ಆತ್ಮೀಯ ರೈತರ ಬಾಂಧವರೇ,
ರೈತರಿಗೆ ನಿಗದಿತ ಸಮಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ, ಪಹಣಿಗಳಿಗೆ ರೈತರ ಆಧಾರ್ ಲಿಂಕ್ ಮಾಡಲು ಭೂಮಿ ಉಸ್ತುವಾರಿ ಕೋಶದಿಂದ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುತ್ತಾರೆ. ಕಾರಣ ಎಲ್ಲಾ ರೈತರು (ಜಂಟಿ ಮಾಲೀಕರನ್ನು ಒಳಗೊಂಡಂತೆ) ತಮ್ಮ ಪಹಣಿಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ತಮ್ಮ ಗ್ರಾಮದ ಗ್ರಾಮ ಆಡಳಿತ ಕಛೇರಿಗೆ ಬೇಟಿ ನೀಡಿ ಆಧಾರ್ ಲಿಂಕ್ ಮಾಡಿಸಿಕೊಳ್ಳಬಹುದು.
ಆಧಾರ್ ಲಿಂಕ್ ಮಾಡಿಸಲು ಅವಶ್ಯವಿರುವ ದಾಖಲೆಗಳು:
1) ಆಧಾರ್ ಕಾರ್ಡ ಪ್ರತಿ.
2) ಆಧಾರ್ ಕಾರ್ಡಗೆ ಲಿಂಕ್ ಇರುವ ದೂರವಾಣಿ ಸಂಖ್ಯೆ.
ಆಧಾರ್ ಲಿಂಕ್ ಮಾಡಿಸುವ ವಿಧಾನ:
1) ರೈತರು ತಮ್ಮ ಆಧಾರ್ ಕಾರ್ಡ ಹಾಗೂ ಆಧಾರ್ ಕಾರ್ಡಗೆ ಲಿಂಕ್ ಇರುವ ಮೊಬೈಲಯೊಂದಿಗೆ ತಮ್ಮ ಗ್ರಾಮದ ಗ್ರಾಮ ಆಡಳಿತ ಕಛೇರಿಗೆ ಬೇಟಿ ನೀಡಬೇಕು.
2) ಮೊದಲು ರೈತರ ದೂರವಾಣಿ ಸಂಖ್ಯೆಯನ್ನು ನೀಡಬೇಕು, ನಂತರ ದೂರವಾಣಿ ಸಂಖ್ಯೆಗೆ ಬಂದಿರುವ OTPಯನ್ನು ನೀಡಬೇಕು.
3) ನಂತರ ಆಧಾರ್ ಕಾರ್ಡಗೆ ಲಿಂಕ್ ಇರುವ ದೂರವಾಣಿ ಸಂಖ್ಯೆಗೆ ಸ್ವೀಕೃವಾದ ಆಧಾರ್ OTPಯನ್ನು ನೀಡಬೇಕು.
4) ಕೊನೆಗೆ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಮೊಬೈಲ್ ಆಪನಲ್ಲಿ ಪೋಟೊವನ್ನು ತೆಗೆದುಕೊಳ್ಳುತ್ತಾರೆ.
ಆಧಾರ್ ಲಿಂಕ್ ಮಾಡುವ ಸಮಯದಲ್ಲಿ ರೈತರು ತಮ್ಮ ಹೆಸರಿನಲ್ಲಿ ಆ ಗ್ರಾಮದಲ್ಲಿ ಇರುವ ಎಲ್ಲಾ ಸರ್ವೆ ನಂಬರಗಳ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು.
ಬೆಳಕಿನ ಬೇಸಾಯ ಪದ್ಧತಿ
ಇಂದು ನಾವು ತಿನ್ನುವ ಆಹಾರದಲ್ಲಿ ರಾಸಾಯನಿಕಗಳು ಬೆರೆತಿವೆ. ಅನೇಕ ಆಹಾರ ಪದಾರ್ಥಗಳನ್ನು ತಯಾರಿಸುವಾಗ ಬಣ್ಣ ಮತ್ತು ಎಸೆನ್ಸ್‌ಗಳನ್ನು ಹೇರಳವಾಗಿ ಬಳಸುತ್ತಾರೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡಲು ಸಲಹೆ ಮಾಡಲಾಗುತ್ತಿದೆ. ಆದರೆ, ಎಲ್ಲ ಪದ್ಧತಿಗಳ ಮೂಲ ಆಶಯಗಳು ಒಂದೆ ಆಗಿವೆ. ಅದು ಬೆಳಕಿನ ಬೇಸಾಯ. ಈ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಸಲಹೆ ನೀಡಿದ್ದಾರೆ. ಸಹಜವಾಗಿ ಒದಗುವ ಬೆಳಕನ್ನು ಸದ್ಬಳಕೆ ಮಾಡಿಕೊಳ್ಳುವದರ ಜೊತೆಗೆ, ಭೂಮಿಯ ಫಲವತ್ತತೆ ವೃದ್ಧಿಸಲು ಹೂಮಸ್ ಮತ್ತು ಸಾವಯವ ಇಂಗಾಲದ ಪ್ರಮಾಣವನ್ನು ಹೆಚ್ಚು ಮಾಡುತ್ತಾ ಮಳೆಗಾಲದ ಹನಿ-ಹನಿ ನೀರನ್ನು ಹಿಡಿದಿಟ್ಟುಕೊಳ್ಳಬೇಕು.
ಈ ಎಲ್ಲವನ್ನೂ ಸಾಧಿಸಲು, ಮರಗಿಡಗಳಿಂದ ಕೂಡಿದ ಕೃಷಿ ಪದ್ಧತಿ ಅನುಸರಿಸಬೇಕು. ಅಂದರೆ, ನಮ್ಮ ಭೂಮಿಯನ್ನು ಆಹಾರವನವನ್ನಾಗಿ ಪರಿವರ್ತಿಸಬೇಕು. ಆಗ ನಮ್ಮ ಭೂಮಿಯಲ್ಲಿ ಜೀವಾಣುಗಳು, ಸೂಕ್ಷ್ಮಜೀವಾಣುಗಳು, ಎರೆಹುಳುಗಳು ಹಾಗೂ ಪ್ರಾಣಿಪಕ್ಷಿಗಳ ಸಂಖ್ಯೆಯೂ ವೃದ್ಧಿಯಾಗುತ್ತದೆ. ಇದರಿಂದ ಭೂಮಿಯಲ್ಲಿ ಸಹಜವಾಗಿ ರಾಸಾಯನಿಕ, ಜೈವಿಕ ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ. ಆಗ ಹಣ್ಣು, ಕಾಳುಗಳಲ್ಲಿ ನಮ್ಮ ದೇಹಕ್ಕೆ ಅವಶ್ಯವಿರುವ ಕ್ಯಾಲೊರೀಸ್, ವಿಟಮಿನ್ಸ್, ಪ್ರೋಟೀನ್ಸ್, ನ್ಯೂಟ್ರಿಯೆಂಟ್ಸ್ ಮತ್ತು ಕಾರ್ಬೋಹೈಡ್ರೆಟ್ಸ್ ದೊರೆಯುತ್ತವೆ.
ಪ್ರತಿ ಹಳ್ಳಿಗಳಲ್ಲಿ ಒಂದೊಂದು ಮಾದರಿ ತೋಟಗಳನ್ನು ಬೆಳಕಿನ ಬೇಸಾಯ ಪದ್ಧತಿಯಡಿ ನಿರ್ಮಿಸಿ, ಆಯಾ ರೈತರನ್ನು ಮಾರ್ಗದರ್ಶಿಗಳನ್ನಾಗಿ ನೇಮಕಮಾಡಿ, ಆಯಾ ಗ್ರಾಮ ವ್ಯಾಪ್ತಿಯಲ್ಲಿ ಬೆಳೆದ ಆಹಾರ ಪದಾರ್ಥಗಳನ್ನ ಅಲ್ಲಿಯೇ ಮೌಲ್ಯವರ್ಧನೆ ಮಾಡಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವದರಿಂದ ಜನರ ಆರೋಗ್ಯದಲ್ಲಿ ಸುಧಾರಣೆ ತರಬಹುದಾಗಿದೆ. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಜಾನುವಾರು ಪೋಷಣೆ
ತೀವ್ರ ಮಳೆಯ ಅಭಾವವಿರುವ ಹಿನ್ನೆಲೆಯಲ್ಲಿ ಮೇವಿನ ಕೊರತೆ ಉಂಟಾಗುವುದರಿಂದ ಜಾನುವಾರು ಸಾಕಾಣಿಕೆ ದುಸ್ತರವಾಗುತ್ತಿದೆ. ಈ ಸಂದರ್ಭದಲ್ಲಿ ಸಾಗುವಳಿ ಭೂಮಿ ಹಾಗೂ ಗೋಮಾಳುಗಳು ನಾಶವಾಗಿ ಮೇವಿನ ಕೊರತೆ ಸಂಭವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜಾನುವಾರು ಪಾಲನೆ-ಪೋಷಣೆ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಸಲಹೆ ನೀಡಿದ್ದಾರೆ. ಮೇವಿನ ಲಭ್ಯತೆಗೆ ಅನುಗುಣವಾಗಿ ಜಾನುವಾರು ಸಂಖ್ಯೆಯನ್ನು ಮಿತಿಗೊಳಿಸಬೇಕು, ಖಾಲಿ ಇರುವ ಜಮೀನು, ಬಂಜರು ಭೂಮಿ, ಜವಳು, ಕೊರಕಲು ಭೂಮಿ, ಹೊಲದ ಬದು, ತೋಟಪಟ್ಟಿಗಳಲ್ಲಿ ಸುಧಾರಿತ ಹುಲ್ಲು ಹಾಗೂ ದ್ವಿದಳಧಾನ್ಯ ಮೇವುಗಳಿಂದ ಮತ್ತು ಮೇವಿನ ಗಿಡಗಳಿಂದ ಅಭಿವೃದ್ಧಿಪಡಿಸಬೇಕು.
ಲಭ್ಯವಿರುವ ಮೇವನ್ನು ಯಂತ್ರದಿಂದ ಸಣ್ಣದಾಗಿ ಕತ್ತರಿಸಬೇಕು. ಇದರಿಂದ ಮೇವು ಹಾಳಾಗುವುದಿಲ್ಲ. ಹಸಿರು ಮೇವು ಹೇರಳವಾಗಿ ಲಭ್ಯವಿದ್ದಾಗ, ಅದನ್ನು ಕೆಡದಂತೆ ಒಣಹಸಿರು ಮೇವಾಗಿ ಅಥವಾ ರಸಮೇವಾಗಿ ಶೇಖರಿಸಿಡಬೇಕು. ಜಾನುವಾರು ಮೇವನ್ನು ಇಷ್ಟಪಟ್ಟು ತಿನ್ನುವ ಹಾಗೆ ಉಪ್ಪು, ಯೂರಿಯಾ, ಕಾಕಂಬಿ, ಅಡುಗೆ ಸೋಡಾ, ಸುಣ್ಣದ ದ್ರಾವಣದಿಂದ ರುಚಿಪಡಿಸಬೇಕು. ಜಾನುವಾರು ಸಾಕಣೆ ಅಸಾಧ್ಯವಾದಾಗ ರೈತರು ಸರ್ಕಾರ, ಖಾಸಗಿ ಸಂಸ್ಥೆ ವ್ಯಕ್ತಿಗಳಿಂದ ನಡೆಸಲ್ಪಡುವ ಗೋರಕ್ಷಾ ಕೇಂದ್ರ ಅಥವಾ ಗೋಶಾಲೆಗಳಿಗೆ ಜಾನುವಾರು ಬಿಟ್ಟು ಬರುವುದರಿಂದ ಅವುಗಳ ರಕ್ಷಣೆ ಮತ್ತು ಪೋಷಣೆ ಮಾಡುವುದು ಸುಲಭವಾಗುತ್ತದೆ. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ಸಮಗ್ರ ಕೃಷಿ ಪದ್ಧತಿಗಳು
ಆಧುನಿಕ ದಿನಗಳಲ್ಲಿ ಅನೇಕ ಜನರು ನೈಸರ್ಗಿಕ ಕೃಷಿ ಕುರಿತು ದೀರ್ಘಾಲೋಚನೆ ಮಾಡುತ್ತಿದ್ದಾರೆ. ಈ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬರುವ ಕೃಷಿ ಪದ್ಧತಿಗಳೆಂದರೆ ಸಾವಯವ, ಆಧುನಿಕ ಹಾಗೂ ಸಮಗ್ರ ಕೃಷಿ ಪದ್ಧತಿ. ಈ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಅಗತ್ಯ ಮಾಹಿತಿ ನೀಡಿದ್ದಾರೆ. ಸಮಗ್ರ ಕೃಷಿ ಪದ್ಧತಿಯು ಮಣ್ಣು, ಸಸ್ಯಗಳು, ಪ್ರಾಣಿಗಳು, ಉಪಕರಣಗಳನ್ನು ಒಂದಕ್ಕೊಂದು ಪೂರಕವಾಗಿ ನಿರ್ವಹಣೆ ಮಾಡುವ ಕೃಷಿ ಪದ್ಧತಿಯಾಗಿದ್ದು, ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ಸ್ಥಿರತೆ ಕಂಡುಕೊಳ್ಳಬಹುದಾಗಿದೆ.
ಲಭ್ಯವಿರುವ ನೈಸರ್ಗಿಕ ಸಂಪನ್ಮೂಲ ಹಾಗೂ ಕೃಷಿ ತ್ಯಾಜ್ಯಗಳನ್ನು ಬಳಸಿ, ಸ್ಥಳೀಯವಾಗಿ ಬೇಕಾಗುವ ಕೃಷಿ ಪರಿಕರಗಳನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮಾಡಿ ತೊಡಗಿಸುವ ಮೂಲಕ ಆದಾಯ ಹೆಚ್ಚಿಸಬಹುದಾಗಿದೆ. ಕೃಷಿ ಪರಿಕರಗಳನ್ನು ಒಂದು ಘಟಕದಿಂದ ಬಂದ ಉತ್ಪನ್ನ / ಉಪಉತ್ಪನ್ನ ಮತ್ತೊಂದು ಘಟಕಕ್ಕೆ ಪೂರಕವಾಗಿ ಬಳಕೆ ಮಾಡುವದರಿಂದ ಸಾಮರ್ಥ್ಯ ಹೆಚ್ಚಾಗಿ ಖರ್ಚು ಕಡಿಮೆಯಾಗಿ ಆದಾಯ ಹೆಚ್ಚಾಗುವದು. ಕೃಷಿಯಲ್ಲಿ ಸುಸ್ಥಿರತೆ ಕಾಪಾಡುವುದು, ಪರಿಸರ ಸ್ನೇಹಿ ತಾಂತ್ರಿಕತೆ ಅಳವಡಿಕೆ ಮೂಲಕ ಸಮತೋಲನ ಆಹಾರ ಒದಗಿಸುವದು. ಸಮಗ್ರ ಕೃಷಿಯಲ್ಲಿ ಕೃಷಿ ಹಾಗೂ ಕೃಷಿ ಪೂರೈಕೆ ಚಟುವಟಿಕೆಗಳಾದ ಹೈನುಗಾರಿಕೆ, ರೇಷ್ಮೆ, ಕೋಳಿ ಸಾಕಣೆ, ಮೀನುಗಾರಿಕೆ ಮುಂತಾದವುಗಳನ್ನು ಅಳವಡಿಸಿ ಹೆಚ್ಚು ಆದಾಯ ಪಡೆಯಲು ಸಾಧ್ಯವಾಗುವುದು.