ತೋಟಗಾರಿಕೆ : ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಜಿ, ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಗೆ 2023-24 ನೇ ಸಾಲಿಗೆ ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ರೈತರು ಸಂಬಂಧಿಸಿದ ತಾಲೂಕಿನ ತೋಟಗಾರಿಕೆ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ :
ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ, ಹೂವು ಮತ್ತು ತೋಟದ ಬೆಳೆ (ಪ್ಲಾಂಟೇಶನ್) ಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಒಟ್ಟು 5 ಹೆಕ್ಟೇರ್ ವರೆಗೆ ಸಹಾಯಧನ ನೀಡಲಾಗುತ್ತದೆ. ಗರಿಷ್ಠ 2 ಹೆಕ್ಟೇರ್ ವರೆಗೆ ಸಾಮಾನ್ಯ ವರ್ಗದ ರೈತರಿಗೆ ಶೇ. 75 ಹಾಗೂ ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ಹಾಗೂ ಉಳಿದ 3 ಹೆಕ್ಟೇರ್ ಗೆ ಸಾಮಾನ್ಯ, ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ ಶೇ. 45 ರಷ್ಟು ಸಹಾಯಧನ ನೀಡಲಾಗುವುದು.
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ :
ತೆಂಗು, ಮಾವು, ದ್ರಾಕ್ಷಿ, ಚಿಕ್ಕು, ಬಾಳೆ, ನುಗ್ಗೆ, ಲಿಂಬೆ, ಪಪ್ಪಾಯಾ, ದಾಳಿಂಬೆ, ಸೀಬೆ, ನೇರಳೆ, ಬಾರೆ, ಗೇರು, ಗುಲಾಬಿ, ಮಲ್ಲಿಗೆ, ಡ್ಯಾಗನ್ ಹಣ್ಣು, ವಿಳ್ಯದೆಲೆ, ಬೆಣ್ಣೆ ಹಣ್ಣು, ರಾಂಬೂತಾನ್, ಹುಣಸೆ, ಅಂಜೂರು ಮತ್ತು ಸೀತಾಫಲ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮ ಹಾಗೂ ತೆಂಗು, ಮಾವು, ಚಿಕ್ಕು ಮತ್ತು ಗೇರು ಬೆಳೆಗಳ ಪುನಶ್ವೇತನ ಕಾರ್ಯಕ್ರಮಗಳನ್ನು ಸಣ್ಣ, ಅತೀಸಣ್ಣ ರೈತರು, ಪ.ಜಾತಿ ಮತ್ತು ಪ.ಪಂಗಡ, ಅಲೆಮಾರು ಬುಡಕಟ್ಟುಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು, ವಿಕಲಚೇತನ ಕುಟುಂಬಗಳು, ಭೂಸುಧಾರಣಾ ಹಾಗೂ ವಸತಿ ಯೋಜನೆಗಳ ಫಲಾನುಭವಿಗಳಿಗೆ ಅನುಷ್ಠಾನಗೊಳಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲ್ಲೂಕಾ ತೋಟಗಾರಿಕೆ ಕಛೇರಿ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಆಟೋ,ಲಾರಿ ಮತ್ತು ವಿವಿದ ಚಾಲಕರಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ
ಬಳ್ಳಾರಿ : ಬಳ್ಳಾರಿಯ ಪೊಲೀಸ್ ಇಲಾಖೆಯ ಸಂಚಾರಿ ಠಾಣೆ, ಇನ್ನರ್ ವೀಲ್ ಕ್ಲಬ್ , ರೋಟರಿ ಕ್ಲಬ್, ಕಲ್ಪತರು ಕಣ್ಣಿನ ಆಸ್ಪತ್ರೆ,ಸನ್ಮಾರ್ಗ ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ಅಪರಾದ ತಡೆ ಮಾಸಾಚರಣೆ ಅಂಗವಾಗಿ ನಗರದ ಡಿಎಆರ್ ಮೈದಾನದಲ್ಲಿ ಲಾರಿ, ಆಟೊ ಮತ್ತು ಗೂಡ್ಸ್ ಮಿನಿ ವಾಹನಗಳ ಚಾಲಕರಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾರಿ ಠಾಣೆಯ ಇನ್ಸ್‌ಪೆಕ್ಟರ್ ಅಯ್ಯನಗೌಡ ಪಾಟಿಲ್ ವಹಿಸಿದ್ದರು.
ಎಸ್ಪಿ ರಂಜಿತ್ ಕುಮಾರ್ ಬಂಡಾರು ಶಿಬಿರದ ಉದ್ಘಾಟನೆ ಮಾಡಿ, ನೀವು ಸಹ ಸತ್ವಜನಿಕರ ಸೇವೆ ಮಾಡುವವರಾಗಿದ್ದೀರಿ, ಅದಕ್ಕಾಗಿ ನೀವು ನಿಮ್ಮ ಆರೋಗ್ಯದ ಬಗ್ಗೆ ಅಷ್ಟೊಂದು ಕಾಳಜಿ ವಹಿಸಲ್ಲ. ಹಾಗಾಗಿ ಈ ಶಿಬಿರ ಹಮ್ಮಿಕೊಂಡಿದ್ದು ಇದರ ಲಾಭ ಪಡೆದುಕೊಳ್ಳಿ ಎಂದು ಚಾಲಕರಿಗೆ ಕರೆ ನೀಡಿದರು. ಸಂಚಾರಿ ವಿಷಯದಲ್ಲಿ ನಿಮಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಫಿಟ್‌ನೆಸ್ ಇಲ್ಲದ ವಾಹನ ಓಡಿಸುವುದು, ಎಲ್ಲೆಂದರಲ್ಲಿ ನಿಲ್ಲಿಸುವುದು ಸರಿಯಲ್ಲ. ಜನರಿಗೆ ತೊಂದರೆ ಆಗುವುದನ್ನು ಗಮನದಲ್ಲಿರಿಸಿಕೊಂಡು ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂಚಾರಿ ಠಾಣೆಯ ಇನ್ಸ್‌ಪೆಕ್ಟರ್ ಅಯ್ಯನಗೌಡ ಪಾಟೀಲ್ ಮಾತನಾಡಿ,ವರ್ಷಕ್ಕೆ ಅಪಘಾತ ಪ್ರಕರಣಗಳಲ್ಲಿ ಒಂದು ವರೆ ಲಕ್ಷ ಜನ ಸಾಯುತಿದ್ದಾರೆ. ಮೂರರಿಂದ ನಾಲ್ಕು ಲಕ್ಷ ಜನ ಗಾಯಾಳುಗಳಾಗುತ್ತಿದ್ದಾರೆ. ಅಪಘಾತಗಳಾದಾಗ ಎಷ್ಟೋ ಜನ ಚಾಲಕರಿಗೆ ಹೃದಯಾಘಾತ ಆಗುತ್ತದೆ. ಅದಕ್ಕಾಗಿ, ಚಾಲಕರಿಗೆ ವೈದ್ಯಕೀಯ ತಪಾಸಣೆ ಮಾಡುವ ಉದ್ದೇಶ ಈ ಶಿಬಿರದ್ದಾಗಿದೆ ಎಂದರು. ಇಲ್ಲಿ ನೇತ್ರ ತಪಾಸಣೆ ಮಾಡಿಸಿಕೊಳ್ಳಿ, ಅವಶ್ಯಕತೆ ಇದ್ದರೆ ಉಚಿತವಾಗಿ ಕನ್ನಡಕ ಮತ್ತು ನೇತ್ರ ಶಸ್ತ್ರ ಚಿಕಿತ್ಸೆ ಸಹ ಮಾಡಲಾಗುತ್ತದೆಂದು ತಿಳಿಸಿದರು.
ಈ ಶಿಬಿರದಲ್ಲಿ ನಗರ ಡಿವೈಎಸ್ಪಿ ಚಂದ್ರ ಕಾಂತ್ ನಂದಾರೆಡ್ಡಿ, ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ, ರೋಟರಿ ಕ್ಲಬ್‌ನ ಸುರೇಶ್, ಇನ್ನರ್‌ವೀಲ್ಲ ಕ್ಲಬ್ ಅಧ್ಯಕ್ಷೆ ಲಕ್ಷ್ಮಿ ಪ್ರಿಯ, ನೇತ್ರ ತಜ್ಞೆ ನೀಲಂ, ಶಿಲ್ಪ,ಅನಿತ ಜೈನ್, ಕೀರ್ತಿ,ಡಾ.ರಮೇಶ್ ಕುಮಾರ್,ಡಾ.ದೊಡ್ಡ ಬಸಯ್ಯ ಕೆಂಡದ ಮಠ, ಡಾ. ಶಿವ ಅರಿಕೇರಿ,ಚಂದ್ರಶೇಖರ್ ಆಚಾರಿ,ಮಜ್ಜಾರ್ ಭಾಷ, ಪೋಲೀಸ್ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಆಟೋ ರಿಕ್ಷಾಗಳ ಪ್ರಯಾಣ ದರ ನಿಗದಿ
ಡಿ.5ರಂದು ಮದ್ಯಾಹ್ನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಸಭೆ ಜರುಗಿದ್ದು, ರಾಯಚೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿನ ಆಟೋ ರಿಕ್ಷಾಗಳಿಗೆ ಸಂಬಂಧಪಟ್ಟಂತೆ ಹಲವಾರು ವಿಷಯಗಳಿಗೆ ಜನರ ಅಹವಾಲುಗಳಿಗೆ ಸ್ಪಂಧಿಸುವ ಸಲುವಾಗಿ ಚರ್ಚಿಸಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ರಾಯಚೂರು ಕಛೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕರು ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ರಾಯಚೂರು ನಗರ ವ್ಯಾಪ್ತಿಯಲ್ಲಿ ಈ ಕೆಳಕಂಡಂತೆ ದರ ಪಟ್ಟಿ ನಿಗದಿ ಪಡಿಸಲು ನಿರ್ಧರಿಸಲಾಗಿದೆ. ಪರಿಷ್ಕೃತ ದರಗಳು ಡಿ.8ರಿಂದ ಅನ್ವಯವಾಗುತ್ತದೆ ಎಂದು ಪ್ರದೇಶಿಕ ಸಾರಿಗೆ ಅಧಿಕಾರಿ ವಿನಯಾ ಕಾಟೋಕರ ಅವರು ತಿಳಿಸಿದ್ದಾರೆ.
ಕನಿಷ್ಟ ದರ ಮೊದಲ 2.00 ಕಿ.ಮೀ ಗೆ ರೂ.30ಗಳನ್ನು ನಿಗದಿಪಡಿಸಲಾಗಿದ್ದು, ನಂತರದ ಪ್ರತಿ ಕಿಲೋಮೀಟರ್ ಗೆ ರೂ.15 ದರವನ್ನು ನಿಗಧಿಪಡಿಸಲಾಗಿದೆ. ಉಳಿದಂತೆ ರಾತ್ರಿ ವೇಳೆ ದರ ಸಾಮಾನ್ಯ ದರದ ಜೊತೆಗೆ ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು (ರಾತ್ರಿ 10-00 ರಿಂದ ಬೆಳಗಿನ ಜಾವ 6-00 ಘಂಟೆಯವರೆಗೆ) ಇದಲ್ಲದೇ, ಮುಂದಿನ ದಿನಗಳಲ್ಲಿ ಈಗಾಗಲೇ ರಾಯಚೂರು ಸಂಚಾರಿ ಪೊಲೀಸ್ ಇಲಾಖೆ ರವರ ವತಿಯಿಂದ ಎಲ್ಲಾ ಅಧಿಕೃತ ಆಟೋ ರಿಕ್ಷಾ ವಾಹನಗಳಿಗೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ವಿಶಿಷ್ಟ (ಣಟುಡಣಜಿ), ಸಂಖ್ಯೆಯನ್ನು ಕೊಟ್ಟು ಅಂಟಿಸಲಾಗುವುದು.
ಇಂತಹ ಆಟೋ ರಿಕ್ಷಾ ವಾಹನಗಳಲ್ಲಿ ಆಟೋ ಚಾಲಕ ಹೆಸರು ಮತ್ತು ವಿಳಾಸ ಮತ್ತು ಇತ್ಯಾದಿ ಮಾಹಿತಿಯನ್ನು ಕೂಡ ಅಂಟಿಸಲಾಗುವುದು. ಈ ಕ್ರಮಗಳಿಂದಾಗಿ ಸಾಮಾನ್ಯ ಜನರಿಗೆ ಕೆಲವೊಮ್ಮೆ ಉಂಟಾಗುತ್ತಿದಂತಹ ತೊಂದರೆಗಳಿಗೆ ಪರಿಹಾರ ದೊರಕುವಂತಾಗುವುದು ಹಾಗೂ ಸುರಕ್ಷತೆ ಮತ್ತು ಭದ್ರತೆ ಕೂಡ ಹೆಚ್ಚುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.