Breaking
Tue. Dec 17th, 2024

ಬೆಳೆ ಹಾನಿ ಪಟ್ಟಿ ಪ್ರಕಟ : ಆಕ್ಷೇಪಣೆ ಸಲ್ಲಿಸಲು ರೈತರಿಗೆ ಅವಕಾಶ

Spread the love

ಮಾನ್ಯ ಸರ್ಕಾರದ ಆದೇಶ ಸಂಖ್ಯೆ:ಕಂಇ/214/ 2/2024. 16-08-2024 ರಂತೆ 2024- 25ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಾದ ಪ್ರವಾಹ/ ಅತೀವೃಷ್ಟಿಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾನಿ ಪರಿಹಾರವನ್ನು ಪಾವತಿಸುವ ಕುರಿತಂತೆ ಬೆಳೆ ಹಾನಿಯಾದ ರೈತರ ಯಾದಿಯನ್ನು ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ, ತಹಶೀಲ್ದಾರ, ಗ್ರಾಮ ಪಂಚಾಯತಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ದಿನಾಂಕ:02-09-2024 ರಂದು ಪ್ರಕಟಿಸಲಾಗಿರುತ್ತದೆ. ಬೆಳೆ ಹಾನಿ ಸಮೀಕ್ಷೆ ಕುರಿತು ಯಾವುದಾದರೂ ಆಕ್ಷೇಪಣೆಗಳು ಇದ್ದಲ್ಲಿ ರೈತರು ಸಂಬಂಧಿಸಿದ ತಹಶೀಲ್ದಾರ, ಕೃಷಿ, ತೋಟಗಾರಿಕಾ ಇಲಾಖೆಗಳ ತಾಲೂಕು ಕಚೇರಿಗಳಲ್ಲಿ 07 ದಿನಗಳೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರ ಮಾಹಿತಿ ನೀಡದ ಅಧಿಕಾರಿ

ತಾಲ್ಲೂಕಿನ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಆಗಿರುವ ಪ್ರಯೋಜನಗಳ ಬಗ್ಗೆ ನಿಖರ ಮಾಹಿತಿ ನೀಡಲು ತಡವರಿಸಿದ ಹಿರಿಯ ಸಹಾಯಕ ನಿರ್ದೇಶಕ (ಪ್ರಭಾರ) ಪರಶುರಾಮ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ರುದ್ರಪ್ಪ ಲಮಾಣಿ, ‘ರೈತರ ವಿಚಾರದಲ್ಲಿ ಬೇಜವಾಬ್ದಾರಿ ವರ್ತನೆ ಸಹಿಸುವುದಿಲ್ಲ. ನಿಮಗೆ ನೋಟಿಸ್ ನೀಡಿ ಅಮಾನತುಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ‘ಸಾಮಾನ್ಯ ಸಭೆ’ಯಲ್ಲಿ ಪಾಲ್ಗೊಂಡಿದ್ದ ರುದ್ರಪ್ಪ ಲಮಾಣಿ, ಅಧಿಕಾರಿಗಳ ವರ್ತನೆಗೆ ಕಿಡಿಕಾರಿದರು. ರೈತರು ಹಾಗೂ ಜನಪರವಾಗಿ ಕೆಲಸ ಮಾಡಿ. ರೈತರ ಬಳಿ ಹೋಗದೇ, ಕೇವಲ ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡಬೇಡಿ’ ಎಂದು ತಾಕೀತು ಮಾಡಿದರು. ತೋಟಗಾರಿಕೆ ಇಲಾಖೆಯ ಅಂಕಿ-ಅಂಶ ಆಲಿಸಿದ ಶಾಸಕ, ‘ಯೋಜನೆ ಲಾಭ ಪಡೆದು ತೋಟ ಮಾಡಿರುವ ಒಬ್ಬ ರೈತರ ಹೆಸರು ಹೇಳಿ. ನಾನೇ ತೋಟಕ್ಕೆ ಹೋಗಿ ಬರುತ್ತೇನೆ’ ಎಂದರು.

ರಾಣೆಬೆನ್ನೂರು ಪಾಲಾದ ರೇಷ್ಮೆ ಮಾರುಕಟ್ಟೆ: 2022-23ನೇ ಸಾಲಿನಲ್ಲಿ ಹಾವೇರಿ ಜಿಲ್ಲಾ ಕೇಂದ್ರಕ್ಕೆ ಮಂಜೂರಾಗಿದ್ದ ರೇಷ್ಮೆ ಮಾರುಕಟ್ಟೆ ರಾಣೆಬೆನ್ನೂರು ತಾಲ್ಲೂಕಿಗೆ ಹೋಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರುದ್ರಪ್ಪ, ರೇಷ್ಮೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಳೆ ತಂದ ಅವಾಂತರ : ರೈತ ಕಂಗಾಲು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಾದ ತೊಗರಿ, ಹತ್ತಿ ತೇವಾಂಶ ಹೆಚ್ಚಳದಿಂದ ಕೊಳೆಯು ತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ರೈತರು ಅತಿ ಹೆಚ್ಚು ಸೂರ್ಯಕಾಂತಿ, ಸಜ್ಜೆ, ತೊಗರಿ, ಹತ್ತಿ ಬಿತ್ತನೆ ಮಾಡಿದ್ದು, ನಿರಂತರ ಜಿಟಿಜಿಟಿ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳು ಹಾಳಾಗುತ್ತಿವೆ. ಗುರುಗುಂಟಾ, ಹಟ್ಟಿ, ಗೆಜ್ಜಲಗಟ್ಟಾ ಆನ್ವರಿ, ಮೇಧಿನಾಪೂರ, ಕೊಠಾ, ನಿಲೋಗಲ್, ವೀರಾಪೂರ, ಕಡೊಣಿ, ಯಲಗಟ್ಟಾ, ಹಿರೇನಗನೂರು, ಹಿರೇಹೆಸರೂರು. ವಂದಲಿ ಹೊಸೂರು, ಗೌಡೂರು, ಮಾಚನೂರು, ಪೈದೊಡ್ಡಿ, ಯರಜಂತಿ, ಬಂಡೆಭಾವಿ, ಸೇರಿದಂತೆ ಇತರೆ ಹಳ್ಳಿಗಳ ತಗ್ಗು ಪ್ರದೇಶದ ಜಮೀನಿನಲ್ಲಿ ತೊಗರಿ, ಹತ್ತಿ, ಸೂರ್ಯಕಾಂತಿ ಬೆಳೆಗಳು ತೇವಾಂಶ ಹೆಚ್ಚಾಗಿ ಒಣಗುತ್ತಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ.

ಮೋಡ ಕವಿದ ವಾತಾವರಣದಿಂದ ತೊಗರಿ ಹಾಗೂ ಸೂರ್ಯಕಾಂತಿ ಬೆಳೆಯಲ್ಲಿ ಎಲೆಚುಕ್ಕೆ ರೋಗ ಕಾಡುತ್ತಿದೆ. ಮಳೆ ಬಂದು ಬೆಳೆ ಹಾಳಾಗುತ್ತಿರುವುದು ಒಂದು ಕಡೆಯಾದರೆ ಮೋಡ ಮುಸುಕಿದ ವಾತಾವರಣದಿಂದ ಬೆಳೆಗೆ ಹುಳುವಿನ ಕಾಟ ಕಾಡುತ್ತಿದೆ. ಹತೋಟಿಗೆ ತರಲು ಔಷಧ ಸಿಂಪಡಣೆ ಮಾಡಿದರೂ ತೊಗರಿ ತೇವಾಂಶ ಹೆಚ್ಚಳದಿಂದ ಕೊಳೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಲಿ ಮಳೆ ಬಂದು ರೈತರ ಬೆಳೆಗಳು ಹಾಳಾಗಿವೆ. ಅಧಿಕಾರಿಗಳು ಬೆಳೆ ಪರಿಹಾರ ನೀಡಿ ರೈತರ ನೆರವಿಗೆ ಬರಬೇಕು ಎನ್ನುತ್ತಾರೆ ರೈತ ರಾಜಕುಮಾರ.

ಸಾಲ-ಸೂಲ ಮಾಡಿ ಬಿತ್ತನೆ ಮಾಡಲಾಗಿದೆ. ಫಲ ಕೈಗೆ ಬರುವ ಮುನ್ನವೇ ಮಳೆ ಬಂದು ರೈತರ ಬೆಳೆಗಳು ಹಾಳಾಗುತ್ತಿವೆ. ಸರ್ಕಾರ ನೆರವಿಗೆ ಬರಬೇಕು ತೇವಾಂಶ ಹೆಚ್ಚಳದಿಂದ ಬೆಳೆಗಳು ಒಣಗುತ್ತಿದ್ದು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರೆ ರೈತರ ಬೆಳೆಗಳು ಉಳಿಯುತ್ತವೆ. ಇಲ್ಲವಾದರೆ ರೈತರು ಸಂಕಷ್ಟ ಅನುಭವಿಸುತ್ತಾರೆ.

ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಕೊಪ್ಪಳ : ಜಿಲ್ಲೆಯ ತಳಕಲ್ ಗ್ರಾಮದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ಸಾಲಿನ ವಿವಿಧ ಇಂಜಿನಿಯರಿಂಗ್ ವಿಭಾಗಗಳಲ್ಲಿ ಬೋಧನೆ ಮಾಡಲು ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್, ಮೆಕಾನಿಕಲ್, ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ & ಕಮುನಿಕೇಶನ್, ಕಂಪ್ಯೂಟರ್ ಸೈನ್ಸ & ಇಂಜಿನಿಯರಿಂಗ್ ವಿಭಾಗಗಳಲ್ಲಿ ಹಾಗೂ ಪ್ರಥಮ ವರ್ಷದ ವಿಷಯಗಳನ್ನು ಬೋಧನೆ ಮಾಡಲು ಅತಿಥಿ ಉಪನ್ಯಾಸಕರು ಅವಶ್ಯಕತೆಯಿದ್ದು, ಎ.ಐ.ಸಿ.ಟಿ.ಇ. ನಿಯಮಾವಳಿಗಳನ್ವಯ ವಿದ್ಯಾರ್ಹತೆಯುಳ್ಳ ಆಸಕ್ತರು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸೆಪ್ಟೆಂಬರ್ 05ರ ಮಧ್ಯಾಹ್ನ 3 ಗಂಟೆಯೊಳಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ತಳಕಲ್ ನ ಪ್ರಾಚಾರ್ಯರಿಗೆ ಖುದ್ದಾಗಿ ಬಂದು ಸಲ್ಲಿಸಬೇಕು ಎಂದು ಕಾಲೇಜಿನ ಪ್ರಾಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೀಡಾಪಟುಗಳಿಂದ ಏಕಲವ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕೊಪ್ಪಳ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕ್ರೀಡೆಯಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ಜಿಲ್ಲೆಯ ಕ್ರೀಡಾಪಟುಗಳಿಗೆ 2023ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ಜಿಲ್ಲೆಯ ಪ್ರತಿಭಾನ್ವಿತ ಕ್ರೀಡಾಪಟುಗಳಿಂದ ಏಕಲವ್ಯ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅರ್ಹ ಕ್ರೀಡಾಪಟುಗಳು ನಿಗದಿತ ಅರ್ಜಿ ನಮೂನೆಗಳನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರಲ್ಲಿ ಪಡೆದು ಭರ್ತಿ ಮಾಡಿ, ಸೆಪ್ಟೆಂಬರ್ 10 ರೊಳಗೆ ಈ ಕಚೇರಿಗೆ ಸಲ್ಲಿಸಬೇಕು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೊಗರಿ ಕುಡಿ ಚಿವುಟಲು ಯಂತ್ರಕ್ಕೆ ಮೊರೆ

ಪಟ್ಟಣ ಸೇರಿದಂತೆ ಹೋಬಳಿಯ ಬಹುತೇಕ ರೈತರು ತೊಗರಿ ಕುಡಿ ಚಿವುಟಿ, ಹೆಚ್ಚಿನ ಇಳುವರಿ ಪಡೆಯಲು ಯಂತ್ರದ ಮೊರೆ ಹೋಗಿದ್ದಾರೆ. ಈ ಯಂತ್ರವನ್ನು ಪಕ್ಕದ ಯಾದಗಿರಿ, ಕಲಬುರ್ಗಿ, ಬಾಗಲಕೋಟೆ ಜಿಲ್ಲೆಗಳಿಂದ ಖರೀದಿಸಿ ತಂದಿರುವ ಸುಮಾರು 30ಕ್ಕೂ ಅಧಿಕ ರೈತರು ಈಗಾಗಲೇ ಇದರ ಉಪಯೋಗ ಪಡೆದಿದ್ದಾರೆ. ಪಟ್ಟಣದ ಅಮರೇಶ ಹಟ್ಟಿ ಎಂಬುವವರು 3 ಸಾವಿರಕ್ಕೆ ಒಂದು ಕೆ.ಜಿಯಂತೆ ಉತ್ತರ ಪ್ರದೇಶದ ವಿಶಿಷ್ಟವಾದ ಬೃಹದಾಕಾರದಲ್ಲಿ ಬೆಳೆಯುವ ತೊಗರಿ ಬೆಳೆಯ ತಳಿಯ ಬೀಜಗಳನ್ನು ತಂದು ಪ್ರಾಯೋಗಿಕವಾಗಿ ಬೆಳೆಯುತ್ತಿದ್ದಾರೆ. ಆ ಬೆಳೆಯ ಕುಡಿ ಚಿವುಟುವ ಕಾರ್ಯ ಭರದಿಂದ ನಡೆಸಿದ್ದಾರೆ. ಆ ಮೂಲಕ ಬಂಪರ್ ಬೆಳೆಯ ನಿರೀಕ್ಷೆಯಲ್ಲಿ ಇದ್ದಾರೆ.

ಕುಡಿ ಚಿವುಟುವುದು ಅಥವಾ ನಿಪ್ಪಿಂಗ್ ಎಂದು ಕರೆಯಲ್ಪಡುವ ಈ ಕ್ರಿಯೆಯಲ್ಲಿ ತೊಡಗಿರುವ ಮತ್ತೊಬ್ಬ ರೈತ ಚಂದ್ರು ಹಂಪನಗೌಡ್ರ 1850ಕ್ಕೆ ಕುಡಿ ಕತ್ತರಿಸುವ ಯಂತ್ರ ಖರೀದಿಸಿದ್ದು, ಕೀಟನಾಶಕ ಸಿಂಪರಣೆ ಯಂತ್ರದ ಬ್ಯಾಟರಿ ಅಳವಡಿಸಿಕೊಂಡು ದಿನಕ್ಕೆ ಎರಡು ಎಕರೆಯಂತೆ ತೊಗರಿ ಬೆಳೆಯ ಕುಡಿ ಕಟಾವು ಮಾಡಿದ ಅನುಭವ ಹಂಚಿಕೊಂಡರು.

ಶ್ರಮವಹಿಸಿ ಕತ್ತರಿಸಬಲ್ಲ ರೈತರು ದಿನಕ್ಕೆ ನಾಲ್ಕು ಎಕರೆ ಕುಡಿ ಕತ್ತರಿಸಬಲ್ಲರು, ಕುಡಿ ಮೇಲ್ಬಾಗದ ಕುಡಿಯನ್ನು 5-8 ಸೆಂ.ಮೀ.ನಷ್ಟು ಚಿವುಟುವುದಾಗಿದೆ. ಕುಡಿ ಚಿವುಟುವುದರಿಂದ ಈ ಬೆಳೆಗಳು ಎತ್ತರಕ್ಕೆ ಬೆಳೆಯುವುದು ಕುಂಟಿತವಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಕವಲೊಡೆಯಲು ಸಹಕಾರಿಯಾಗುತ್ತದೆ. ಇದರಿಂದ ಕಾಯಿಗಳ ಸಂಖ್ಯೆ ಹೆಚ್ಚಾಗಿ, ಇಳುವರಿ ಹೆಚ್ಚಾಗುತ್ತದೆ. ಮಾತ್ರವಲ್ಲದೆ ಬೆಳೆ ಎತ್ತರಕ್ಕೆ ಬೆಳೆಯುವುದು ಹತೋಟಿಗೆ ಬರುವುದರಿಂದ ಕೀಟನಾಶಕ, ಔಷಧಿಯನ್ನು ಸಿಂಪಡಿಸಲು ಅನುಕೂಲವಾಗುತ್ತದೆ’ ಎಂದು ಚಂದ್ರು ಹಂಪನಗೌಡ್ರ, ಅಡಿವೆಪ್ಪ ಕೆಂಭಾವಿ, ಶರಣು ಶೆಟ್ಟ‌ರ್, ಬಲದಿನ್ನಿ ಗ್ರಾಮದ ರೈತ ಅಮರೇಶ ತೊಂಡಿಹಾಳ ಹೇಳಿದರು.

ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿ” ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ವೀರನಗೌಡ ಅವರು ತಿಳಿಸಿದ್ದಾರೆ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಮಕ್ಕಳ ದಿನಾಚರಣೆ 2024ರ ಪ್ರಯುಕ್ತ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣದ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ 06 ರಿಂದ 18 ವರ್ಷ ಒಳಗಿರಬೇಕು.

ಬಾಲಕರಿಗೆ ಹೋಯ್ಸಳ” ಮತ್ತು ಬಾಲಕಿಯರಿಗೆ “ಕೆಳದಿ ಚೆನ್ನಮ್ಮ” ಶೌರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಪ್ರಕರಣವು 01-08-2023 00 27-08-2024 ಒಳಗಿರಬೇಕು. ದಿನಾಂಕ 01-08-2006 ರಂದು ಹಾಗೂ ನಂತರ ಜನಿಸಿದ ಮಕ್ಕಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ 10,000 ರೂ.ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಇದೆ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 25,000 ರೂ.ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ 1,00,000 ರೂ.ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು.

ಮಕ್ಕಳ ದಿನಾಚರಣೆ 2024ನೇ ಸಾಲಿನ ಪ್ರಶಸ್ತಿಗಾಗಿ ನಿಗದಿಪಡಿಸಿರುವ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರು ಕಛೇರಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿ ಕಛೇರಿಯಿಂದ ಪಡೆದು, ಭರ್ತಿಮಾಡಿ 2024ರ ಸೆಪ್ಟೆಂಬರ್ 20ರ ಒಳಗೆ ಅರ್ಜಿಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೋಣೆ ಸಂಖ್ಯೆ ಸಿ-17, ಸಿ-ಬ್ಲಾಕ್ ಒಂದನೇ ಮಹಡಿ, ಜಿಲ್ಲಾ ಆಡಳಿತ ಭವನ ಸಂಕೀರ್ಣ, ಚಿತ್ತಾಪೂರ ರಸ್ತೆ ಯಾದಗಿರಿ, ದೂರವಾಣಿ 20.08473 253739, 9113567035 ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಸಾಧಕರಿಂದ ಅರ್ಜಿ ಆಹ್ವಾನ

2024-25 ಸಾಲಿನಲ್ಲಿ ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಂದು ಪರಿಶಿಷ್ಟ ವರ್ಗದ (ಎಸ್‌ಟಿ) ಜನಾಂಗದ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲು ಅರ್ಹ ಎಸ್.ಟಿ ಸಮಾಜದ ಸಾಧಕ ವ್ಯಕ್ತಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಸಾಧಕರು ಸೆಪ್ಟೆಂಬರ್ 17ರ ಒಳಗಾಗಿ ಆಯಾ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗಳಿಗೆ ಅರ್ಜಿ ಸಲ್ಲಿಸಬಹುದು. ದಾಖಲಾತಿಗಳು: ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು 2 ಭಾವ ಚಿತ್ರಗಳು, ತುಂಬಿದ ಅರ್ಜಿ ಸರ್ಕಾರ ನಿರ್ಧರಿಸಿದ್ದು, ನಮೂನೆ, ಸಾಮಾಜಿಕ, ಆರ್ಥಿಕ, ಸಾಹಿತ್ಯಕ ಮತ್ತು ಇತರೆ ಸಾಧನೆಯ ದಾಖಲೆಗಳು, ಭಾವಚಿತ್ರಗಳು ಸಲ್ಲಿಸಬೇಕು.

ನಿಯಮ

ಸಾಧಕರವಯಸ್ಸು ಕನಿಷ್ಠ 35 ವರ್ಷಗಳಾಗಿರಬೇಕು.. ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯ ಪುರಸ್ಕೃತರನ್ನು ಮರಣೋತ್ತರವಾಗಿ ಆಯ್ಕೆ ಮಾಡುವುದಿಲ್ಲ., ಅಪಾರಾದ ಹಿನ್ನೆಲೆ ಇದ್ದವರನ್ನ ಪರಿಗಣಿಸುವುದಿಲ್ಲ.. ಒಬ್ಬ ವ್ಯಕ್ತಿಯನ್ನು ಜೀವಿತಾವಧಿಯಲ್ಲಿ ಒಂದೇ ಸಾರಿ ಆಯ್ಕೆ ಮಾಡಲಾಗುವುದು., ಪ್ರಶಸ್ತಿಯ ಬಹುಮಾನ 5 ಲಕ್ಷ, 20 ಗ್ರಾಮ್ ಚಿನ್ನದ ಪದಕ. ಪ್ರಶಂಸ ಪತ್ರ, ಶಾಲು, ಫಲಪುಷ್ಪ ಮತ್ತು ಗಂಧದಹಾರ ಒಳಗೊಂಡಿರುತ್ತದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *