2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳಿಗೆ ದಿನಾಂಕ:26-02-2024ರಂದು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸದರಿ ಅಧಿಸೂಚನೆಯಲ್ಲಿ ಉಳಿಕೆ ಮೂಲ ವೃಂದದ ಮತ್ತು ಹೈದ್ರಾಬಾದ್-ಕರ್ನಾಟಕ ವೃಂದದ ಒಟ್ಟು ಹುದ್ದೆಗಳ ಅಂಕಿ-ಅಂಶಗಳು (ಆರ್.ಪಿ.ಸಿ. 307+ಹೈ.ಕ. 77) ಮತ್ತು ವರ್ಗೀಕರಣದಲ್ಲಿ COMMERCIAL TAX INSPECTOR ಎಂದು ನಮೂದಾಗಿದ್ದು, ಸದರಿ ನಮೂದನ್ನು ಆರ್.ಪಿ.ಸಿ. 310 ಮತ್ತು ಹೈ.ಕ. 74 ಮತ್ತು COMMERCIAL TAX OFFICER ಎಂದು ತಿದ್ದುಪಡಿ ಮಾಡುವ ಸಲುವಾಗಿ ದಿನಾಂಕ:02-04-2024ರಂದು ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.
ಸದರಿ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 15-04-2024ರವರೆಗೆ ಮುಂದೂಡಲಾಗಿರುತ್ತದೆ ಮತ್ತು ಪೂರ್ವಭಾವಿ ಪರೀಕ್ಷೆಯನ್ನು ದಿನಾಂಕ:07-07-2024ರಂದು ನಡೆಸಲು ಮರುನಿಗದಿಪಡಿಸಲಾಗಿದ್ದು, ಆಯೋಗದ ವೆಬ್ ಸೈಟ್ http://kpsc.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿರುತ್ತದೆ.
ವಿಶೇಷ ಸೂಚನೆ
ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997 ಹಾಗೂ ತಿದ್ದುಪಡಿ ನಿಯಮಗಳನ್ವಯ ಮುಖ್ಯಪರೀಕ್ಷೆಯು ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲೀಷ್ ಎಂಬ ಎರಡು ಅರ್ಹತಾದಾಯಕ ಪತ್ರಿಕೆಗಳನ್ನೊಳಗೊಂಡಿರುತ್ತದೆ. ಆಯೋಗವು ಈ ಹಿಂದೆ ಜರುಗಿಸಿರುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾಗ್ಯೂ ಸಹ ಮೇಲಿನ ನಿಯಮಗಳನ್ವಯ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಮುಖ್ಯಪರೀಕ್ಷೆಗೆ ಅರ್ಹರಾಗುವ ಎಲ್ಲಾ ಅಭ್ಯರ್ಥಿಗಳು ಸದರಿ ಅರ್ಹತಾದಾಯಕ ಪತ್ರಿಕೆಗಳನ್ನು ಕಡ್ಡಾಯವಾಗಿ ಬರೆಯಬೇಕಿರುತ್ತದೆ.
ವ್ಯಾಟಿಕನ್ ಮಾಧ್ಯಮಕ್ಕೆ ಕನ್ನಡ ಭಾಷೆ ಸೇರ್ಪಡೆ
ವ್ಯಾಟಿಕನ್ ರೇಡಿಯೋ-ವ್ಯಾಟಿಕನ್ ನ್ಯೂಸ್ ಗೆ 53ನೇ ಭಾಷೆಯಾಗಿ ಕನ್ನಡ ಭಾಷೆಯು ಸೇರ್ಪಡೆಗೊಂಡಿದೆ. ಮಂಗಳವಾರದಿಂದ, ವ್ಯಾಟಿಕನ್ ಸುದ್ದಿತಾಣವು ಕನ್ನಡ ಭಾಷೆಯಲ್ಲೂ ಮೂಡಿ ಬರಲಿದೆ. ವ್ಯಾಟಿಕನ್ನಿನ ಸಂವಹನ ಪೀಠ ಹಾಗೂ ಬೆಂಗಳೂರು ಮಹಾಧರ್ಮಕ್ಷೇತ್ರದ ಸಹಯೋಗದಲ್ಲಿ ಈ ಬೆಳವಣಿಗೆ ನಡೆದಿದೆ. ವ್ಯಾಟಿಕನ್ ಸುದ್ದಿತಾಣದ ಸುದ್ದಿಗಳು ಕನ್ನಡದಲ್ಲಿ ಆರಂಭವಾಗುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಕರ್ನಾಟಕದ ಧರ್ಮಸಭೆಗೆ ವಿಶ್ವಗುರುಗಳ, ಧರ್ಮಸಭೆಯ ಹಾಗೂ ಜಾಗತಿಕ ವಿದ್ಯಾಮಾನಗಳ ಸುದ್ದಿಗಳು ಕನ್ನಡದಲ್ಲಿ ದೊರಕಿರುವುದು ಅದ್ಭುತವಾಗಿದೆ.
