ಆತ್ಮೀಯ ರೈತ ಬಾಂಧವರೇ ಇಂದು ನನ್ನ ಖಾತೆಗೆ ಮಧ್ಯಂತರ ಬೆಳೆ ವಿಮೆ ಜಮಾ ಆಗಿದೆ. ಇಂದು ಮುಂಜಾನೆ ನನ್ನ ಖಾತೆಗೆ 18 ಸಾವಿರ ರೂಪಾಯಿಗಳು ಜಮಾ ಆಗಿದೆ. ನನ್ನ ಹೆಸರಿನಲ್ಲಿ 5 ಎಕರೆ 15 ಗುಂಟೆ ಹೊಲ ಇದೆ. ಈ ಹೊಲಕ್ಕೆ ಒಟ್ಟಾರೆ 18,305 ರೂಪಾಯಿಗಳನ್ನು ನಮ್ಮ ಸರ್ಕಾರವು ಮಧ್ಯಂತರ ಬೆಳೆ ವಿಮೆಯನ್ನು ಡಿ ಬಿ ಟಿ ಮುಖಾಂತರ ನನ್ನ ಖಾತೆಗೆ ಹಣವನ್ನು ಹಾಕಿದ್ದಾರೆ. ಈಗ ಇದು ಕೇವಲ 25% ಹಣವಾಗಿದೆ. ಉಳಿದ ಹಣವನ್ನು ಸರ್ಕಾರವು ಮುಂದಿನ ದಿನಗಳಲ್ಲಿ ನೀವು ಯಾವ ಬೆಳೆಗೆ ಹಣವನ್ನು ತುಂಬಿದ್ದೀರಿ ಅದನ್ನು ನೋಡಿಕೊಂಡು ಎಷ್ಟು ಶೇಕಡ ಹಣವನ್ನು ನೀಡಬೇಕೆಂದು ನಿರ್ಧಾರ ಮಾಡಿ ನಿಮಗೆ ಹಣವನ್ನು ಸರ್ಕಾರವು ತಲುಪಿಸುತ್ತದೆ.
ಹಣ ಬಂದಿದೆ ಎಂದು ಚೆಕ್ ಮಾಡುವುದು ಹೇಗೆ?
ರೈತರು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಮೊದಲು ಕ್ಲಿಕ್ ಮಾಡಿ. https://samrakshane.karnataka.gov.in/Premium/CheckStatusMain_aadhaar.aspx ಅಲ್ಲಿ ನೀವು ನಿಮ್ಮ proposal number ಅಂದರೆ ನೀವು ಬೆಳೆ ವಿಮೆಯನ್ನು ತುಂಬುವಾಗ ನಿಮಗೆ ಅಪ್ಲಿಕೇಶನ್ ನಂಬರ್ ಬಂದಿರುತ್ತದೆ ಅದನ್ನು ನೀವು ನೋಡಿಕೊಂಡು ಅಲ್ಲಿ ತುಂಬ ಬೇಕಾಗುತ್ತದೆ. ಒಂದು ವೇಳೆ ನೀವು ನಿಮ್ಮ ಸರಿಯಾದ ಮೊಬೈಲ್ ಸಂಖ್ಯೆಯನ್ನು ಅಲ್ಲಿ ಕೊಟ್ಟಿದ್ದರೆ ಅದನ್ನು ಕೂಡ ಹಾಕಬಹುದು. ಅದು ಇಲ್ಲದಿದ್ದರೆ ನಿಮ್ಮ ಆಧಾರ್ ಸಂಖ್ಯೆಯನ್ನು ಕೂಡ ನಮೂದಿಸಬಹುದು. ನಂತರ ಕೆಳಗಿನ ಚಿತ್ರದಲ್ಲಿ ಕಾಣುವ ಹಾಗೆ ಅಲ್ಲಿ ಕಾಣುವ ಕ್ಯಾಪ್ಚ ಕೋಡನ್ನು ಕೂಡ ನೀವು ಸರಿಯಾಗಿ ನಮೂದಿಸಿ. Search ಬಾಗಿ ಮೇಲೆ ಕ್ಲಿಕ್ ಮಾಡಿ.
ಕೆಳಗಿನ ಚಿತ್ರದಲ್ಲಿ ಕಾಣುವಹಾಗೆ ನಿಮ್ಮ ಮುಂದೆ ಒಂದು ಹೊಸ ಪರದೆ ತೆರೆದು ಬರುತ್ತದೆ. ಅಲ್ಲಿ ನೀವು ನಮೂದಿಸಿದ ಸಂಖ್ಯೆ, ನಿಮ್ಮ ಹೊಲದ ಪಹಣಿಯ ಸಂಖ್ಯೆ, ಯಾವ ದಿನದಂದು ನಿಮಗೆ ಹಣ ಬಂದಿದೆ ಎಂದು ನೋಡಿಕೊಳ್ಳಬಹುದು. ಬಾಣದ ಗುರುತನ್ನು ಒಮ್ಮೆ ನೋಡಿ ಅಲ್ಲಿ ನಿಮಗೆ ಎಷ್ಟು ಹಣವು ಬಂದಿದೆ ಎಂದು ತೋರಿಸಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮಾತ್ರ ಕೆಳಗಿನ ಲೇಖನವನ್ನು ಓದಿ
ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ
2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲು ಮಂಜೂರಾತಿ ನೀಡಿರುತ್ತದೆ. ಈ ಯೋಜನೆಯ ರೂಪುರೇಷೆ ಮತ್ತು ವಿವರಗಳನ್ನು ಇಲ್ಲಿ ನೀಡಲಾಗಿದೆ.
ಪ್ರಸ್ತುತ ಸಾಲು ಹಾಗೂ ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಇಚ್ಛೆಯುಳ್ಳ ಬೆಳೆ ಸಾಲ ಪಡೆದ / ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣೆ/ ಖಾತೆ ಪುಸ್ತಕ/ಪಾಸ್ ಪುಸ್ತಕ/ ಕಂದಾಯ ರಶೀದಿ ಮತ್ತು ಆಧಾರ್ ಸಂಖ್ಯೆಯನ್ನು ನೀಡಿ ನೋಂದಾಯಿಸಿಕೊಳ್ಳಬಹುದು. ಬೆಳೆಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಹಣಕಾಸು ಪ್ರಮಾಣ Scale of Finance ಆಧಾರಮೇಲೆ ನಿರ್ಧರಿಸಲಾಗುವದು.
ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿಯಲ್ಲಿ ಒಳಪಡಿಸಲಾಗುವುದು. ತದನಂತರ ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ, ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈ ಬಿಡಲಾಗುವುದು. ಸಂಬಂಧಿಸಿದ ಬ್ಯಾಂಕ್‌ಗಳು ಈ ರೀತಿ ಸ್ವೀಕರಿಸಲಾಗದ ಮುಚ್ಚಳಿಕೆ ಪತ್ರಗಳನ್ನು ಇತರೆ ದಾಖಲೆಗಳೊಂದಿಗೆ ವ್ಯವಸ್ಥಿತವಾಗಿ ನಿರ್ವಹಿಸುವುದು.
ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಗುಣವಾಗಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸಲಾಗುವುದು.
ಇಂತಹ ಸ್ಥಳೀಯ ಗಂಡಾಂತರಗಳ ಕಾರಣದಿಂದ ಬೆಳೆ ನಷ್ಟ ಸಂಭವಿಸಿದರೆ, ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಛೇರಿಗಳಿಗೆ ತಕ್ಷಣ ಸೂಚನೆ ನೀಡುವುದು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸುವುದು. ನಷ್ಟದ ಬಗೆಗಿನ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ವಿಮಾ ಸಂಸ್ಥೆಗಳು ಬೆಳೆ ನಷ್ಟವನ್ನು ನಿರ್ಧರಿಸುವುದಕ್ಕೆ ನಷ್ಟ ನಿರ್ಧಾರಕರನ್ನು ಸಂಬಂಧ ಪಟ್ಟ ಪ್ರದೇಶಕ್ಕೆ 48 ಗಂಟೆಯೊಳಗಾಗಿ ನಿಯೋಜಿಸುವುದು.
ಕೃಷಿ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳ ಸೂಚನೆ
ವಿಮೆ ಸಂಸ್ಥೆಯಿಂದ ನೇಮಿಸಲ್ಪಟ್ಟ ನಷ್ಟ ನಿರ್ಧಾರಕರು ಮತ್ತು ಸ್ಥಳೀಯ ತಾಲ್ಲೂಕು/ ಹೋಬಳಿ ಮಟ್ಟದ ಕೃಷಿ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಜಂಟಿಯಾಗಿ, ಹಾನಿಗೊಳಗಾದ ರೈತರ ಸಮ್ಮುಖದಲ್ಲಿ ಬೆಳೆ ನಷ್ಟ ನಿರ್ಧರಿಸುವುದು. ಪ್ರಸಕ್ತ ಸಾಲು ಮತ್ತು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇಕಡಾ 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇಕಡಾ 25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ವಿಮೆಯನ್ನು ರದ್ದು ಪಡಿಸಲಾಗುವುದು.
ಈ ಸಂಬಂಧ ಬಿತ್ತನೆ ಕ್ಷೇತ್ರದ ವರದಿಯನ್ನು ಘೋಷಿಸಲು ಜಿಲ್ಲೆಗಳ ಜಿಲ್ಲಾಧಿಕಾರಿಯವರನ್ನು ಹಾಗೂ ಮಳೆ ಮತ್ತು ಇತರೆ ಕೃಷಿ ಹವಾಮಾನದ ವರದಿಯನ್ನು ನೀಡಲು ನಿರ್ದೇಶಕರು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಇವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳಿಂದ ವರದಿ ಬಂದ ನಂತರ ಒಂದು ತಿಂಗಳೊಳಗೆ ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಮೇಲಿನಂತೆ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು.
ಸಾಮಾನ್ನ ಬೆಳೆ ಅಂದಾಜು ಸಮೀಕ್ಷೆಯಡಿ ರಾಜ್ಯ ಸರ್ಕಾರವು ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಕಂಡುಹಿಡಿಯಲಾದ ಇಳುವರಿ ಮಾಹಿತಿಯನ್ನು ಮಾತ್ರ ಪರಿಗಣಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಲೆಕ್ಕಹಾಕಿ ಇತ್ಯರ್ಥಪಡಿಸಲಾಗುವುದು. ವಿಮಾ ಪಾವತಿಯನ್ನು ಆಯಾ ಬೆಳೆಯ ಅಧಿಸೂಚಿತ ವಿಮಾ ಘಟಕದ ಸರಾಸರಿ ಇಳುವರಿ (Threshold yield) (ಕಳೆದ 7 ವರ್ಷಗಳು ಅಂದರೆ, 2016 ವರ್ಷದಿಂದ 2022 ವರ್ಷದವರೆಗಿನ ಇಳುವರಿಯನ್ನು ಪರಿಗಣಿಸುವುದು ಹಾಗೂ ಇದರಲ್ಲಿ ಉತ್ತಮ 5 ವರ್ಷಗಳ ಸರಾಸರಿ ಇಳುವರಿಯನ್ನು ಪರಿಗಣಿಸಲಾಗುವುದು)
ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ
2023-24 ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೈಗೊಳ್ಳಲು ರೈತರು ತಮ್ಮ ಬೆಳೆಗಳ ವಿವರಗಳನ್ನು ಬೆಳೆ ಸಮೀಕ್ಷೆ ಆ್ಯಪ್ ನಲ್ಲಿ ದಾಖಲಿಸುವ ಕುರಿತು. 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಈಗಾಗಲೇ ಪ್ರಾರಂಭವಾಗಿದ್ದು, ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ತಾವೇ ಖುದ್ದಾಗಿ ಗೂಗಲ್ ಪ್ಲೇಸ್ಟೋರ್ ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ 2023” ಹಾಗೂ ಆಯಾ ಗ್ರಾಮದ ಖಾಸಗಿ ನಿವಾಸಿಗಳ “ಮುಂಗಾರು ಬೆಳೆ ಸಮೀಕ್ಷೆ 2023-24” ನ್ನು Download ಮಾಡಿಕೊಂಡು ಬೆಳೆ ವಿವರಗಳನ್ನು ದಾಖಲಿಸಬೇಕಾಗಿದೆ. ಹೀಗೆ ವಿವರಗಳನ್ನು ದಾಖಲಿಸುವದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ನಷ್ಟ ಪರಿಹಾರ ಪಡೆಯಲು, ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಮತ್ತು ಬೆಳೆಸಾಲ ಪಡೆಯುವಲ್ಲಿ ರೈತರಿಗೆ ಅನುಕೂಲವಾಗುವದರಿಂದ ಎಲ್ಲ ರೈತರು ಬೆಳೆ ವಿವರಗಳನ್ನು ತ್ವರಿತವಾಗಿ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ದಾಖಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ.
ರೈತರು ಬೆಳೆ ವಿವರಗಳನ್ನು ಅಪ್‌ಲೋಡ್ ಮಾಡದಿದ್ದಲ್ಲಿ ಮೇಲೆ ತಿಳಿಸಿದ ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗುವ ಸಾಧ್ಯತೆ ಇರುವುದರಿಂದ ರೈತರು ಇದನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ವಿವರಗಳನ್ನು ದಾಖಲಿಸಬೇಕು. ಈಗಾಗಲೇ ಜಿಲ್ಲೆಯ 6 ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದ್ದು ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯವಾಗಿರುತ್ತದೆ. ಎಂದು ಶ್ರೀಮತಿ ತಾರಾಮಣಿ ಜಿ.ಹೆಚ್. ಜಂಟಿ ಕೃಷಿ ನಿರ್ದೇಶಕರು, ಗದಗ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಗ್ರಾಮದ ಖಾಸಗಿ ನಿವಾಸಿಗಳು, ಕಂದಾಯ/ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು ಹಾಗೂ 18004253553 ಗೆ ಕರೆ ಮಾಡಲು ಕೋರಿದೆ.
ಆರ್ಥಿಕ ಸಂಸ್ಥೆಗಳು / ಬ್ಯಾಂಕುಗಳು “ಸಂರಕ್ಷಣೆ” ಪೋರ್ಟಲ್ ಮೂಲಕ ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರಿಗೆ ಸಂಬಂಧಿಸಿದ ಪ್ರಸ್ತಾವನೆಗಳ ವಿವರಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಲು ಹಾಗೂ ವಿಮಾ ಸಂಸ್ಥೆಗಳಿಗೆ ವರ್ಗಾಯಿಸಲು ಮತ್ತು ವಿಮಾ ಕಂತಿನ ಮೊತ್ತವನ್ನು ನೀಡಲು ರೈತರು ನೋಂದಣಿ ಮಾಡುವ ಕೊನೆಯ ದಿನಾಂಕದಿಂದ 15 ದಿನಗಳೊಳಗಾಗಿ ಅಂತಿಮಗೊಳಿಸುವುದು.