ಕೃಷಿ ಭಾಗ್ಯ ಯೋಜನೆಯನ್ನು ಸಾಮಾನ ವರ್ಗದ ರೈತರಿಗೆ ಶೇ.80ರಷ್ಟು ಹಾಗೂ ಪರಿಶಿಷ್ಟ ಜಾತಿ, ಪಂಗಡ ರೈತರಿಗೆ ಶೇ.90ರಷ್ಟು ಸಹಾಯಧನ
ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಭಾಗ್ಯ ಯೋಜನೆಯು ಅತ್ಯಂತ ಜನಪ್ರಿಯ ಹಾಗೂ ಉಪಯುಕ್ತವಾಗಿತ್ತು. ಈ ಯೋಜನೆಯನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಕೋಟಿ ರೂ. ವೆಚ್ಚದಲ್ಲಿ ಮರು ಜಾರಿಗೊಳಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ಪ್ರಸ್ತುತ ವರ್ಷದಲ್ಲಿ ವಿಜಯನಗರ ಜಿಲ್ಲೆಯ ಒಟ್ಟು 6 ತಾಲ್ಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಸಾಮಾನ ವರ್ಗದ ರೈತರಿಗೆ ಶೇ.80ರಷ್ಟು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಶೇ.90ರಷ್ಟು ಸಹಾಯಧನದಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ.
ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು. ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು. ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ, ಬೆಳೆಗಳ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.
ಅರ್ಜಿ ಸಲ್ಲಿಸಲು ರೈತರ ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೆ ನಂಬರ್‌ನಲ್ಲಿ ಕನಿಷ್ಠ 1 ಎಕರೆ ಇರಬೇಕು. ಹಿಂದಿನ ಸಾಲುಗಳಲ್ಲಿ ಕೃಷಿ ಭಾಗ್ಯ ಯೋಜನೆ ಅಥವಾ ಯಾವುದೇ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವ ರೈತರು ಈ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ. ಆಯ್ಕೆಯಾದ ಜಿಲ್ಲೆ, ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶ ಹೊರತುಪಡಿಸಿ ಫಲಾನುಭವಿ ರೈತರನ್ನು ಆಯ್ಕೆ ಮಾಡಲಾಗುವುದು.
ಆಸಕ್ತ ರೈತರು ಅರ್ಜಿ ನಮೂನೆಯನ್ನು ಸಂಬಂಧಿಸಿದ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದು ಡಿ.31 ರೊಳಗಾಗಿ ಸಲ್ಲಿಸಬೇಕು. ಯೋಜನೆ ಸಂಪೂರ್ಣ ವಿವರ, ಅರ್ಹತೆಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ ಮುದಗಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಭಾಗ್ಯ ಯೋಜನೆ ಗದಗ :
2023-24 ನೇ ಸಾಲಿನಲ್ಲಿ ಜಿಲ್ಲೆಯ ಗದಗ, ಮುಂಡರಗಿ, ನರಗುಂದ ಹಾಗೂ ರೋಣ ತಾಲ್ಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಮಳೆಯಾಶ್ರಿತ ಕೃಷಿ ನೀತಿ 2014 ರನ್ವಯ ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರವು ಆದೇಶ ಹೊರಡಿಸಿದೆ. ಕೃಷಿ ಭಾಗ್ಯ ಯೋಜನೆಯ ಎಲ್ಲಾ ಘಟಕಗಳನ್ನು (ಕ್ಷೇತ್ರಬದು, ಕೃಷಿಹೊಂಡ, ಪಾಲಿಥೀನ್ ಹೊದಿಕೆ.
ಡಿಜೇಲ್ ಪಂಪಸೆಟ್ ಹಾಗೂ ಸೂಕ್ಷ್ಮ ನೀರಾವರಿ ಘಟಕ) ರೈತರು ಅನುಷ್ಠಾನಗೊಳಿಸುವುದು ಕಡ್ಡಾಯವಾಗಿರುತ್ತದೆ. ಅಂತಹ ರೈತರುಗಳನ್ನು ಮಾತ್ರ ತಾಲ್ಲೂಕಿನಲ್ಲಿ ಕೃಷಿಭಾಗ್ಯ ಯೋಜನೆಯ ಫಲಾನುಭವಿಯಾಗಿ ಆಯ್ಕೆ ಮಾಡಲಾಗುವುದು. ಆಸಕ್ತಿಯುಳ್ಳ ರೈತರು ತಮಗೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಗಳನ್ನು ಡಿಸೆಂಬರ್ 25 ರೊಳಗಾಗಿ ಸಲ್ಲಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ತಾರಾಮಣಿ ಜಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಭಾಗ್ಯ ಯೋಜನೆ ಧಾರವಾಡ :
ಹವಾಮಾನ ಬದಲಾವಣೆಯಿಂದ ಗಂಭೀರವಾಗಿ ಪ್ರಭಾವಕ್ಕೆ ಒಳಗಾಗುವ ಜಿಲ್ಲೆಗಳಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕು ಒಂದಾಗಿದೆ. ಜಿಲ್ಲೆಯಲ್ಲಿ ಬೆಳೆ ಹಂಗಾಮುಗಳಲ್ಲಿ ಹೆಚ್ಚುತ್ತಿರುವ ಮಧ್ಯಮ ಶ್ರೇಣಿಯ ಬರ ಹಾಗೂ ಪ್ರವಾಹಗಳಿಂದ ಮಳೆಯಾಶ್ರಿತ ಕೃಷಿಯು ಅನಿಶ್ಚಿತವಾಗಿರುತ್ತದೆ. ಜಿಲ್ಲೆಯ ಮಳೆಯಾಶ್ರಿತ ಕೃಷಿಯನ್ನು ಜೀವನಾಧಾರಿತ ಕೃಷಿಯಿಂದ ಸುಸ್ಥಿರ ಕೃಷಿಯನ್ನಾಗಿ ರೈತರ ಜೀವನ ಮಟ್ಟವನ್ನು ಉತ್ತಮಪಡಿಸಲು ಮಳೆಯಾಶ್ರಿತ ಕೃಷಿ ನೀತಿ 2014 ರನ್ವಯ ಪ್ಯಾಕೇಜ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಮರು ಅನುನಗೊಳಿಸಲು ಸರ್ಕಾರವು ತಿರ್ಮಾನಿಸಲಾಗಿದೆ.
ಹಾಗಾಗಿ ಕೃಷಿ ಇಲಾಖೆಯಲ್ಲಿ 2023-24ನೇ ಸಾಲಿನಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷಿಭಾಗ್ಯ ಯೋಜನೆಯಡಿ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕು ಆಯ್ಕೆಗೊಂಡಿರುತ್ತದೆ. ಆದ್ದರಿಂದ ಕೃಷಿಹೊಂಡ ಮತ್ತು ಇತರೆ ಘಟಕಗಳನ್ನೋಳಗೊಂಡ ಪ್ಯಾಕೇನ ಸೌಲಭ್ಯ ಪಡೆಯಲು ಇಚ್ಚೆಯುಳ್ಳ ಹಾಗೂ ಹಿಂದಿನ ವರ್ಷಗಳಲ್ಲಿ ಕೃಷಿ ಭಾಗ್ಯ ಯೋಜನೆ, ಮನರೇಗಾ ಉದ್ಯೋಗಖಾತ್ರಿ ಯೋಜನೆ, ತೋಟಗಾರಿಕೆ ಇಲಾಖೆ ಸರ್ಕಾರದ ಇತರೆ ಯೋಜನೆಗಳಡಿ ಕೃಷಿ ಹೊಂಡ ನಿರ್ಮಿಸಿಕೊಳ್ಳದ ಖುಷಿ ರೈತರು ನಿಗದಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿಗಳೊಂದಿಗೆ ರೈತ ಸಂಪರ್ಕ ಕೇಂದ್ರ ಅಣ್ಣಿಗೇರಿ ಹಾಗೂ ಮೊರಬ ಕಚೇರಿಯಲ್ಲಿ ಡಿಸೆಂಬರ್ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ನವಲಗುಂದ ಇವರಲ್ಲಿ ಸಂಪರ್ಕಿಸಬಹುದು ಎಂದು ಧಾರವಾಡ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಭಾಗ್ಯ ಯೋಜನೆ ಬಾಗಲಕೋಟೆ :
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷಿ ಭಾಗ್ಯ ಯೋಜನೆಯನ್ನು ಪ್ಯಾಕೇಜ ಮಾದರಿಯಲ್ಲಿ ಕ್ಷೇತ್ರ ಬದು, ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ಡೀಸಲ್, ಪೆಟ್ರೋಲ್ ಪಂಪಸೆಟ್, ಸೋಲಾರ್ ಪಂಪಸೆಟ್, ಲಘು ನೀರಾವರಿ ಘಟಕ ಹಾಗೂ ತಂತಿಬೇಲಿ ಒಳಗೊಂಡಂತೆ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬಾದಾಮಿ ತಾಲ್ಲೂಕಿಗೆ 70, ಬಾಗಲಕೋಟೆ 70, ಹುನಗುಂದ 70, ಬೀಳಗಿ 70, ಜಮಖಂಡಿ 70 ಹಾಗೂ ಮುಧೋಳ ತಾಲ್ಲೂಕುಗೆ 70 ಕೃಷಿ ಹೊಂಡಗಳು ಪ್ಯಾಕೇಜ ಮಾದರಿಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಆಸಕ್ತ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ನಿಗಧಿತ ನಮೂನೆಯಲ್ಲಿ ಅವಶ್ಯಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು 2024 ಜನವರಿ 3 ಕೊನೆಯ ದಿನವಾಗಿದೆ.
ವರ್ಗವಾರು ಫಲಾನುಭವಿಗಳ ಕ್ಷೇತ್ರ ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ. ರೈತರ ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೆ ನಂಬರನಲ್ಲಿ ಕನಿಷ್ಠ 1 ಎಕರೆ ಇರಬೇಕು, ಈ ಹಿಂದಿನ ಸಾಲುಗಳಲ್ಲಿ ಕೃಷಿಭಾಗ್ಯ ಯೋಜನೆಯ ಅಥವಾ ಇನ್ನಾವುದೇ ಯೋಜನೆಯಡಿ ಕೃಷಿಹೊಂಡ ಫಲಾನುಭವಿಯಾಗಿರುವ ರೈತರು ಸದರಿ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ. ಈಗಾಗಲೇ ಲಘು ನೀರಾವರಿ ಘಟಕ, ಡೀಸಲ್, ಪೆಟ್ರೋಲ್ ಪಂಪಸೆಟ್, ಸೋಲಾರ್ ಪಂಪಸೆಟ್ ಘಟಕವನ್ನು ಇಲಾಖೆಯ ಇತರೆ ಯೋಜನೆಗಳಡಿ ಸವಲತ್ತು ಪಡೆದಿದ್ದಲ್ಲಿ ಅಂತಹ ಅರ್ಜಿದಾರರಿಗೆ ಇವುಗಳನ್ನು ನೀಡಲು ಅವಕಾಶವಿರುವುದಿಲ್ಲ. ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ
ರೈತರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಸದರಿ ಯೋಜನೆಯಡಿ ಕಾರ್ಯಾದೇಶ ನೀಡಿದ 15 ದಿನಗಳೊಳಗಾಗಿ ಕೃಷಿಹೊಂಡ ನಿರ್ಮಿಸದೇ ಇರುವ ಫಲಾನುಭವಿಗಳ ಅರ್ಜಿಗಳನ್ನು ಸ್ಥಗಿತಗೊಳಿಸಿ ಇತರೆ ಫಲಾನುಭವಿಗಳಿಗೆ ಅವಕಾಶ ಕಲ್ಪಿಸಲಾಗುವುದು. ರೈತರು ಸ್ವತಃ ಕೃಷಿಹೊಂಡ ನಿರ್ಮಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಹೊಂಡಗಳು ಅನುಷ್ಠಾನ ಮಾಡಿಕೊಳ್ಳಲು ಅರ್ಜಿ ಆಹ್ವಾನ ರಾಯಚೂರು
ಜಿಲ್ಲೆಗೆ 350 ಕೃಷಿ ಹೊಂಡಗಳ ಗುರಿಯೊಂದಿಗೆ ಈ ಯೋಜನೆಯು ಪ್ಯಾಕೇಜ್ ಮಾದರಿಯಲ್ಲಿ ಕ್ಷೇತ್ರ ಬದು. ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ಡೀಸಲ್/ಪೆಟ್ರೋಲ್ ಪಂಪ್ ಸೆಟ್/ಸೋಲಾರ್ ಪಂಪ್ ಸೆಟ್, ಲಘು ನೀರಾವರಿ ಘಟಕ ಹಾಗೂ ತಂತಿ ಬೇಲಿಗಳನ್ನು ಒಳಗೊಂಡಿದ್ದು, ರೈತರು ಅರ್ಜಿಗಳನ್ನು ಸಲ್ಲಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ತಾಲ್ಲೂಕುವಾರು ನಿಗದಿ ಪಡಿಸಲಾಗಿರುವ ವಾರ್ಷಿಕ ಗುರಿಯನ್ವಯ ರಾಯಚೂರು ಸಾಮಾನ್ಯ 53 ವಿಶೇಷ ಘಟಕ ಯೋಜನೆ 12 ಗಿರಿಜನ ಉಪ ಯೋಜನೆ 5 ಒಟ್ಟು 70, ದೇವದುರ್ಗ ಸಾಮಾನ್ಯ 53 ವಿಶೇಷ ಘಟಕ ಯೋಜನೆ 12 ಗಿರಿಜನ ಉಪ ಯೋಜನೆ 5 ಒಟ್ಟು 70, ಮಾನ್ವಿ ಸಾಮಾನ್ಯ 53 ವಿಶೇಷ ಘಟಕ ಯೋಜನೆ 12 ಗಿರಿಜನ ಉಪ ಯೋಜನೆ 5 ಒಟ್ಟು 70. ಲಿಂಗಸಗೂರು ಸಾಮಾನ್ಯ 53 ವಿಶೇಷ ಘಟಕ ಯೋಜನೆ 12 ಗಿರಿಜನ ಉಪ ಯೋಜನೆ 5 ಒಟ್ಟು 70, ಸಿಂಧನುರು ಸಾಮಾನ್ಯ 53 ವಿಶೇಷ ಘಟಕ ಯೋಜನೆ 12 ಗಿರಿಜನ ಉಪ ಯೋಜನೆ 5 ಒಟ್ಟು 70, ಒಟ್ಟು 350, ಭೌತಿಕ ಗುರಿಗಳನ್ನು ನೀಡಲಾಗಿದ್ದು ಡಿ.31ರ ರೊಳಗಾಗಿ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿರುತ್ತದೆ.
ಅದರಂತೆ, ಅರ್ಜಿಗಳನ್ನು ಹತ್ತಿರದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳಲ್ಲಿ ಪಡೆಯುವುದು. ರೈತರ ಅರ್ಜಿಯೊಂದಿಗೆ: ಎಫ್.ಐ.ಡಿ, ಭಾವಚಿತ್ರ, ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸಬುಕ್ ಪ್ರತಿ ಹಾಗೂ ಆಧಾರ ಪ್ರತಿಗಳನ್ನು ಸಲ್ಲಿಸುವುದು. ಮೇಲಿನ ನಿಗಧಿತ ದಿನಾಂಕದೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ/ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.