ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿ,ಮೇಕೆ ಘಟಕ ಸ್ಥಾಪನೆಗಾಗಿ ಸಹಾಯಧನಕ್ಕೆ ಅರ್ಜಿ ಆಹ್ವಾನ. ಸಂಪರ್ಕಿಸಿ:- 9663570842, ಜುಲೈ 31 ರೊಳಗೆ ಸಹಾಯಕ ನಿರ್ದೇಶಕರು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ.ನಿ ಗದಗ ಪಶು ಆಸ್ಪತ್ರೆ ಆವರಣ ಗದಗದಲ್ಲಿ ಅರ್ಜಿ ಸಲ್ಲಿಸಿ.
ಪಶು ಇಲಾಖೆಯಿಂದ ಉಚಿತ ಮೇವು, ಬೀಜ ವಿತರಣೆ
ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ವತಿಯಿಂದ ತಾಲ್ಲೂಕಿನ ಎಲ್ಲ ಪಶು ಚಿಕಿತ್ಸಾಲಯಗಳಲ್ಲಿ ಉಚಿತ ಮೇವು ಮತ್ತು ಬೀಜ ವಿತರಣೆ ಜುಲೈ 18 ರಿಂದ ಆರಂಭಗೊಳ್ಳಲಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಪಶುಪಾಲನೆ ಮುಖ್ಯ ಪಶು ವೈದ್ಯಾಧಿಕಾರಿ ಶ್ರೀಕಾಂತ ಗಾಂವಿ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಒಬ್ಬ ರೈತನಿಗೆ 5 ಕೆಜಿ ಸೊರಗಂ(ಜೋಳ) ಒಂದು ಮೇವು ಬೀಜ ಕಿರು ಪೊಟ್ಟಣ ನೀಡಲಾಗುವುದು. ಆಸಕ್ತ ರೈತರು ಎಫ್‌ಐಡಿ ಸಂಖ್ಯೆ, ಜಮೀನಿನ ಸರ್ವೆ ಸಂಖ್ಯೆ, ಮೊಬೈಲ್ ಫೋನ್ ಮಾಲೀಕತ್ವದ ಸಂಖ್ಯೆ, ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರಾಗಿದ್ದರೆ ಜಾತಿ ಪ್ರಮಾಣ ಪತ್ರಗಳೊಂದಿಗೆ ತಮ್ಮ ವ್ಯಾಪ್ತಿಗೆ ಸಮೀಪ ಇರುವ ಪಶು ಚಿಕಿತ್ಸಾಲಯಕ್ಕೆ ಭೇಟಿ ನೀಡಿ ಉಚಿತವಾಗಿ ಮೇವಿನ ಬೀಜಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಪಶು ಇಲಾಖೆ ಸಂಪರ್ಕಿಸುವಂತೆ ಕೋರಲಾಗಿದೆ.
19.07.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಭಾರಿ ಮಳೆ ಮುಂದುವರಿಯುವ ಮುನ್ಸೂಚೆನೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಭಾರಿ ಮಳೆ ಮುಂದುವರಿಯುವ ಮುನ್ಸೂಚೆನೆ ಇದೆ. ಕಲಬುರ್ಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಪಾವಗಡ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಚಾಮರಾಜನಗರ, ರಾಮನಗರ, ಗದಗ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.ಬಂಗಾಳಕೊಲ್ಲಿ ಒಡಿಸ್ಸಾ ಕರಾವಳಿಯಲ್ಲಿ ಸಣ್ಣ ಪ್ರಮಾಣದ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗಿದ್ದರಿಂದ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಇನ್ನೂ 2 ದಿನಗಳ ಕಾಲ ಉತ್ತಮ ಹಾಗೂ ಅಲ್ಲಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ. ತಿರುಗುವಿಕೆಯು ಜುಲೈ 21ರಂದು ಒಡಿಸ್ಸಾಕ್ಕೆ ಪ್ರವೇಶಿಸುವ ಸಾಧ್ಯತೆಗಳಿದ್ದು, ಮುಂದಿನ 2 ದಿವಸಗಳಲ್ಲಿ ಮಹಾರಾಷ್ಟ್ರದಾದ್ಯಂತ ಭಾರಿ ಮಳೆಯ ಮುನ್ಸೂಚೆನೆ ಇದೆ. ಇದರಿಂದ ಮಹಾರಾಷ್ಟ್ರದಿಂದ ಹರಿದು ಬರುವ ಉತ್ತರ ಕರ್ನಾಟಕದ ನದಿ ಪಾತ್ರಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಬಹುದು.ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಜುಲೈ 20ರಿಂದ ಭಾರಿ ಮಳೆ ಕಡಿಮೆಯಾದರೂ ಮುಂದಿನ 10 ದಿನಗಳವರೆಗೂ ಮಳೆ ಮುಂದುವರಿಯುವ ಲಕ್ಷಣಗಳಿವೆ. ದಕ್ಷಿಣ ಒಳನಾಡು ಭಾಗಗಳಲ್ಲಿ ಜುಲೈ 20ರ ನಂತರ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.
18.07.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು, ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಹ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸ್ವಲ್ಪ ಜಾಸ್ತಿಯೇ ಇರಬಹುದು. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಚಿಕ್ಕಬಳ್ಳಾಪುರ, ತುಮಕೂರು, ಪಾವಗಡ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚೆನೆ ಇದೆ. ಕೆಲವು ಪ್ರಕರಣಗಳಲ್ಲಿ ಉತ್ತಮ ಮಳೆಯ ಸಾಧ್ಯತೆ ಇದೆ.ಚಾಮರಾಜನಗರ, ಕೋಲಾರ, ಗದಗ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ವಿಜಯಪುರ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಈಗಿನಂತೆ ರಾಜ್ಯದಲ್ಲಿ ಮುಂದಿನ 10 ದಿನಗಳವರೆಗೂ ಮಳೆಯ ಮುನ್ಸೂಚನೆ ಇದೆ. ಜುಲೈ 20ರಿಂದ ಕೇರಳದಲ್ಲಿ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿರುವುದರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ.
1 ಕೋಟಿ 18 ಲಕ್ಷ ರೂ ಲಾಭ ಗಳಿಕೆ ಮತ್ತು ಲಾಭಾಂಶ ಶೇ.11 ಘೋಷಣೆ
ಸನ್ 2023-24ನೇ ಸಾಲಿನಲ್ಲಿ ದ
ಮರ್ಚಂಟ್ಸ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ, ಗದಗ ರೂ. 1 ಕೋಟಿ 18 ಲಕ್ಷ ರೂ.(ಲಾಭ ತೆರಿಗೆ ಅನುವುಗಳ ಮುನ್ನ) ಲಾಭ ಗಳಿಸಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ. ಎಸ್. ಚಟ್ಟಿಯವರು ತಿಳಿಸಿದರು. ಅವರು ಶನಿವಾರ ನಗರದ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ನಡೆದ ದಿ ಮರ್ಚೆಂಟ್ಸ್ ಅರ್ಬನ್ ಕೋ-ಆಪ್ ಬ್ಯಾಂಕಿನ 69ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, ರಿಝರ್ವ ಬ್ಯಾಂಕಿನ ಕಟ್ಟುನಿಟ್ಟಿನ ಧೋರಣೆಗಳು ದೇಶದ ಆರ್ಥಿಕ ಸಂಕಷ್ಟಗಳ ನಡುವೆಯೂ ಬ್ಯಾಂಕು 1 ಕೋಟಿ 18 ಲಕ್ಷ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.ಬ್ಯಾಂಕಿನ ರಿಜರ್ವ ಮತ್ತು ಇತರೆ ಫಂಡ್ ಮೊತ್ತ ರೂ. 6 ಕೋಟಿ 85 ಲಕ್ಷ ಠೇವಣಿ ಮೊತ್ತ ರೂ. 36 ಕೋಟಿ 23 ಲಕ್ಷ ಸಾಲದ ಮೊತ್ತ ರೂ. 25 ಕೋಟಿ 70 ಲಕ್ಷ ಆಗಿದ್ದನ್ನು ತಿಳಿಸಿದರು.ಅಲ್ಲದೇ ಬ್ಯಾಂಕಿನ ವಾರ್ಷಿಕ ವರದಿಯನ್ನು ಮಂಡಿಸಿ ಸಭೆಯ ಅನುಮೋದನೆ ಬ್ಯಾಂಕಿನ ಅಧ್ಯಕ್ಷ ಕೆ.ಎಸ್. ಚಟ್ಟಿ ಪಡೆದರು. ಲಾಭ ಹಾನಿಯ ಅಢಾವೆ ಪತ್ರವನ್ನು ಮತ್ತು ಹಿಂದಿನ ವಾರ್ಷಿಕ ಮಹಾಸಭೆಯ ನಡವಳಿಕೆಗಳನ್ನು ಹಾಗೂ ಲೆಕ್ಕಪರಿಶೋಧನೆಯ ಅನುಪಾಲನಾ ವರದಿಯನ್ನು ಬ್ಯಾಂಕಿನ ವ್ಯವಸ್ಥಾಪಕಿ ಶೈಲಜಾ ಎನ್. ಹೊಸಂಗಡಿಯವರು ಮಂಡಿಸಿ ಸಭೆಯ ಒಪ್ಪಿಗೆಯನ್ನು ಪಡೆದರು. ಬ್ಯಾಂಕಿನ ಉಪಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ನಿರೂಪಣೆ ನಡೆಸಿದರು.ತಾಂತ್ರಿಕ ಕೌಶಲ್ಯದಿಂದ ಇಂದು ಗ್ರಾಹಕರ ನಿರೀಕ್ಷೆ ಮತ್ತು ಅವರ ಸೇವೆಯಲ್ಲಿ ಅಪಾರ ಪರಿವರ್ತನೆ ಬಂದಿದೆ. ದೇಶದಲ್ಲಿ ಖಾಸಗಿ, ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳ ಪೈಪೋಟಿಯನ್ನು ಪಟ್ಟಣ ಸಹಕಾರ ಬ್ಯಾಂಕುಗಳು ಎದುರಿಸಿ ನಿಲ್ಲಬೇಕಾಗಿದೆ. ಬ್ಯಾಂಕಿನ ಸದಸ್ಯರು ಸಭೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಬ್ಯಾಂಕಿನ ಅಭಿವೃದ್ಧಿಗೆ ಕಾರಣಿಭೂತರಾಗಬೇಕು ಮತ್ತು ಸಾಲ ಪಡೆದ ಸದಸ್ಯರು ಕಂತು ಮತ್ತು ಬಡ್ಡಿಯನ್ನು ಬ್ಯಾಂಕಿನ ನಿಯಮಗಳಿಗನುಸಾರವಾಗಿ ಮರುಪಾವತಿಸಿ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರಿಯಾಗಬೇಕು.ಗ್ರಾಹಕರ ಅಗತ್ಯಗಳ ಸ್ಪಂದನೆಗೆ ಸದಾ ಸಿದ್ದ ಎಂದು ಚಂದ್ರು ಜೆ. ಬಾಳಿಹಳ್ಳಿಮಠ ತಿಳಿಸಿದರು. ನಮ್ಮ ಬ್ಯಾಂಕಿನ ನಿರ್ದೇಶಕ ಎಮ್.ಎಸ್. ಕಂಪಗೌಡ್ರ ಮಾತನಾಡಿ, ಯಲಬುರ್ಗಾ ತಾಲೂಕ ಕರಮುಡಿ ಗ್ರಾಮದಲ್ಲಿ 3 ಎಕರೆ 10 ಗುಂಟೆ ಜಾಗಾವನ್ನು ಶಾಲಾ ಕಾಲೇಜು ಸ್ಥಾಪನೆಗಾಗಿ ಸರಕಾರಕ್ಕೆ ಭೂದಾನ ಮಾಡಿದಕ್ಕಾಗಿ ಸನ್ಮಾನಿಸಿ ಗೌರವಿಸಲಾಯಿತು.ಅದೇ ರೀತಿ ಈ ಸಭೆಯಲ್ಲಿ ಬ್ಯಾಂಕಿನ ಹಿರಿಯ ಸದಸ್ಯರುಗಳಾದ ಚನ್ನವೀರಪ್ಪ ಮಾನಪ್ಪ ಬಡಿಗೇರ, ರಾಮಪ್ಪ ಸಂಗಪ್ಪ ಗುಜಮಾಗಡಿ, ಗಂಗಾಧರ ಬಸವಣ್ಣೆಪ್ಪ ಸಾಸ್ವಿಹಳ್ಳಿ, ಹನಮಂತಗೌಡ ಶೇಷಪ್ಪಗೌಡ ಪಾಟೀಲ. ಕೊಡ್ಲಪ್ಪ ಸಂಗಪ್ಪ ಪೈಲದ, ಪುಷ್ಪಾ ವಿರುಪಾಕ್ಷಪ್ಪ ಕಮತರ, ಮಲ್ಲಯ್ಯ ಅಯ್ಯಪ್ಪಯ್ಯ ಹಿರೇಮಠ ಹಾಗೂ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಾದ ಕು. ರಾಜೇಶ್ವರಿ ರುದ್ರಪ್ಪ ಕುಂಬಾರ, ಕು. ಅಭಿಷೇಕ ರವಿ ಕರಮುಡಿ, ಕು. ಚಿನ್ನಯ ಮಹಾಂತೇಶ ವಿಣೇಕರ, ಕು. ಶಾಂಭವಿ ಶಿದ್ದಲಿಂಗೇಶ ಚಟ್ಟಿ, ಕು. ಸಾಕ್ಷಿ ಶಂಭುಲಿಂಗಪ್ಪ ಬಡಿಗಣ್ಣವರ, ಕು. ಸ್ನೇಹಾ ಶಂಭುಲಿಂಗಪ್ಪ ಬಡಿಗಣ್ಣವರ, ಕು. ಸಾನ್ವಿ ಉಮೇಶ ಮುಧೋಳ ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಬ್ಯಾಂಕಿನ ಹಿರಿಯ ಸದಸ್ಯ ವಿ.ಎಸ್. ಕೂಗು ಬ್ಯಾಂಕಿನ ಪ್ರಗತಿಯ ಬಗ್ಗೆ ಮಾತನಾಡುತ್ತಾ ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಿ ಬ್ಯಾಂಕು ಶಾಖೆಗಳನ್ನು ತೆರೆಯಬೇಕು ಮತ್ತು ಸ್ವಂತ ಕಟ್ಟಡ ಹೊಂದಲು ಪ್ರಯತ್ನ ಪಡಬೇಕು ಹಾಗೂ ಬ್ಯಾಂಕಿನ ಕಟ್ಟಡದ ಕೋರ್ಟ್ ಕೇಸಿನ ಮುಂದಿನ ಕ್ರಮವನ್ನು ತೆಗೆದುಕೊಳ್ಳಲು ತಿಳಿಸಿದರು. ಎಚ್.ಪಿ. ಹಿರೇಮಠ ಪ್ರತಿಭಾವಂತ ಎಸ್.ಎಸ್. ಎಲ್.ಸಿ ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದು ಒಳ್ಳೆಯ ಉದ್ದೇಶ ಎಂದು ತಿಳಿಸಿದರು. ಬ್ಯಾಂಕಿನ ಮತ್ತೊರ್ವ ಸದಸ್ಯರಾದ ವಿ. ಎಸ್. ದೇಸಾಯಿಗೌಡ್ರ ಹಾಗೂ ಎಸ್. ಡಿ. ಕಟಕಟಿಯವರು ಮಾತನಾಡಿ ಇಲ್ಲಿ ಗ್ರಾಹಕರಿಗೆ ಸಿಬ್ಬಂದಿಗಳು ಮತ್ತು ಬ್ಯಾಂಕಿನ ವ್ಯವಸ್ಥಾಪಕರು ಸರಿಯಾಗಿ ಸೇವೆ ನೀಡುತ್ತಿದ್ದಾರೆ ಮತ್ತು ತೀವ್ರಗತಿಯಲ್ಲಿ ಸಾಲ ವಿತರಿಸುತ್ತಾರೆ ಎಂದು ತಿಳಿಸಿದರು ಮತ್ತು ಬ್ಯಾಂಕು ಇನ್ನು ಉತ್ತರೋತ್ತರ ಅಭಿವೃದ್ಧಿಯಾಗಲೆಂದು ಹಾರೈಸಿದರು.ಬ್ಯಾಂಕಿನ ಅಧ್ಯಕ್ಷರು ಸದಸ್ಯರ ಸಲಹೆಗಳನ್ನು ಕೇಳಿದ ನಂತರ ಮಾತನಾಡುತ್ತಾ ಪರಿವರ್ತನೆಯ ತಿರುವು ಎಂಬ ಸಂಕಲ್ಪದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ ಇದೇ ಶ್ರಾವಣ ಮಾಸದಲ್ಲಿ ಕಳಸಾಪೂರ ರಸ್ತೆಯಲ್ಲಿ ಒಂದು ಶಾಖೆಯನ್ನು ತೆರೆಯುತ್ತಿದ್ದೇವೆ. ಜೊತೆಗೆ ಎ.ಪಿ.ಎಂ.ಸಿ.ಯಲ್ಲಿ ನಮಗೆ ಹಂಚಿಕೆಯಾದ ನಿವೇಶನದಲ್ಲಿ ಸ್ವಂತ ಕಟ್ಟಡವನ್ನು ಪ್ರಾರಂಭಿಸುತ್ತೇವೆ ಮತ್ತು ರಿಜರ್ವ ಬ್ಯಾಂಕು ಮತ್ತು ಮಹಾಮಂಡಳದ ಮಾರ್ಗದರ್ಶನದಲ್ಲಿ ಬ್ಯಾಂಕಿನ ಬೈಲಾದಲ್ಲಿ ಸಮಗ್ರ ತಿದ್ದುಪಡೆ ಮಾಡಿ ಬ್ಯಾಂಕನ್ನು ಇನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಕೆ. ಎಸ್. ಚೆಟ್ಟ ತಿಳಿಸಿದರು. ಕೆ.ಎಸ್. ಪೈಲದ ಮಾತನಾಡಿ, ಬ್ಯಾಂಕಿನ ಎಲ್ಲ ಗ್ರಾಹಕರಿಗೆ ಒಳ್ಳೆಯ ಸೇವೆಯನ್ನು ಒದಗಿಸುತ್ತಿದೆ ಅದೇ ರೀತಿ ಇನ್ನು ಹೆಚ್ಚಿನ ಬೆಳವಣಿಗೆ ಹೊಂದಲಿ ಎಂದು ಆಶಿಸಿದರು. ಪಿ.ವಿ. ಕಮತರ ಇವರು ಸನ್ಮಾನ ಸ್ವೀಕರಿಸಿ ಬ್ಯಾಂಕು ಒಳ್ಳೆಯ ಸೇವೆಗಳನ್ನು ನೀಡುತ್ತಿದೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಬ್ಯಾಂಕಿನ ಹಿರಿಯ ನಾಗರೀಕರನ್ನು ಗುರುತಿಸಿ ಸನ್ಮಾನಿಸುತ್ತಿದ್ದೆ ಹಾಗೂ ಇನ್ನು ಹೆಚ್ಚಿನ ಸೇವೆಯನ್ನು ನೀಡುವಂತೆ ಬೆಳೆಯಲಿ ಎಂದು ಆಶಿಸಿದರು.ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಜಿ. ಪಲ್ಲೇದ ಇವರು ನಿರ್ದೇಶಕ ಮಂಡಳಿಯೊಂದಿಗೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಭೆಗೆ ಮುನ್ನ ನಿಧನರಾದ ನಮ್ಮ ಬ್ಯಾಂಕಿನ ನಿರ್ದೇಶಕರಾದ ದಿ. ಮೋಟಬಸಪ್ಪ ಬಸವಣ್ಣೆಪ್ಪ ಶೆಲವಡಿ ಹಾಗೂ ಮೃತರಾದ ಸದಸ್ಯರುಗಳಿಗೆ ಶೃದ್ಧಾಂಜಲಿ ಸಲ್ಲಿಸಿ ಮೌನವಾಚರಿಸಲಾಯಿತು. ಪ್ರಾರಂಭದಲ್ಲಿ ವೀರಯ್ಯ ಹೊಸಮಠ ಪ್ರಾರ್ಥನೆಗೈದರು. ಬ್ಯಾಂಕಿನ ಅಧ್ಯಕ್ಷರಾದ ಕೆ. ಎಸ್. ಚಟ್ಟಿಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಎಲ್. ಬಿ. ತೋಟದವರು ವಂದಿಸಿದರು. ಈ ವೇಳೆ ಅಧ್ಯಕ್ಷ ಕೆ.ಎಸ್. ಚೆಟ್ಟಿ, ಉಪಾಧ್ಯಕ್ಷ ಚಂದ್ರು ಜೆ. ಬಾಳಿಹಳ್ಳಿಮಠ, ಹಾಗೂ ಎಮ್.ಎಸ್. ಕಂಪಗೌಡರ, ಎಸ್.ಆರ್. ಭೂಸನೂರಮಠ, ಎಲ್.ಬಿ. ತೋಟದ, ಎಸ್. ಎಸ್. ಹಲವಾಗಲಿ, ಎಸ್.ಎಸ್. ತಡಸ, ಬ್ಯಾಂಕಿನ ಕನಕರಂಟ ಲೆಕ್ಕ ಪರಿಶೋಧಕ ಸಿಎ. ಆರ್. ಆರ್. ಜೋಶಿ, ಕಾನೂನು ಸಲಹೆಗಾರರಾದ ವಿಜಯಾ ಆರ್. ಅಂಗಡಿ ಹಾಗೂ ಬ್ಯಾಂಕಿನ ಆಡಳಿತಾಧಿಕಾರಿ ಬಸವರಾಜ ಚ. ನಾಯಕವಾಡಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಗೃಹಜ್ಯೋತಿ : 26,523 ಗ್ರಾಹಕರ ನಿರಾಸಕ್ತಿ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಜ್ಯೋತಿ’ಗೆ 26,523 ಗ್ರಾಹಕರು ನೋಂದಣಿಯನ್ನೇ ಮಾಡಿಕೊಂಡಿಲ್ಲ ಎಂಬುದು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ವರದಿಯೊಂದರಿಂದ ಗೊತ್ತಾಗಿದೆ. ಇತ್ತೀಚೆಗೆ ಬಳ್ಳಾರಿಗೆ ಭೇಟಿ ನೀಡಿದ್ದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಮತ್ತು ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದರು. ಸಭೆಗೆ ನೀಡಲು ಜೆಸ್ಕಾಂ ಅಧಿಕಾರಿಗಳು ಸಿದ್ಧಪಡಿಸಿದ್ದ ವರದಿ ಲಭ್ಯವಾಗಿದೆ. ಅದರಲ್ಲಿ ಹಲವು ವಿವರಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಒಟ್ಟು 3,16,126 ಗ್ರಾಹಕರಿದ್ದಾರೆ. ಈ ಪೈಕಿ 13,234 ಗ್ರಾಹಕರು 200 ಯುನಿಟ್ ಮೀರಿದ ಬಳಕೆದಾರರಾಗಿದ್ದು, 3,02,892 ಗ್ರಾಹಕರು ಯೋಜನೆಗೆ ಅರ್ಹರಾಗಿದ್ದಾರೆ.ಈ ಪೈಕಿ 2,76,369 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, 26,523 ಗ್ರಾಹಕರು ಯೋಜನೆಯ ಬಗ್ಗೆ ನಿರಾಸಕ್ತಿ ತೋರಿಸಿದ್ದಾರೆ.ಬಳ್ಳಾರಿ ತಾಲೂಕಿನಲ್ಲಿ 16,990, ಕುರುಗೋಡು 1601, ಸಂಡೂರು 4332, ಸಿರುಗುಪ್ಪ 3213, ಕಂಪ್ಲಿ 387 ಗ್ರಾಹಕರು ನೋಂದಣಿ ಮಾಡಿಕೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಗೆ ಶೇ 95ರಷ್ಟು ಮಂದಿ ನೋಂದಾಯಿಸಿಕೊಂಡಿದ್ದು, ಶೇ 5ರಷ್ಟು ಗ್ರಾಹಕರು ಮಾತ್ರವೇ ಯೋಜನೆಯಿಂದ ಹೊರಗೆ ಉಳಿದಿದ್ದಾರೆ. ಗೃಹಜ್ಯೋತಿಯು ಜನರೇ ಸ್ವಇಚ್ಛೆಯಿಂದ ನೋಂದಣಿ ಮಾಡಿಕೊಳ್ಳಬೇಕಾದ ಯೋಜನೆ. ಇಚ್ಛೆ ಇಲ್ಲದವರು ಹೊರಗುಳಿಯಬಹುದು. ಇನ್ನು ಗೃಹಜ್ಯೋತಿ ಯೋಜನೆಯ ಸಬ್ಸಿಡಿಯಾಗಿ ರಾಜ್ಯ ಸರ್ಕಾರದಿಂದ ಜೆಸ್ಕಾಂಗೆ 121.68 ಕೋಟಿ ಬಿಡುಗಡೆಯಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಪರಿವರ್ತಕಗಳ ದಾಸ್ತಾನು, ದುರಸ್ತಿ ವಿವರ: ವಿವಿಧ ಕಿಲೊವೋಲ್‌ನ ಒಟ್ಟು 95 ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್) ದಾಸ್ತಾನ ಇರಬೇಕಿತ್ತು ಎನ್ನಲಾಗಿದ್ದು, ಸದ್ಯ 49 ಪರಿವರ್ತಗಳು ದಾಸ್ತಾನು ಇವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಬಳ್ಳಾರಿ ಗ್ರಾಮೀಣದಲ್ಲಿ 82 ಪರಿವರ್ತಕಗಳಿಗೆ ಬದಲಾಗಿ 36 ದಾಸ್ತಾನು ಇದೆ. ನಗರ ಪ್ರದೇಶದಲ್ಲಿ 13ಕ್ಕೆ 13 ದಾಸ್ತಾನು ಇದೆ ಎಂದು ಮಾಹಿತಿ ನೀಡಲಾಗಿದೆ. ಆದರೆ, 2023ರ ಏಪ್ರಿಲ್‌ನಿಂದ 2024ರ ಜೂನ್ 30ರ ವರೆಗೆ ಬಳ್ಳಾರಿ ಗ್ರಾಮೀಣ ವಿಭಾಗಕ್ಕೆ ವಿವಿಧ ಕೆವಿಎನ 278 ಪರಿವರ್ತಕಗಳನ್ನು ನೀಡಲಾಗಿದೆ. ಬಳ್ಳಾರಿ ನಗರಕ್ಕೆ 37 ಪರಿವರ್ತಕಗಳನ್ನು ಒದಗಿಸಲಾಗಿದೆ. ಒಟ್ಟು 315 ಪರಿವರ್ತಕಗಳನ್ನು ನೀಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಗ್ರಾಮೀಣ ಮತ್ತು ನಗರ ವಿಭಾಗದಲ್ಲಿ ಒಟ್ಟು 15,087 288 ಅನ್ನೂ ಬದಲಿಸಲಾಗಿದೆ ಎಂದು ಸಚಿವರಿಗೆ ನೀಡಲಾದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲೆಯಲ್ಲಿ 2024 25ರ ಆರ್ಥಿಕ ವರ್ಷದ ಜೂನ್ ಅಂತ್ಯದವರೆಗೆ ಒಟ್ಟು 432 ಪರಿವರ್ತಕಗಳನ್ನು ದುರಸ್ತಿಗಾಗಿ ನೀಡಲಾಗಿತ್ತು. ಈ ಪೈಕಿ 377 ಪರಿವರ್ತಕಗಳು ದುರಸ್ತಿಯಾಗಿ ಜೆಸ್ಕಾಂ ಸೇರಿದ್ದರೆ, ಇನ್ನು 55 ಪರಿವರ್ತಕಗಳು ಇನ್ನಷ್ಟೇ ರಿಪೇರಿಯಾಗಿ ಬರಬೇಕಿವೆ ಎಂದು ವರದಿಯಲ್ಲಿ ಜೆಸ್ಕಾಂ ಹೇಳಿಕೊಂಡಿದೆ.
ಖಾಸಗಿ ಉದ್ಯಮ್ಯಗಳಲ್ಲಿ ಕನ್ನಡಿಗರಿಗೆ ಶೇ.100 ರಷ್ಟು ಮೀಸಲಾತಿ
ರಾಜ್ಯದಲ್ಲಿನ ಎಲ್ಲಾ ಖಾಸಗಿ ಉದ್ಯಮಗಳಲ್ಲಿ ಸಿ ಮತ್ತು ಡಿ ವರ್ಗದ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.100 ರಷ್ಟು ಮೀಸಲಾತಿ ಸೇರಿದಂತೆ ಏಳು ಮಸೂದೆಗಳನ್ನು ಮಂಡಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಟ್ವಿಟ್ ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕನ್ನಡಿಗರ ಹಿತ ಕಾಪಾಡುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ. ರಾಜ್ಯದ ಎಲ್ಲಾ ಖಾಸಗಿ ಉದ್ಯಮಗಳಲ್ಲಿ “ಸಿ ಮತ್ತು ಡಿ’ ದರ್ಜೆಯ ಹುದ್ದೆಗಳಿಗೆ ಶೇಕಡಾ 100 ರಷ್ಟು ಕನ್ನಡಿಗರ ನೇಮಕ ಕಡ್ಡಾಯಗೊಳಿಸುವ ಮಸೂದೆಗೆ ನಿನ್ನೆ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕನ್ನಡಿಗರು ಉದ್ಯೋಗದಿಂದ ವಂಚಿತರಾಗುವುದನ್ನು ತಪ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ. ಕನ್ನಡ ನಾಡು, ಮಾತೃಭೂಮಿಯಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು, ಕನ್ನಡಿಗರ ಹಿತ ಕಾಪಾಡುವುದೇ ನಮ್ಮ ಆದ್ಯತೆ’ ಎಂದು ಬರೆದುಕೊಂಡಿದ್ದಾರೆ.ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸಲು ಉದ್ಯಮಿಗಳ ಜೊತೆ ಚರ್ಚಿಸುತ್ತೇವೆ: ಮಹೇಶ್ ಜೋಶಿ (ಸಂದರ್ಶನ) ರಾಜ್ಯದಿಂದ ನೆಲ, ಜಲ ಸೇರಿದಂತೆ ಮೂಲಸೌಕರ್ಯ ಪಡೆಯುವ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದ್ದು, ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಿದೆ ಎಂದು ಹೇಳಿದ್ದರು. ಆದರೆ, ಇದಕ್ಕೆ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಸೇರಿದಂತೆ ಕೆಲ ಕೈಗಾರಿಕೋದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಗಂಭೀರವಾದ ತಕ್ಷಣ ಸಿದ್ದರಾಮಯ್ಯ ತಮ್ಮ ಟ್ವಿಟ್ ನ್ನು ಡಿಲೀಟ್ ಮಾಡಿದ್ದರು. ಇದೀಗ ಮತ್ತೆ ಟೀಟ್ ಮಾಡಿದ್ದಾರೆ.