ಪ್ರಿಯ ರೈತ ಬಾಂಧವರೇ,
ಇಲ್ಲಿ ಆನಂದ್ ಗುಡಗೇರಿ ಎಂಬ ರೈತರು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.
ನೀರಿನ ಸದ್ಬಳಕೆಗೆ ಈಗ ಎಲ್ಲಲ್ಲದ ಪ್ರಾಮುಖ್ಯತೆ, ಅಂತರ್ಜಲ ಮಟ್ಟ ಕುಸಿತ ಹಾಗೂ ಹೆಚ್ಚುತ್ತಿರುವ ನೀರಾವರಿ ಬೇಸಾಯಗಳಿಂದಾಗಿ ಇರುವ ನೀರನ್ನೇ ಸರಿಯಾಗಿ ಬಳಸಬೇಕಾಗಿದೆ, ಹನಿ ನೀರಾವರಿಯು ವೈಜ್ಞಾನಿಕ ಪದ್ಧರಿ, ಮಲೆನಾಡುಗಳಲ್ಲಿಯೂ ಹನಿ ನೀರಾವರಿ ಅಳವಡಿಕೆ ಉತ್ತಮ. ಒಕ್ಕಲುತನವೆಂದರೆ ಕಾಣರು ಮಾಡುವ ಕಾರ್ಯ, ಜಾಣರೇ ಯಶಸ್ವಿಯಾಗುತ್ತಾರೆ ಎನ್ನುವುದಕ್ಕೆ ಈ ಲೇಖನ ಸಾರುವ ಸಂದೇಶ ಓದಿ. ಒಸರುವ ಜಿನುಗುವ ಹನಿ ನೀರಾವರಿ ಪದ್ಧತಿ ಇಂದು ಹಸಿರು ಕ್ರಾಂತಿಗೆ ನಿಖರವಾದ ಹೊಸ ಅವಕಾಶ ತೆರೆದಿಟ್ಟಿದೆ. ಮಲೆನಾಡಿನಲ್ಲೂ ಹನಿ ನೀರಾವರಿಯ ಅವಶ್ಯಕತೆಯನ್ನು ಅನಾವರಣಗೊಳಿಸಿದ ಕೀರ್ತಿ ಶ್ರೀ ಆನಂದ ಗುಡಿಗೇರಿ ಅವರಿಗೆ ಸಲ್ಲುತ್ತದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಾದ್ಯಂತ ಬೀಳುವ ವಾಡಿಕೆ ಮಳೆಗೆ, ನೀರಾವರಿ ಅವಶ್ಯಕತೆ ಬೇಕಾಗಿಲ್ಲ, ಎನ್ನುವ ಭಾವನೆ ಸಾಮಾನ್ಯ ಆದರೆ ಅನಿಶ್ಚಿತ ಮಳೆಯಿಂದಾಗಿ, ಸಂಪ್ರದಾಯಿಕ ಬೇಸಾಯ ಕ್ಷೀಣಿಸುತ್ತಿರುವ ಈ ಕಾಲದಲ್ಲಿ, ಬೇರಿನಾಳಕ್ಕೆ ಒಸರು ಜಿನುಗುವ ಹನಿ ನೀರಾವರಿ ವ್ಯವಸ್ಥೆ ಹೊಸ ಆಸೆ ಮೂಡಿಸಿದೆ. ಹಳಿಯಾಳ-ದಾಂಡೇಲಿ ಮಾರ್ಗದ ಮಧ್ಯದಲ್ಲಿರುವ ಕೆಸರೊಳ್ಳಿ ಪುಟ್ಟ ಗ್ರಾಮ. ಬಯಲಲ್ಲಿ ಭತ್ತ, ದಿಬ್ಬಕ್ಕೆ ಹತ್ತಿ, ಮುಸುಕಿನ ಜೋಳಕ್ಕೆ ಮಾತ್ರ ಸೀಮಿತವಾದ ಬೇಸಾಯ. ಉಸುಕು ಮಿಶ್ರಿತ ಮಧ್ಯಮ ಆಳದ ಜೇಡಿಮಣ್ಣು, ಸವಳಿನಂಶದಿಂದಾಗಿ ಫಲವತ್ತತೆ ಕಡಿಮೆ. ಈ ಪ್ರದೇಶದಲ್ಲಿ ಅಂತರ್ಜಲವು ೩೦೦ ಅಡಿಗೆ ಲಭ್ಯವಾದರೂ ಸಹ, ಇಳುವರಿ ಮಾತ್ರ ಒಂದೂವರೆ ಇಂಚು. ಎಲ್ಲರಂತೆ ವಾಣಿಜ್ಯ ಬೆಳೆಗೆ ಮೊರೆಹೋದ ಆನಂದ ಚಂದ್ರಕಾಂತ ಗುಡಿಗೇರಿ ದಂಪತಿಯವರಿಗೆ ಐದು ಎಕರೆ ಕಬ್ಬಿನ ಬೆಳೆಗೆ ಹಾಯಿ ನೀರುಣಿಸಲಾರದೆ, ಹನಿ ನೀರಾವರಿ ವ್ಯವಸ್ಥೆ ರೂಪಿಸಿ, ಸಮೃದ್ಧ ಬೆಳೆ ತೆಗೆದಿರುತ್ತಾರೆ.
ಪ್ರೇರಣೆ:-
ಯುವ ಕೃಷಿಕರಾದ ಆನಂದ ಗುಡಿಗೇರಿ ಅವರ ಎಂಟು ಎಕರೆ ಜಮೀನಿನಲ್ಲಿ ಕಬ್ಬಿನ ಬೆಳೆಗೆ ಐದು ಎಕರೆ ಮೀಸಲಾಗಿಟ್ಟಿದ್ದಾರೆ. ಲಭ್ಯವಿರುವ ಎರಡು ಕೊಳವೆ ಬಾವಿಗಳ ಇಳುವರಿ ಕನಿಷ್ಟ ಇದ್ದರೂ ಸಹ ಮಿತವ್ಯಯವಾಗಿ ನೀರುಣಿಸುವ ಜಾಣೆಯನ್ನು ಪತ್ನಿ ಹೇಮಾ ಅವರೂ ಸಹ ಮೆಚ್ಚಿ, ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಕಳೆದು ಮೂರು ವರ್ಷಗಳಿಂದ ಬೆಳೆದ ಕಬ್ಬಿನ ಇಳುವರಿ ೩೦ ಟನ್ ಮೀರಲಿಲ್ಲ. ಹೊಸ ತಳಿ ಪ್ರಯೋಗಿಸಿದರೂ, ಸವಳು ಮಣ್ಣಿನ ಸಮಸ್ಯೆಯಿಂದ ಅಷ್ಟಕಷ್ಟೆ ಇಳುವರಿಯಿಂದ ಬೇಸತ್ತ ಆನಂದರವರು, ಖಾಸಗಿ (ಫಿನೋಲೆಕ್ಸ್) ಕಂಪನಿಯವರು ವಿನ್ಯಾಸಗೊಳಿಸಿದ ಹನಿ ನೀರಾವರಿ ಘಟಕಕ್ಕೆ ಆಕರ್ಷಿತರಾಗಿದ್ದಾರೆ. ಕೃಷಿ ಇಲಾಖೆಯು, ಮೈಕ್ರೋ ಇರಿಗೇಷನ್ ಗೆ ಯೋಜನೆಯಡಿ ಶೇ. ೯೦ ರ ಸಹಾಯಧನದಲ್ಲಿ – ಪೂರೈಸುತ್ತಿರುವ ಹನಿ ನೀರಾವರಿ ಘಟಕವನ್ನು ಅಳವಡಿಸಲುಪ್ರೋತ್ಸಾಹಿಸಿದ್ದರಿಂದ, ೨೦೧೩-೧೪ ರಿಂದ ನಾಲ್ಕು ಎಕರೆ ಜಮೀನಿನಲ್ಲಿ ಪರಿಣಾಮಕಾರಿಯಾಗಿ ಹನಿ ನೀರಾವರಿ ವ್ಯವಸ್ಥೆ ಮ ರೂಪುಗೊಂಡಿದೆ. ಪಕ್ಕದಲ್ಲಿರುವ ಇ.ಐ.ಡಿ. ಪ್ಯಾರಿ ಸಕ್ಕರೆ ಕಾರ್ಖಾನೆಯವರು ಪೂರೈಸಿದ ಸಿಓ-೯೨೦೦೫ ಕಬ್ಬಿನ ತಳಿಯನ್ನು ನವೆಂಬರ್ ೨೦೧೩ರಲ್ಲಿ ನೆಟ್ಟಿರುತ್ತಾರೆ.
ಹನಿ ನೀರಾವರಿ ಜಾಲ:-
ಈ ವ್ಯವಸ್ಥೆಗೆ ಸಾಲಿನಿಂದ ಸಾಲಿನ ಅಂತರ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಗಮನಿಸಿ, ಆನಂದ ಅವರು ನಾಲ್ಕು ಅಡಿ ಅಂತರವನ್ನು ಬೆಳೆ ಸಾಲುಗಳ ಮಧ್ಯ ಕಡ್ಡಾಯವಾಗಿ ಕಾಯ್ದುಕೊಂಡಿದ್ದಾರೆ. ಬೇಸಾಯಕ್ಕೆ ಯಾವ ತೊಂದರೆ ಆಗದಂತಹ ಆಳದಲ್ಲಿ, ಈ ಜಾಲವನ್ನು ಅಳವಡಿಸಿದ್ದಾರೆ. ಅಲ್ಪ ಇಳುವರಿ ಹೊಂದಿರುವ ಕೊಳವೆ ಭಾವಿಗಳ ನೀರನ್ನು ಸಂಗ್ರಹಿಸಲು, ಒಂದು ಕಿರು ಕೃಷಿ ಹೊಂಡವನ್ನು ಸಹ ತಾವೇ ನಿರ್ಮಿಸಿದ್ದಾರೆ. ಬೇಸಿಗೆ ಪ್ರಾರಂಭವಾದಾಗ ಈ ಹೊಂಡದ ನೀರನ್ನು ಪಂಪ್ ಮಾಡಿ ನೇರವಾಗಿ ಸೋಸುವ ಘಟಕಕ್ಕೆ ಪೂರೈಸುತ್ತಾರೆ. ಈ ಘಟಕವು ಘಂಟೆಗೆ ೫೦,೦೦೦ ಲೀಟರ್ ಸೋಸುವ ಸಾಮರ್ಥ್ಯ ಹೊಂದಿದ್ದು, ನೀರಿನಲ್ಲಿರುವ ಎಲ್ಲ ಕಲ್ಮಶವನ್ನು ಸೋಸಿ, ಮುಖ್ಯ ಕೊಳವೆ ಜಾಲಕ್ಕೆ ಶುದ್ಧ ನೀರನ್ನು ಪೂರೈಸುತ್ತದೆ. ಮುಖ್ಯ ಕೊಳವೆಗಳು ೬೩ ಮೀ.ಮೀ. ಗಾತ್ರದವಾಗಿದ್ದು, ಜಮೀನಿನ ಬದುವಿನ ಜಾಗದಲ್ಲಿ ಹೂಳಿರುತ್ತಾರೆ. ಕಬ್ಬಿನ ಬೆಳೆ ಸಾಲುಗಳ ಮಧ್ಯ ೧೬ ಮೀ.ಮೀ. ಗಾತ್ರದ ಬದಿ (ಲ್ಯಾಟ್ರಲ್) ಕೊಳವೆಗಳಲ್ಲಿ ೪೦ ಸೆಂ.ಮೀ. ಅಂತರಕ್ಕೆ ಒಂದರಂತೆ, ಆಂತರಿಕ ರಂಧ್ರಗಳಿರುವ ಕಿರು ಕೊಳವೆ (ಇನ್ನರ್ ಡಿಪ್ಪರ್‌ಗಳನ್ನು ಜೋಡಿಸಿದ್ದು ವಿಶೇಷ, ಈ ಡಿಪ್ಟರ್‌ಗಳು ರಂಧ್ರಬಾಯಿಗಳಿದ್ದು, ಹನಿ ನೀರನ್ನು ತೊಟ್ಟಿಕ್ಕಿಸುವುದರಿಂದ ಬೇರುಗಳಿಗೆ ನೇರವಾಗಿ ರಸಾವರಿ ಮಿಶ್ರಣವನ್ನು ಪೂರೈಸಿದಂತಾಗುತ್ತದೆ. ಈ ಪದ್ಧತಿಯಿಂದ ಮಾತ್ರ ಶೇ. ೯೦ ರಷ್ಟು ನೀರನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಲು ಸಾಧ್ಯ ಎಂದು ಹೆಮ್ಮೆ ಪಡುತ್ತಾರೆ. ಕಬ್ಬಿನ ಬೆಳೆಗೆ ಪ್ರತಿ ಚದರ ಮೀಟರ ಕ್ಷೇತ್ರಕ್ಕೆ ಎಂಟು ಲೀಟರ್ ನೀರು ಬೇಕಾಗುತ್ತದೆ. ಹನಿ ನೀರಾವರಿ ಪದ್ದತಿಯಿಂದ ಕೇವಲ ಎರಡು ಘಂಟೆಗಳಲ್ಲಿ ಪೂರ್ತಿ ಬೆಳೆಗೆ ನೀರು ಪೂರೈಸಲಾಗುತ್ತದೆ.ಈ ಜಾಲದಲ್ಲಿರುವ ಬದಿಲೈನು, ಮುಖ್ಯ ಲೈನುಗಳಿಗೆ -ಸ್ಥೆ ಸೋಸುವ ಘಟಕವೇ ಮಾತೃ ಘಟಕವೆನ್ನುತ್ತಾರೆ ಆನಂದ, ಈ ಘಟಕವು ನೀರಿನಲ್ಲಿ ಬರುವ ಉಸುಕು ಮತ್ತು ಹರಳನ್ನು ತಡೆಹಿಡಿದು ಡ್ರಿಪ್ಪರ್‌ಗಳನ್ನು ಸುರಕ್ಷಿತವಾಗಿಡುತ್ತದೆ. ಈ ಸೋಸುವ ಘಟಕಕ್ಕೆ ರಸಾವರಿ ಗೊಬ್ಬರ ಹೀರಿ ಮುಖ್ಯ – ಲೈನುಗಳಿಗೆ ಸೇರಿಸುವ ಇನ್ನೊಂದು ಘಟಕ ಜೋಡಿಸಲಾಗಿದೆ. ನೀರಿನ ಜೊತೆಗೆ ರಸಗೊಬ್ಬರವನ್ನು ಸಹ ನಿಗದಿತ ಈ ಪ್ರಮಾಣದಲ್ಲಿ ಮತ್ತು ಶಿಫಾರಸ್ಸು ಮಾಡಿದ ಮಿಶ್ರಣವನ್ನೇ – ಪೂರೈಸುತ್ತಾರೆ. ಈ ಶಿಫಾರಸ್ಸು ಲಘುಪೋಷಕಾಂಶಗಳನ್ನು ಸಹ ಸೇರಿಸಿಕೊಂಡಿದ್ದರಿಂದ ಸಮಗ್ರ ಪೋಷಕಾಂಶ ನಿರ್ವಹಣೆ ನಿಜವಾಗಿಯೂ ಅತ್ಯಂತ ಪರಿಣಾಮಕಾರಿ ಫಲ ನೀಡಿದೆ. ಪೋಷಕಾಂಶಗಳ ರಸಾವರಿ ಕೋಷ್ಟಕವನ್ನು ಸಕ್ಕರೆ ಕಾರ್ಖಾನೆ ಅವರು ರೂಪಿಸಿದ್ದಾರೆ. ಬಾಕಿ ಬೇಸಾಯ ಕ್ರಮಗಳು ಸಾಮಾನ್ಯವಾಗಿವೆ. ಈ ಸೋಸುವ ಘಟಕವನ್ನು ಮಾತ್ರ ಪಾಕ್ಷಿಕಕ್ಕೊಮ್ಮೆ ವೀಕ್ಷಿಸಿ, ಶುಚಿಗೊಳಿಸುವುದನ್ನು ಮರೆಯಬಾರದೆಂದು ಸಲಹೆ ನೀಡುತ್ತಾರೆ. ಇರುವೆ ಮತ್ತು ಇಲಿಗಳ ತೊಂದರೆ ನಿವಾರಿಸಲು ಮಳೆಗಾಲದಲ್ಲೂ ಸಹಿತ ಪ್ರತಿ ವಾರಕ್ಕೆ ನಾಲ್ಕು ಸಲ ಹನಿ ನೀರನ್ನು ಬಳಸಲೇಬೇಕು ಎನ್ನುತ್ತಾರೆ. ಈ ಜಾಲದ ಸುಸ್ಥಿರತೆ, ಸೂಕ್ತ ನಿರ್ವಹಣಾ ಕಮಗಳ ಮೇಲೆ ಅವಲಂಬಿಸಿದೆ. ಕೋರಮಂಡಲ ಸಂಸ್ಥೆಯಿಂದ ಪೋಷಕಾಂಶಗಳ ಮಿಶ್ರಣ
ಕೋರಮಂಡಲ ಸಂಸ್ಥೆಯವರು ಕಬ್ಬು ಮೊಳಕೆ ಹಂತದಲ್ಲಿ ೧೧ ಸಲ ಸತುವು, ಗಂಧಕ, ಯೂರಿಯಾ, ೧೨:೬೧:೦, ೧೩:೦:೪೫ ಮತ್ತು ೧೯:೧೯:೧೯ ಮಿಶ್ರಣವನ್ನು ರಸಾವರಿ ಗೊಬ್ಬರವಾಗಿ ನೀಡುತ್ತಾರೆ. ತೆಂಡೆ ಬರುವ ಹಂತದಲ್ಲಿ ೨೬ ಸಲ ಹಾಗೂ ಬೆಳವಣಿಗೆ ಹಂತದಲ್ಲಿ ೪೨ ಸಲ ಸದರಿ ಮಿಶ್ರಣವನ್ನು ನೀಡುವುದರಿಂದ, ಬೇಡಿಕೆಗೆ ತಕ್ಕಂತೆ ಪೋಷಕಾಂಶಗಳು ಲಭ್ಯವಾಗುತ್ತವೆ. ಪ್ರತಿ ಎಕರೆ ಹನಿ ನೀರಾವರಿ ವ್ಯವಸ್ಥೆಗೆ ಪ್ರಾರಂಭದಲ್ಲಿ ೫೦ ಸಾವಿರ ಖರ್ಚಾದರೂ, ನೀರು ಹಾಯಿಸುವ ಆಳಿನ ಖರ್ಚು, ಕಳೆ ತೆಗೆಸುವ ಆಳಿನ ಖರ್ಚು, ಅನವಶ್ಯಕ ರಸಗೊಬ್ಬರ ಬಳಕೆಯಲ್ಲೂ ಸಹ ಉಳಿತಾಯವಾಗುವುದನ್ನು ಎತ್ತಿ ತೋರಿಸುತ್ತದೆ. ಬೇರಿನಾಳಕ್ಕೆ ಹನಿ ನೀರಾವರಿ ಪೂರೈಕೆ ಆಗಿರುವುದರಿಂದ, ಕಳೆ ನಿರ್ವಹಣೆ ಬಹಳ ಸುಲಭವಾಗಿದೆ. ರಸ ಗೊಬ್ಬರ ನೇರವಾಗಿ ಬೇರಿನಾಳಕ್ಕೆ ಲಭ್ಯವಾಗಿ ಬೆಳೆಗೆ ಮಾತ್ರ ಪೂರೈಸಿರುವದರಿಂದ, ಆರೋಗ್ಯಕರ ಬೆಳೆ ಕಾಣಬಹುದಾಗಿದೆ. ಕಬ್ಬಿನ ಪ್ರತಿ ತೆಂಡೆ (ಗಳವು) ೨ ಕಿ.ಗ್ರಾಂ ತೂಗುತ್ತಿದ್ದು, ಎಕರೆಗೆ ಸರಾಸರಿ ೬೦ ಟನ್ ಇಳುವರಿ ಪಡೆಯುತ್ತಿದ್ದಾರೆ. ಈ ಎಲ್ಲ ವ್ಯವಸ್ಥೆಯಿಂದ ಅಲ್ಪ ಆಳದ, ಮಧ್ಯಮ ಫಲವತ್ತತೆಯ, ಸವಳು ಮಣ್ಣಿನ ಸಮಸ್ಯೆಗಳಿದ್ದರೂ, ಹಿತಮಿತವಾಗಿ ನೀರುಣಿಸುವುದರಿಂದ ೮ ರಿಂದ ೧೦ ಅಡಿ ಎತ್ತರ ಬೆಳೆದ ಕಬ್ಬನ್ನು ನಿಂತು ನೋಡುವ ಹಾಗೆ ಪೋಷಿಸಿರುವ ಆನಂದ ದಂಪತಿಗಳ ಕ್ರಮ, ಅನೇಕರಿಗೆ ಇದು ಪ್ರೇರಣೆಯಾಗಿದೆ. ಪರಶುರಾಮ ಡಿಗ್ಗಿ, ಮನೋಹರ ಶಿವಾಜಿ ಎನ್ನುವವರು ಸಹ ಆನಂದ ಅವರ ಮಾರ್ಗದರ್ಶನದಿಂದ ಈಗಾಗಲೇ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ.