ಜನೆವರಿ 5 ರಂದು ಶಿಗ್ಲಿ ಮತ್ತು ಲಕ್ಷೇಶ್ವರದಲ್ಲಿ ಇ-ಶ್ರಮ್ ಯೋಜನೆಯಡಿ ನೇಕಾರರನ್ನು (ಕೈಮಗ್ಗ ಮತ್ತು ವಿದ್ಯುತ್ ಮಗ್ಗ ಕಾರ್ಮಿಕರನ್ನು) ನೊಂದಾಯಿಸಲು ಕಾರ್ಮಿಕ ಇಲಾಖೆ ಮತ್ತು ಜವಳಿ ಇಲಾಖೆ ಸಹಯೋಗದೊಂದಿಗೆ ಉಚಿತ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಚೇರಿ, ಜಿಲ್ಲಾ ಆಡಳಿತ ಭವನ, ಕೊಠಡಿ ಸಂಖ್ಯೆ 124, 1 ನೇ ಮಹಡಿ, ಹುಬ್ಬಳ್ಳಿ ರಸ್ತೆ,ಗದಗ ಇವರನ್ನು ಸಂಪರ್ಕಿಸಬಹುದಾಗಿದೆ.
ಶ್ರೇಷ್ಠ ತೋಟಗಾರಿಕೆ, ರೈತ ಪ್ರಶಸ್ತಿಗೆ ಅರ್ಜಿ
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ 2023-24ರ ಸಾಲಿನಲ್ಲಿ ಫೆಬ್ರವರಿ 10 ರಿಂದ 12 ರವರೆಗೆ ಬಾಗಲಕೋಟೆಯ ಉದ್ಯಾನಗಿರಿ ಆವರಣದಲ್ಲಿ ತೋಟಗಾರಿಕೆ ಮೇಳದ ಅಂಗವಾಗಿ ತೋಟಗಾರಿಕೆ ವಿವಿಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 24 ಜಿಲ್ಲೆಗಳಿಗೆ ಪ್ರತಿಯೊಂದು ಜಿಲ್ಲೆಗೆ ಒಬ್ಬ ಶ್ರೇಷ್ಠ ತೋಟಗಾರಿಕೆ ರೈತ ಅಥವಾ ರೈತ ಮಹಿಳೆ ಆಯ್ಕೆ ಮಾಡಿ ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ಜಿಲ್ಲೆಯ ತೋಟಗಾರಿಕೆ ಸಾಧಕ ರೈತ ಅಥವಾ ರೈತ ಮಹಿಳೆ ಆಯ್ಕೆಗಾಗಿ ನಿಗಧಿತ ಅರ್ಜಿ ನಮೂನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಛಾಯಾಚಿತ್ರಗಳ ಮೂಲಕ ದೃಢೀಕರಿಸಿ ಸಲ್ಲಿಸಬೇಕು.
ಜಿಲ್ಲೆಯ ರೈತ ಅಥವಾ ರೈತ ಮಹಿಳೆ ಅರ್ಜಿ ನಮೂನೆಯನ್ನು ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟ ಕಛೇರಿಯಿಂದ ಅಥವಾ ವಿಸ್ತರಣಾ ಮುಂದಾಳು, ವಿಸ್ತರಣಾ ನಿರ್ದೇಶನಾಲಯದಿಂದ ಅಥವಾ ತೋವಿವಿಯ ಅಂತರ್ಜಾಲ ಮೂಲಕವು ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಜನವರಿ 10 ರೊಳಗಾಗಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವವರು ಕರ್ನಾಟಕದ ಯಾವದೇ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಐಸಿಎಆರ್ ಪ್ರಶಸ್ತಿಗಳನ್ನು ತಮ್ಮ ಹಾಗೂ ತಮ್ಮ ಕುಟುಂಬದ ಯಾವುದೇ ಹೆಸರಿನಲ್ಲಿ ಪಡೆದಿರಬಾರದು. ಸಲ್ಲಿಕೆಯಾದ ಅರ್ಜಿಗಳನ್ನು ಆಯ್ಕೆ ಸಮಿತಿ ಪರೀಶಿಲಿಸಿ ಕಿರುಪಟ್ಟಿ ಮಾಡಿದ ಮೂರು ಕ್ಷೇತ್ರಗಳಿಗೆ ಮಾತ್ರ ಕ್ಷೇತ್ರ ವೀಕ್ಷಣೆ ಕೈಗೊಳ್ಳಲಾಗುವುದು. ನಿಯಮ ಹಾಗೂ ಆಯ್ಕೆ ಸಮಿತಿಯ ನಿರ್ಧಾರಕ್ಕೆ ಒಳಪಟ್ಟಿರುತ್ತಾರೆ. ಹೆಚ್ಚಿನ ವಿವರಗಳಿಗಾಗಿ 9480696381, 9845655856, 9741900255 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಮಣ್ಣು ಫಲವತ್ತತೆಗಾಗಿ ಸೆಣಬು ಬೆಳೆಯಿರಿ
ಸೆಣಬು ಒಂದು ಮುಖ್ಯವಾದ ದ್ವಿದಳ ಧಾನ್ಯ ಜಾತಿಗೆ ಸೇರಿದ ಹಸಿರು ಗೊಬ್ಬರದ ಬೆಳೆ. ಇದು ಎಲ್ಲಾ ತರಹದ ಹವಾಮಾನ ಹಾಗೂ ಎಲ್ಲಾ ಪ್ರದೇಶಗಳಿಗೂ ಹೊಂದಿಕೊಂಡು ಬೆಳೆಯುವ ಹಸಿರು ಗೊಬ್ಬರದ ಬೆಳೆ, ಇದನ್ನು ಹಸಿರು ಗೊಬ್ಬರವಲ್ಲದೆ, ರಾಸುಗಳಿಗೆ ಮೇವಾಗಿಯೂ ಸಹ ಉಪಯೋಗಿಸಬಹುದು. ಇದರ ಮಹತ್ವ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಗಿಡಗಳು ಸುಮಾರು ಒಂದು ಮೀಟರ್ ಎತ್ತರದವರೆಗೂ ಬೆಳೆದು ಹಳದಿ ಹೂ ಬಿಡುತ್ತವೆ. ಬೆಳೆ ಉಳಿಕೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶೇ.0.75 ಸಾರಜನಕ, ಶೇ. 0.12 ರಂಜಕ, ಶೇ. 0.51 ಪೋಟ್ಯಾಪ್ ಮತ್ತು ಇತರ ಲಘು ಪೋಷಕಾಂಶಗಳಿವೆ. 15-20 ಬೀಜವನ್ನು ಚೆಲ್ಲಬೇಕು. ಬೆಳೆಯು ಸುಮಾರು 40-45 ದಿನಗಳಲ್ಲಿ ಹೂ ಬಿಡುತ್ತದೆ.
ಈ ಹಂತದಲ್ಲಿ ಬೆಳೆಯನ್ನು ಮುಗ್ಗು ಒಡೆಯುವುದರಿಂದ, ಎಕರೆಗೆ 8-10 ಟನ್ ಹಸಿರು ಗೊಬ್ಬರವನ್ನು ಮಣ್ಣಿಗೆ ಸೇರಿಸಿದಂತಾಗುತ್ತದೆ. ಏರುತ್ತಿರುವ ರಾಸಾಯನಿಕ ಗೊಬ್ಬರಗಳ ಇಂದಿನ ಪರಿಸ್ಥಿತಿಯಲ್ಲಿ ಹಸಿರು ಗೊಬ್ಬರಗಳು, ಬೆಳೆಗೆ ಪೋಷಕಾಂಶ ಒದಗಿಸಿ, ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ರೈತರಿಗೆ ವರದಾನವಾಗಿವೆ. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ವಿಶ್ವ ಕೌಶಲ್ಯ ಸ್ಪರ್ಧೆ
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ವಿಶ್ವ ಕೌಶಲ್ಯ ಸ್ಪರ್ಧೆಯನ್ನು ಆಯೋಜಿಸಿದ್ದು, ಈ ಸ್ಪರ್ಧೆಗೆ ವಿವಿಧ ಹಂತದಲ್ಲಿ ಆಯ್ಕೆಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ರಾಜ್ಯದಲ್ಲಿನ ಯುವ ಜನತೆಯು ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸುವ ನಿಟ್ಟಿನಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಮತ್ತು ಜೀವನೋಪಾಯ ಇಲಾಖೆಯಿಂದ ವಿಶ್ವ ಕೌಶಲ್ಯ ಸ್ಪರ್ಧೆಯ ಅಂಗವಾದ ಇಂಡಿಯಾ ಸ್ಟೀಲ್ ಕರ್ನಾಟಕ ಸ್ಪರ್ಧೆಗಳಿಗೆ ರಾಜ್ಯವನ್ನು ಪ್ರತಿನಿಧಿಸಲು ನಿಗಮವು ಜಿಲ್ಲಾ, ವಲಯ ಹಾಗೂ ರಾಜ್ಯಮಟ್ಟದ ಸ್ಪರ್ಧೆಯನ್ನು ಏರ್ಪಡಿಸಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು 7ನೇ ಜನೇವರಿ 2024 ರೊಳಗಾಗಿ ಜಾಲತಾಣದಲ್ಲಿ ನೊಂದಾಯಿಸುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದಿ ಕಛೇರಿ ಗದಗ ಜಿಲ್ಲೆಯ ಸಂಕಲ್ಪ ಸಂಯೋಜನಕರಾದ ಶಿವಾನಂದ ಕಂಬಾರ ಮೊ. 