ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕೆ ಸಂಘ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿ ಇಂಡಿ ಹಾಗೂ ಹಾಪ್ ಕಾಮ್ಸ್ ವಿಜಯಪುರ ಇವರ ಸಹಯೋಗದಲ್ಲಿ ಜ.13 ರಿಂದ 16ರವರೆಗೆ ನಗರದ ಬಸವ ವನದ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಮೂರು ದಿಗಳ ಫಲ-ಪುಷ್ಪ ಪ್ರದರ್ಶನ, ಹಣ್ಣುಗಳ ಮೇಳ ಹಾಗೂ ತೋಟಗಾರಿಕೆ ಅಭಿಯಾನ ‘ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ರೈತರು ಬೆಳೆದಿರುವ ವಿವಿಧ ಹಾಗೂ ಅತ್ಯುತ್ತಮ ತೋಟಗಾರಿಕೆ ಬೆಳೆಗಳ ಪ್ರದರ್ಶನ, ಇಲಾಖಾ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿಯ ಜೊತೆಗೆ ಹಣ್ಣು, ಹೂ, ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳ ಪ್ರದರ್ಶನ ಮತ್ತು ತೋಟಗಾರಿಕೆಯಲ್ಲಿ ಯಾಂತ್ರೀಕರಣ, ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಮತ್ತು ಲಿಂಬೆ ಕುರಿತು ಒಂದು ದಿನದ ವಿಚಾರ ಸಂಕೀರ್ಣ ಹಾಗೂ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ರೈತರು, ನಾಗರಿಕರು ಮತ್ತು ಶಾಲಾ ಕಾಲೇಜಿನ ಮಕ್ಕಳು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದಿ ಬದಿ ಮಕ್ಕಳ ಗುರುತಿಸುವಿಕೆಗೆ “ಬಾಲಸ್ವರಾಜ” ಪೋರ್ಟಲ್
ಬೀದಿ ಬದಿ ಮಕ್ಕಳ ಗುರುತಿಸುವಿಕೆ, ರಕ್ಷಣಾ ಕಾರ್ಯಾಚರಣೆ ಮತ್ತು ಸೂಕ್ತ ಪುನರ್ವಸತಿಗಾಗಿ “ಬಾಲಸ್ವರಾಜ” ಪೋರ್ಟಲನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. ಮಕ್ಕಳ ರಕ್ಷಣೆ, ಬೀದಿಬದಿ ಮಕ್ಕಳ ಗುರುತಿಸುವಿಕೆ, ರಕ್ಷಣಾ ಕಾರ್ಯಾಚರಣೆ ಮತ್ತು ಪುನರ್ವಸತಿಗೊಳಿಸುವ ಕಾರ್ಯದಲ್ಲಿ ಸಮುದಾಯ ಸಹಭಾಗಿತ್ವ ಅವಶ್ಯಕವಾಗಿರುವ ಹಿನ್ನಲೆಯಲ್ಲಿ ಆಸಕ್ತ ವೃತ್ತಿಪರರು, ತಜ್ಞರು, ನಾಗರಿಕರು, ಸರಕಾರೇತರ ಸಂಸ್ಥೆಗಳು, ಸಮುದಾಯ ಸೇವಾ ಸಂಸ್ಥೆಗಳು ರಕ್ಷಣೆ ಅವಶ್ಯವಿರುವ ಮಕ್ಕಳಿಗೆ ಸಹಾಯ ಒದಗಿಸಲು “ಬಾಲಸ್ವರಾಜ ಪೋರ್ಟಲ ಸಿಟಿಜನ್ ಪೋರ್ಟಲ್ ಲಿಂಕ್” ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ದೇಸಿ ಯೋಜನೆಯಡಿ ಪೆಸಿಲಿಟೇಟರ್ ಹುದ್ದೆಗೆ ತಾತ್ಕಾಲಿಕ ನೇಮಕಾತಿಗಾಗಿ ಸಂದರ್ಶನ
ಕೃಷಿ ವಿಶ್ವವಿದ್ಯಾಲಯದ ದೇಸಿ (ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪೊಮಾ ಕೋರ್ಸ್) ಯೋಜನೆಯಡಿ, ಕೃಷಿ ವಿಜ್ಞಾನ ಕೇಂದ್ರಗಳಾದ ಧಾರವಾಡ, ಬಾಗಲಕೋಟೆ, ಹನುಮನಮಟ್ಟಿ (ಹಾವೇರಿ) ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸಂಕೇಶ್ವರ (ಬೆಳಗಾವಿ) ಗಳಲ್ಲಿ ಕಾಲಿ ಇರುವ ಪೆಸಿಲಿಟೇಟರ್ ಹುದ್ದೆಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೃಷಿ ಅಥವಾ ತೋಟಗಾರಿಕಾ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಮತ್ತು ಕನಿಷ್ಟ ಮೂರು ವರ್ಷಗಳ ಸೇವಾ ಅನುಭವ ಪಡೆದಿರಬೇಕು. ಅಭ್ಯರ್ಥಿಗಳು ಅರ್ಜಿ ನಮೂನೆಯ ಎರಡು ಪ್ರತಿ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಜನವರಿ 19, 2024 ರಂದು ಮುಂಜಾನೆ 11 ಗಂಟೆಗೆ ವಿಸ್ತರಣಾ ನಿರ್ದೇಶನಾಲಯ ಕೃಷಿ ವಿಶ್ವವಿದ್ಯಾಲಯ ಧಾರವಾಡ ಇಲ್ಲಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಶ್ವವಿದ್ಯಾಲಯ, ಧಾರವಾಡ ವೆಬ್‌ಸೈಟ್: www.uasd.edu ಸಂಪರ್ಕೀಬೇಕೆಂದು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಣಸಿನಕಾಯಿ ಬೆಳೆಯ ಸಮಗ್ರ ನಿರ್ವಹಣೆ ತರಬೇತಿ ಕಾರ್ಯಾಗಾರ
ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ 2023-24 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ “ಮೆಣಸಿನಕಾಯಿ ಬೆಳೆಯ ಸಮಗ್ರ ನಿರ್ವಹಣೆ” ಕುರಿತು ಕುರುಗೋಡು ತಾಲ್ಲೂಕಿನ ಬೈಲೂರು ಗ್ರಾಮದ ಮಲ್ಲಪ್ಪ ತಾತಾನವರ ಹೊಲದಲ್ಲಿ ರೈತರಿಗೆ ಇತ್ತೀಚೆಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರತ್ನಪ್ರಿಯಾ ಯರಗಲ್ಲ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರೈತರು ಮೆಣಸಿನಕಾಯಿಯಲ್ಲಿ ಬರುವ ರೋಗ ಮತ್ತು ಕೀಟಗಳ ನಿರ್ವಹಣೆ ಬಗ್ಗೆ ಅರಿತುಕೊಳ್ಳಬೇಕು.
ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು. ಹಗರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ.ಎಂ.ಆರ್ ಗೋವಿಂದಪ್ಪನವರು ಮಾತನಾಡಿ, ರೈತರು ಮೆಣಸಿನಕಾಯಿ ಬೆಳೆಯನ್ನು ಹತ್ತಿರದ ಸಾಲುಗಳಲ್ಲಿ ನಾಟಿ ಮಾಡುವುದರಿಂದ ಗಿಡಗಳಲ್ಲಿ ಬೆಳಕಿನ ಕೊರತೆ ಮತ್ತು ಗಾಳಿ ಹರಡುವಿಕೆ ಕಡಿಮೆಯಾಗಿ ಬೆಳೆಗಳಲ್ಲಿ ರೋಗ ಮತ್ತು ಕೀಟ ಭಾದೆ ಸಮಸ್ಯೆ ಹೆಚ್ಚುತ್ತದೆ. ಆದ್ದರಿಂದ ರೈತರು ಅಗಲವಾದ ಸಾಲುಗಳನ್ನು ಮಾಡಿ ನಾಟಿ ಮಾಡಬೇಕು ಮತ್ತು ಜೈವಿಕ ಶಿಲೀಂದ್ರ ನಾಶಕಗಳನ್ನು ಹೆಚ್ಚು ಬಳಸುವುದರಿಂದ ಭೂಮಿಯಿಂದ ಬರುವ ರೋಗಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ರವಿ.ಎಸ್ ಅವರು ಮಾತನಾಡಿ, ಮೆಣಸಿನಕಾಯಿ ಬೆಳೆಯಲ್ಲಿ ಹೆಚ್ಚು ರಸಗೊಬ್ಬರಗಳನ್ನು ಅವೈಜ್ಞಾನಿಕವಾಗಿ ಮಣ್ಣು ಪರೀಕ್ಷೆ ಮಾಡಿಸದೆ ಗಿಡಗಳಿಗೆ ಬಳಸುವುದರಿಂದ ಮಣ್ಣು ಫಲವತ್ತತೆ ಕಡಿಮೆಯಾಗಿ ಇಳುವರಿ ಕಡಿಮೆಯಾಗುತ್ತದೆ ಎಂದು ತಿಳಿಸಿದರು.ಸೂಕ್ಷ್ಮಜೀವಿಗಳ ಸಂಖ್ಯೆ ಮತ್ತು ಅವುಗಳ ಚಟುವಟಿಕೆ ಕಡಿಮೆಯಾಗಿ ಹೊಲದಲ್ಲಿ ಪೊಷಕಾಂಶಗಳ ಲಭ್ಯತೆ ಮತ್ತು ಪ್ರಸರಣೆ ಕಡಿಮೆಯಾಗುತ್ತದೆ. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತದೆ.