ಹಸುಗಳು ಮತ್ತು 20 ಮೇಕೆಗಳು ಸಜೀವದಹನಗೊಂಡ ಭೀಕರ ದುರ್ಘಟನೆ ತುಮಕೂರು ತಾಲೂಕಿನ ಕಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಾಣಹಾನಿ ಜೊತೆಗೆ ಒಂದು ಟ್ಯಾಕ್ಟರ್ ಅಡಕೆ, ಕೃಷಿ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ಬಿದ್ದಿರುವ ಸುದ್ದಿ ಕೇಳಿ ಸ್ಥಳಕ್ಕೆ ಓಡೋಡಿ ಬಂದ ಗ್ರಾಮಸ್ಥರು ಸೇರಿ ನಾಲೈದು ಜಾನುವಾರುಗಳ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮುಸ್ಸಂಜೆ ವೇಳೆ ದನ ಕರು ಹಾಗೂ ಕುರಿ ಮೇಕೆಗಳನ್ನು ರೈತ ಚಿಕ್ಕಣ್ಣ ಕೊಟ್ಟಿಗೆಗೆ ಸೇರಿಸಿ ಹೋಗಿದ್ದಾರೆ. ಆದರೆ ರಾತ್ರಿ ವೇಳೆ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಏಕಾಏಕಿ ಬೆಂಕಿ ಕಾಣಿಸಿಕೊಂಡದ್ದರಿಂದ ಘಟನೆ ಸುತ್ತ ಅನುಮಾನ ಹುಟ್ಟಿಕೊಂಡಿದೆ. ದುರಂತದಲ್ಲಿ ಭಾರೀ ಬೆಲೆಬಾಳುವ ಜಾನುವಾರ, ಕುರಿ, ಮೇಕೆಗಳನ್ನು ಕಳೆದುಕೊಂಡ ರೈತನ ಕೂಗು ಮುಗಿಲುಮುಟ್ಟಿದೆ.
ಫಲ-ಪುಷ್ಪ ಪ್ರದರ್ಶನಕ್ಕೆ ಚಾಲನೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ (ರಿ), ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಹಾಗೂ ಜಿಲ್ಲಾ ಹಾಪ್ ಕಾಮ್ಸ್ ವಿಜಯಪುರ ಇವರ ಸಹಯೋದಲ್ಲಿ, ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದ ಬಸವ ವನದಲ್ಲಿ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ವಿಜಯಪುರದ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ
ಮಹೇಜಬಿನ ಅಬ್ದುಲ್ ರಜಾಕ ಹೊರ್ತಿ ಅವರು ಚಾಲನೆ ನೀಡಿದರು. ಫಲಪುಷ್ಪ ಪ್ರದರ್ಶನವು ಜನವರಿ 13 ರಿಂದ 15ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ.
ಹೂವಿನ ಮಾದರಿಗಳು
ಸಂಪೂರ್ಣವಾಗಿ ದ್ರಾಕ್ಷಿಯಿಂದ ತಯಾರಿಸಿದ ಮಂಟಪ, ಹಲವು ಬಗೆಯ ಹೂಗಳಿಂದ ರಚಿಸಿದ ಚಂದ್ರಯಾನ-3ರ ಯಶೋಗಾಥೆ ಸಾರುವ ಇಸ್ರೋ ರಾಕೆಟ್ ಹಾಗೂ 30 ವಿವಿಧ ಬಗೆಯ ಸಾಂಬಾರು ಪದಾರ್ಥಗಳಿಂದ ಸಿದ್ಧಪಡಿಸಿದ ಗಣಪತಿ, ಸಂಪೂರ್ಣವಾಗಿ ಸಿರಿ ಧಾನ್ಯಗಳಿಂದ ತಯಾರಿಸಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಬಸವೇಶ್ವರ ಮೂರ್ತಿ ಕಲಾಕೃತಿ, ನಿಂಬೆಹಣ್ಣುಗಳಿಂದಲೇ ಬಳಸಿ ರಚಿಸಿರುವ ನಿಂಬೆ ಮನೆ. ವಿವಿಧ ಬಗೆಯ ಹೂಗಳನ್ನು ಉಪಯೋಗಿಸಿಕೊಂಡು ಮಾಡಿರುವ ಹರಿಯುವ ನೀರಿನ ಜಲಧಾರೆ, ಮನೆ, ಮೀನುಗಳು, ಕರ್ನಾಟಕ ನಕಾಶೆ, ನವಿಲು ಹಾಗೂ ತರಕಾರಿಯಿಂದ ರಚಿಸಿರುವ ರಂಗೋಲಿ ಆಕರ್ಷಣೆಯಾಗಿವೆ.
ಹಲವು ಬಗೆಯ ಹಣ್ಣು, ತರಕಾರಿ ಹಾಗೂ ಹೂಗಳ ಪ್ರದರ್ಶನ
ಮೇಳದಲ್ಲಿ ಜಿಲ್ಲೆಯಲ್ಲಿ ಬೆಳೆಯುವ ಹಣ್ಣುಗಳಾದ ಬಾಳೆ, ದ್ರಾಕ್ಷಿ, ದಾಳಿಂಬೆ, ಪೇರು, ಬಾರೇಕಾಯಿ, ನಿಂಬೆ. ಚಿಕ್ಕು, ರೋಸ್ ಆಪಲ್, ನೇರಳೆ, ಅಂಜೂರ. ಪಪಾಯ ಹಾಗೂ ತರಕಾರಿಗಳಾದ ಈರುಳ್ಳಿ, ಬದನೆ, ಟೊಮೋಟೊ, ಕುಂಬಳಕಾಯಿ, ಹಾಗಲಕಾಯಿ, ಬೆಂಡೆಕಾಯಿ, ಬೀಟ್ಯೂಟ್. ಮೂಲಂಗಿ, ಪಾಲಕ್, ಕ್ಯಾಬೇಜ್, ಮೆಕ್ಕೇಕಾಯಿ, ನುಗ್ಗೆಕಾಯಿ ವಿವಿಧ ಬಗೆಯ ಹೂಗಳಾದ ಸೇವಂತಿಗೆ. ಚೆಂಡು ಹೂ, ಸುಗಂಧರಾಜ, ಮಲ್ಲಿಗೆ, ಕನಕಾಂಬರ, ಗುಲಾಬಿಗಳನ್ನು ಪ್ರದರ್ಶನದಲ್ಲಿವೆ.