ಮಾತ್ರವಲ್ಲದೆ ಅತೀ ಮುಖ್ಯವೂ ಆಗಿದೆ. ಧರ್ಮಸಭೆಯನ್ನು ಪ್ರಪಂಚದ ಎಲ್ಲಾ ಗಡಿಗಳಿಗೂ ವಿಸ್ತರಿಸುತ್ತಿರುವ ಪೋಪ್ ಫ್ರಾನ್ಸಿಸರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಬೆಂಗಳೂರಿನ ಮಹಾಧರ್ಮಾಧ್ಯಕ್ಷರಾದ ಡಾ. ಪೀಟರ್ ಮಚಾದೊ ಹೇಳಿದ್ದಾರೆ. ಸುದ್ದಿ ಲೇಖನಗಳನ್ನು ಕನ್ನಡದಲ್ಲಿ ಓದುವುದರಿಂದ ಕರ್ನಾಟಕದ ಓದುಗರಿಗೆ ಬಹಳ ಅನುಕೂಲವಾಗಲಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿಯನ್ನು ವ್ಯಾಟಿಕನ್ ರೇಡಿಯೋ ಹಾಗೂ ಇತರೆ ಮಾಧ್ಯಮದ ಮೂಲಕವೂ ಜನರು ಪಡೆದುಕೊಳ್ಳಬಹುದು. ಬೆಂಗಳೂರು ಮಹಾಧರ್ಮಕ್ಷೇತ್ರದ ಮಾಧ್ಯಮ ಸಂವಹನ ಕೇಂದ್ರವು ವಿಶ್ವ ಧರ್ಮಸಭೆಯನ್ನು ನಮ್ಮ ಜನರ ಬಳಿಗೆ ಕರೆ ತರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವ್ಯಾಟಿಕನ್ ಸುದ್ದಿತಾಣದ ಭಾಷೆಗಳ ಸಮೂಹಕ್ಕೆ ಇದೀಗ ಕನ್ನಡ ಸೇರ್ಪಡೆಗೊಂಡಿದೆ. ಇದು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲೊಂದಾಗಿದ್ದರೂ, ಇಂದಿಗೂ ಅಚಲ ಜೀವಂತಿಕೆಯನ್ನು ಹೊಂದಿದೆ. ಕೆಥೋಲಿಕ್ ಸಮುದಾಯ ಜೀವಂತಿಕೆಯಿಂದ ಇರುವಂತೆಯೇ, 35 ಮಿಲಿಯನ್ ಜನರು ಮಾತನಾಡುವಂತಹ ಭಾಷೆಯೊಂದು ಜೀವಂತಿಕೆಯಿಂದ ಕೂಡಿದೆ. ಇದು ಕನ್ನಡಿಗರ ಸಂಸ್ಕೃತಿಗೆ ಸಂದ ಗೌರವ. ಕನ್ನಡದ ಸುಪ್ರಸಿದ್ದ ಗಾದೆ ಮಾತು “ಕೈ ಕೆಸರಾದರೆ ಬಾಯಿ ಮೊಸರು” ಎಂಬಂತೆ ಪರಿಶ್ರಮ ಎಂದಿಗೂ ಫಲ ನೀಡುತ್ತದೆ”, ಎಂದು ವ್ಯಾಟಿಕನ್ನಿನ ಸಂವಹನ ಪೀಠದ ಮುಖ್ಯಾಧಿಕಾರಿ (ಪ್ರಿಫೆಕ್ಟ್) ಆಗಿರುವ ಡಾ. ಪೌಲ್ ರುಫಿನಿ ಅಭಿಪ್ರಾಯ ಪಟ್ಟಿದ್ದಾರೆ.