9916185682 ರವರಿಗೆ ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ:18005999918 ನ್ನು ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಕೊಠಡಿ ಸಂಖ್ಯೆ-106, ಜಿಲ್ಲಾಡಳಿತ ಭವನ, 1ನೇ ಮಹಡಿ ಗದಗ ಇಲ್ಲಿ ಕಛೇರಿಯ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಗದಗ ಜಿಲ್ಲಾ ಕೌಶಲ್ಯಾಬಿವೃದ್ಧಿ ಅಧಿಕಾರಿಗಳಾದ ಡಾ. ಮಲ್ಲೂರ ಬಸವರಾಜ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಯೋಜನೆಗಳ ಪ್ರಯೋಜನೆ ಪಡೆಯಲು ಕಡ್ಡಾಯವಾಗಿ ರೈತರು ಎಫ್‌ಐಡಿ ಹೊಂದಿರಬೇಕು
ಜಿಲ್ಲೆಯ 08 ತಾಲ್ಲೂಕುಗಳನ್ನು ರಾಜ್ಯಸರ್ಕಾರ ಬರ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದ್ದು, ಬರ ಘೋಷಿತ ತಾಲ್ಲೂಕುಗಳಲ್ಲಿ ಬೆಳೆನಷ್ಟವಾಗಿರುವ ರೈತರು ಪರಿಹಾರಧನ ಪಡೆಯಲು ಕಡ್ಡಾಯವಾಗಿ ಎಫ್ ಐಡಿ ಹೊಂದಿರಬೇಕು ಹಾಗೂ ಎಫ್‌ಐಡಿಯಲ್ಲಿ ರೈತರು ತಮ್ಮ ಹಕ್ಕಿನಲ್ಲಿರುವ ಎಲ್ಲಾ ಸಾಗುವಳಿ ಭೂಮಿಗಳ ವಿವರಗಳನ್ನು ಸೇರಿಸಿರಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣಕುಮಾರ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳೆನಷ್ಟವಾಗಿರುವ ರೈತರು ಪರಿಹಾರಧನ ಪಡೆಯಲು ಕಡ್ಡಾಯವಾಗಿ ಎಫ್‌ಐಡಿ ಯೊಂದಿಗೆ ತಾವು ಹೊಂದಿರವ ಎಲ್ಲ ಸಾಗುವಳಿ ಜಮೀನುಗಳನ್ನು ನೋಂದಾಣಿ ಮಾಡಿಕೊಂಡಿರಬೇಕು. ಎಫ್‌ಐಡಿ ಯಲ್ಲಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಮಾತ್ರ ಸರ್ಕಾರದ ಪರಿಹಾರಧನ ಸೌಲಭ್ಯ ದೊರೆಯುವುದರಿಂದ ರೈತರು ತಮ್ಮ ಎಲ್ಲಾ ಜಮೀನಿನ ಸರ್ವೇನಂಬರ ವಿಸ್ತೀರ್ಣಗಳನ್ನು ಕೂಡಲೇ ಫೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ಬರಪರಿಹಾರದ ಹಣ ಮಾತ್ರವಲ್ಲದೇ, ಬೆಳೆವಿಮೆ, ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಮಾರಾಟ ಮಾಡಲು, ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಹಾಗೂ ಬ್ಯಾಂಕ್ ಸಾಲಪಡೆಯಲು ಎಫ್‌ಐಡಿ ಕಡ್ಡಾಯವಾಗಿದೆ. ರೈತರು ಮೇಲೆ ತಿಳಿಸಿದ ದಾಖಲಾತಿಗಳೊಂದಿಗೆ ವಿಳಂಬ ಮಾಡದೇ ಈ ಕೂಡಲೇ ಎಫ್ ಐಡಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಂದಾಯ, ಕೃಷಿ, ತೋಟಗಾರಿಕೆ, ರೇಷೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಕಿರಣಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.