ಪ್ರಿಯ ರೈತ ಬಾಂಧವರೇ ಇಲ್ಲಿ ನೀವು ಎರೆಹುಳು ಗೊಬ್ಬರ ಮತ್ತು ಎರೆಜಲವನ್ನು ಉತ್ಪಾದನೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.
ಎರೆಹುಳು ಗೊಬ್ಬರದ ಪೋಷಕಾಂಶಗಳು
ಎರೆಹುಳು ಗೊಬ್ಬರ ಬೆಳೆಗಳಿಗೆ ಬೇಕಾಗುವ ಹಲವಾರು ಪೋಷಕಾಂಶಗಳು ಮತ್ತು ಸೂಕ್ಷ್ಮಾಣು ಜೀವಿಗಳನ್ನು ಹೊಂದಿದೆ. ಗೊಬ್ಬರದಲ್ಲಿ ಶೇ. 0.8 ಸಾರಜನಕ, ಶೇ. 1.1 ರಂಜಕ ಮತ್ತು ಶೇ. 0.5 ಪೋಟ್ಯಾಶನ್ನು ಹೊಂದಿರುತ್ತದೆ. ಇದನ್ನು ಸಗಣಿ ಗೊಬ್ಬರಕ್ಕೆ ಹೊಲಿಸಿದಲ್ಲಿ 2 ಪಟ್ಟು ಸಾರಜನಕ 5 ಪಟ್ಟು ರಂಜಕ ಹಾಗೂ 5 ಪಟ್ಟು ಪೋಟ್ಯಾಷ್ ಹೆಚ್ಚಿಗೆ ಇರುವದು ಕಂಡು ಬಂದಿದೆ. ಇದು ಬೆಳೆ ಪ್ರಚೋದಕ ಪದಾರ್ಥಗಳಾದ ಜಿಬ್ಬರಲಿನ್, ಸೈಟೋಕೈನಿನ್, ಎನ್‌ಎ ಹಾಗೂ ಎಂಟೆಬಯೋಟಿಕ್ಸ್ ವಸ್ತುಗಳನ್ನು ಹೊಂದಿರುವುದರಿಂದ ಎರೆಹುಳು ಗೊಬ್ಬರ ಬೆಳೆಗಳಿಗೆ ಸತ್ವಭರಿತ ಸಂಪೂರ್ಣ ಸಾವಯವ ಗೊಬ್ಬರ.
ಹುಳು ವಿಧಗಳು:
ಯುಡಿಲಸ್, ಐಸಿನಿಯಾ ಮತ್ತು ಪೆರಿಯೋನಿಕ್ಸ್ ಹುಳುಗಳನ್ನು ಎಲ್ಲೆಡೆ ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಇದರಲ್ಲಿ ಯುಡ್ರಿಲಸ್ ಹುಳೂ, ಕೃಷಿ ತ್ಯಾಜ್ಯ ಪದಾರ್ಥಗಳನ್ನು ನಿರ್ವಹಣೆ ಮಾಡಲು ಅತ್ಯಂತ ಸೂಕ್ತ ತಳಿ. ಅದರಂತೇ, ಪ್ರಾಣಿಗಳ ಹಿಕ್ಕಿ ಮತ್ತು ಮುನಸಿಪಾಲಟಿ ಘನ ತ್ಯಾಜ್ಯಗಳನ್ನು ನಿರ್ವಹಿಸಲು ಐಸಿನಿಯಾ ಮತ್ತು ಪೆರಿಯೋನಿಕ್ಸ ಹುಳು ಸೂಕ್ತ.
ಜೀವನ ಚರಿತ್ರೆ
ಎಲಬು ರಹಿತ ದೇಹದ ಇರುವ ನಿಶಾಚಾರಿ ಎರೆಹುಳುಗಳು, ಸಾಮಾನ್ಯವಾಗಿ ಬೆಳಕನ್ನು ದ್ವೇಷಿಸುತ್ತವೆ. ತಮ್ಮ ದೇಹದ ಆಕುಂಚನ ಮತ್ತು ಪ್ರಸರಣೆಯಿಂದ ಚಲಿಸುತ್ತವೆ. ಎರೆಹುಳುವಿನ ದೇಹದಲ್ಲಿ ತೆಲೆಯ ಸಮೀಪವಿರುವ ಟೇಲಮ್ ಎಂಬ ಬಳೆಯಾಕಾರದ ಭಾಗವು ಸ್ಪಷ್ಟವಾಗಿ ಗೋಚರಿಸುತ್ತದೆ, ಅದು ಪ್ರೌಢಾವಸ್ಥೆಯನ್ನು ತಲುಪಿದೆ ಎಂಬುದು ಖಚಿತ. ದ್ವಿಲಿಂಗ ಪ್ರೌಢ ಎರೆಹುಳುಗಳು ಸಂಯೋಗಗೊಂಡು ಒಂದೆರಡು ವಾರದಲ್ಲಿ ಮೊಟ್ಟೆಗಳನ್ನು ಹಾಕುತ್ತವೆ. ಮೊಟ್ಟೆಗಳು ಕೊತಂಬರಿ ಬೀಜಗಳಂತೆ ಕಾಣುತ್ತವೆ. ಪ್ರತಿಯೊಂದು ಎರೆಹುಳು ಜೀವಂತ ಅವಧಿಯಲ್ಲಿ ಸುಮಾರು 100-300 ಮೊಟ್ಟೆಗಳನ್ನು ಇಡುತ್ತದೆ. ಪ್ರತಿ ಮೊಟ್ಟೆಯಿಂದ 1-3 ಮರಿಗಳು 15 ರಿಂದ 20 ದಿವಸಗಳಲ್ಲಿ ಅರೆ ಪ್ರೌಢಾವಸ್ಥೆಯನ್ನು ಮುಗಿದ ಮೇಲೆ ಪ್ರೌಢಾವಸ್ಥೆಯನ್ನು ತಲುಪುತ್ತವೆ. ಈ ರೀತಿಯಲ್ಲಿ ಒಂದು ಎರೆಹುಳು ತನ್ನ ಜೀವನ ಚಕ್ರವನ್ನು ಮುಗಿಸಲು ಸುಮಾರು 50 ರಿಂದ 70 ದಿವಸಗಳು ಬೇಕು.
ಹುಳುಗಳು ಆಹಾರದೊಡನೆ ಸೂಕ್ಷ್ಮಾಣು ಜೀವಿಗಳನ್ನು ತನ್ನ ಅನ್ನನಾಳದಲ್ಲಿ ತೆಗೆದುಕೊಳ್ಳುತ್ತವೆ. ಈ ಸೂಕ್ಷ್ಮಾಣು ಜೀವಿಗಳು ಅನ್ನನಾಳದಲ್ಲಿ ಅಧಿಕ ಸಂಖ್ಯೆಗಳಲ್ಲಿ ವೃದ್ಧಿಹೊಂದಿ ಹಿಕ್ಕಿಯೊಡನೆ ಹೊರ ಬರುತ್ತವೆ. ಅವು ತ್ಯಾಜ್ಯ ಪದಾರ್ಥಗಳನ್ನು ಸಹಾಯ ಮಾಡುತ್ತವೆ.
ಉಪಯೋಗಿಸಬಹುದಾದ ತ್ಯಾಜ್ಯ ಪದಾರ್ಥಗಳು
- ಕೃಷಿ ತ್ಯಾಜ್ಯ ಪದಾರ್ಥ,
2, ಅರಣ್ಯ ಮತ್ತು ತೋಟದ ಎಲೆ ತ್ಯಾಜ್ಯ ಪದಾರ್ಥ, - ಕೃಷಿ ಕಳೆಗಳ ಪದಾರ್ಥ,
4, ಪ್ರಾಣಿಗಳ ಸಗಣಿ ಮತ್ತು ಹಿಕ್ಕಿ ಪದಾರ್ಥ,
5, ಬಯೋಗ್ಯಾಸ ಸರಿ ಪದಾರ್ಥ, - ಅಡಿಗೆ ಮನೆ ತ್ಯಾಜ್ಯ ಪದಾರ್ಥ,
7, ಕೃಷಿ ಉದ್ದಿಮೆ ತ್ಯಾಜ್ಯ ಪದಾರ್ಥ, - ರೇಷ್ಮೆ ಕೃಷಿ ತ್ಯಾಜ್ಯ ಪದಾರ್ಥ,
- ಮಾರುಕಟ್ಟೆ ಕಾಯಿಪಲ್ಲೆ & ಹಣ್ಣು ಹಂಪಲ ತ್ಯಾಜ್ಯ ಪದಾರ್ಥ.
ತ್ಯಾಜ್ಯ ಪದಾರ್ಥವನ್ನು ಉಪಯೋಗಿಸುವ ವಿಧಾನ ಹೇಗೆ ಎಂದು ತಿಳಿದುಕೊಳ್ಳಿ.
ಬೇಗನೆ ಕೊಳೆಯುವ ಪದಾರ್ಥಗಳನ್ನು ಉದಾಹರಣೆಗೆ: ಕಳೆಗಳು, ಹಿಕ್ಕೆ ಮತ್ತು ಸಗಣಿ, ಬಯೋಗ್ಯಾಸ ಸರಿ, ಕೃಷಿ ತ್ಯಾಜ್ಯಗಳು ಹಳೆಯ ಹೊಟ್ಟು ಮತ್ತು ಎಲೆ. ನೇರವಾಗಿ ಎರೆಹುಳು ಗೊಬ್ಬರ ತಯಾರಿಸುವ ಮಡಿಗಳಿಗೆ ಹಾಕಬಹುದಾಗಿದ್ದು, ಗಟ್ಟಿಯಾದ ಕಳೆಯಲಿಕ್ಕೆ ಬಹಳಷ್ಟು ಸಮಯ ತೆಗೆದುಕೊಳ್ಳುವ ಪದಾರ್ಥಗಳನ್ನು ಉದಾಹರಣೆಗೆ: ಬೆಳೆಗಳ ಕಟ್ಟಿಗೆ, ದಂಟು, ಕೋಲಿ, ವಿವಿಧ ವಿಧಾನಗಳಿಂದ ಮೊದಲೇ ಕಳೆಸಿ (ಪ್ರಿಕಾಂಪೋಸ್ಟಿಂಗ್) ನಂತರ ಎರೆಹುಳು ಮಡಿಗಳಲ್ಲಿ ಉಪಯೋಗ ಮಾಡುತ್ತಾರೆ. ಕಟ್ಟಿಗೆ ದಂಟುಗಳನ್ನು ಕೊಳೆಸುವುದು, ಸಣ್ಣ ತುಂಡುಗಳಾಗಿ ಕತ್ತರಿಸುವುದು, ಮೂತ್ರ ಸಗಣಿಯ ಉಪಚಾರದಿಂದ ತ್ಯಾಜ್ಯ ಪದಾರ್ಥಗಳನ್ನು ಕೊಳೆಸುವುದು ಇತ್ಯಾದಿ ಪ್ರಿ-ಕಾಂಪೋಸ್ಟಿಂಗ್ ವಿಧಾನಗಳಿವೆ.
ಹುಳು ಗೊಬ್ಬರ ತಯಾರಿಸುವ ಪದ್ಧತಿಗಳು
ಎರೆಹುಳು ಗೊಬ್ಬರ ಉತ್ಪಾದನೆ ಮಾಡಲು ಸಾಧ್ಯವಿದೆ. ಪ್ರಮುಖ ಪದ್ಧತಿಗಳ ವಿವರ ಕೆಳಗಿನಂತಿದೆ.
- ಆಯಾತಾಕಾರದ ಗುಂಡಿ ಮಾದರಿಯ ಅಥವಾ ಕಲ್ಲಿನಿಂದ ನಿರ್ಮಿಸಿರುವ ಮಡಿಗಳು, ಮಡಿಗಳ ಅಳತೆ 10:1:0.6 ಮೀ. ಮಡಿಗಳ ವಿನ್ಯಾಸ : 2 ಮಡಿಗಳ ನಡುವ 30 ಸೆಂ.ಮೀ. ಅಂತರದಂತೆ ಹಲವಾರು ಮಡಿಗಳನ್ನು ಒಂದು ಜಾಗದಲ್ಲಿ ಸಿದ್ಧಪಡಿಸ ಬೇಕು. ಈ ಮಡಿಗಳಲ್ಲಿ ನಂತರ ತ್ಯಾಜ್ಯ ಪದಾರ್ಥಗಳನ್ನು ಚಿತ್ರದಲ್ಲಿ ತೋರಿಸಿರುವಂತೆ ತುಂಬಿ ಕಾಂಪೋಸ್ಟಿಂಗ್ ಮಾಡುವುದು.
- ಆಯಾತಾಕಾರದ ಮಣ್ಣಿನ/ ಸಿಮೆಂಟ ಇಟ್ಟಂಗಿ ಮಾದರಿ ಮಡಿಗಳು: ಮೇಲೆ ತಿಳಿಸಿದ ಅಳತೆಯ ಪ್ರಕಾರ ಜೋಡಿ ಅಂಕಣದಂತೆ, ಅವಶ್ಯಕತೆಗೆ ಅನುಗುಣವಾಗಿ ಹಲವಾರು ಅಂಕಣಗಳನ್ನು ತಯಾರು ಮಾಡುವುದು ಸೂಕ್ತ. ನಡುವಿನ ಗೋಡೆಗೆ ಕಿಂಡಿಗಳನ್ನು ಕೊಡುವುದರಿಂದ ಹುಳುಗಳ ಚಲನೆಗೆ ಅನುವು ಮಾಡುತ್ತದೆ. ವಿವಿಧ ತ್ಯಾಜ್ಯ ಪದಾರ್ಥಗಳನ್ನು ಅಂಕಣದಲ್ಲಿ ತುಂಬಿ ಕಾಂಪೋಸ್ಟಿಂಗ್ ಪ್ರಾರಂಬಿಸಬೇಕು.
- ಗುಂಪಿ ಮಾದರಿ ಮಡಿಗಳು : 5 ರಿಂದ 6 ಅಡಿ ವ್ಯಾಸ ಅಳತೆಯ, ಮಡಿಗಳ ಗುಂಪಿಗಳನ್ನು, ಗುಂಡಿ ಪದ್ಧತಿಯಲ್ಲಿ ಹೇಳಿರುವಂತೆ ತ್ಯಾಜ್ಯಗಳನ್ನು ಉಪಯೋಗಿಸಿ ತಯಾರು ಮಾಡುವುದು.
ಹುಳು ಗೊಬ್ಬರ ತಯಾರಿಸುವ ವಿಧಾನ
- ಸಾವಯವ ತ್ಯಾಜ್ಯ ಪದಾರ್ಥಗಳನ್ನು ಸಂಗ್ರಹಿಸುವುದು ಹಾಗೂ ಅವಶ್ಯಕತೆಗೆ ಅನುಗುಣವಾಗಿ ಉಪಚಾರ ಮಾಡುವುದು. ಈ ಕಾರ್ಯವನ್ನು ಎರೆಹುಳು ಗೊಬ್ಬರ ಉತ್ಪಾದನಾ ಘಟಕದ ಹತ್ತಿರವೇ ಮಾಡುವುದು ಸೂಕ್ತ.
- ಎರೆಹುಳು ಮಡಿಗಳನ್ನು ತ್ಯಾಜ್ಯ ಪದಾರ್ಥಗಳಿಂದ ತುಂಬಬೇಕು. ಶೇ.50 ರಿಂದ 60 ರಷ್ಟು ಒಣ ತ್ಯಾಜ್ಯ ಪದಾರ್ಥ, ಶೇ. 20 ರಿಂದ 25 ರಷ್ಟು ಹಸಿರು ಎಲೆ ತ್ಯಾಜ್ಯ ಶೇ. 15 ರಿಂದ 20 ರಷ್ಟು ಪ್ರಾಣಿಗಳ ಸಗಣಿ, ಹಿಕ್ಕೆ/ ಸರಿ ಸೂಕ್ತವಾದ ಪ್ರಮಾಣವಾಗಿರುತ್ತದೆ. ಲಭ್ಯವಿರುವ ತ್ಯಾಜ್ಯ ಪದಾರ್ಥಗಳ ಅನುಗುಣವಾಗಿ ಮೇಲೆ ತಿಳಿಸಿರುವ ಪ್ರಮಾಣದಲ್ಲಿ ಮಾರ್ಪಾಡು ಮಾಡಬೇಕು.
- ತ್ಯಾಜ್ಯ ಪದಾರ್ಥಗಳನ್ನು ಹೀಗೆ ತುಂಬುವುದು ಸೂಕ್ತ.
- ಸೋಗೆಯ / ಹುಲ್ಲಿನ / ಗರಿಯ ಹೊದಿಕೆ
- ನಂತರ ಸಗಣಿ / ತಿಪ್ಪೆಗೊಬ್ಬರ
- ನಂತರ ಮೊದಲೇ ಕಳಿಸಿದ ತ್ಯಾಜ್ಯ/ಹಸಿರು ಕಳೆಗಳು
- ನಂತರ ಸಗಣಿ | ತಿಪ್ಪೆಗೊಬ್ಬರ
- ನಂತರ ಮೊದಲೇ ಕಳಿಸಿದ ತ್ಯಾಜ್ಯ/ಹಸಿರು ಕಳೆಗಳು
- ನಂತರ ಕಟ್ಟಿಗೆ, ನಾರು, ತೆಂಗಿನ ಸಿಪ್ಪೆ
- ತಾಜ್ಯ ಪದಾರ್ಥಗಳನ್ನು ಮಡಿಗಳಲ್ಲಿ ತುಂಬಿದ ನಂತರ 1 ವಾರದವರೆಗೆ ತ್ಯಾಜ್ಯಗಳು ಸರಿಯಾಗಿ ಹಸಿಯಾಗುವಂತೆ ನೀರನ್ನು ಸಿಂಪರಣೆ ಮಾಡಬೇಕು. ನಂತರ ಮಡಿಗಳಿಗೆ ಎರೆಹುಳುಗಳನ್ನು ಬಿಡಬೇಕು. ಹುಳುಗಳನ್ನು ಬಿಟ್ಟ ನಂತರ ಮಡಿಗಳನ್ನು ಹುಲ್ಲು ಹಾಗೂ ಗರಿಗಳಿಂದ ಮುಚ್ಚಬೇಕು. ಮಡಿಗಳಿಗೆ ನೆರಳಾಗುವಂತೆ ಚಪ್ಪರ ಹಾಕಬೇಕು. ನೆರಳು ಕೊಡುವ ದೊಡ್ಡ ಗಿಡಗಳ ಕೆಳಗೆ ಮಡಿಗಳನ್ನು ಮಾಡಿದ್ದರೆ, ಚಪ್ಪರದ ಅವಶ್ಯಕತೆ ಇಲ್ಲ.
- ನಂತರ ಮಡಿಗಳಲ್ಲಿ ತೇವಾಂಶ (65-70%) ಕಾಪಾಡಲು ನಿಗದಿತ ಸಮಯದಲ್ಲಿ ನೀರನ್ನು ಮಡಿಗಳ ಮೇಲ್ಬಾಗದಲ್ಲಿ ಸಿಂಪರಣೆ ಮಾಡುವುದು. ಮಡಿಗಳ ಮೇಲ್ಬಾಗದಲ್ಲಿ ಹೆಚ್ಚಿನ ಕಡೆ ಹಿಕ್ಕೆಗಳ ಸಂಗ್ರಹವಾದಾಗ,ಹುಲ್ಲಿನ ಹೊದಿಕೆ ಮಾತ್ರ ತೊಯ್ಯುವಂತೆ ನೀರನ್ನು ಸಿಂಪರಣೆ ಮಾಡವುದು ಸೂಕ್ತವಾಗಿದೆ.
- 50 ರಿಂದ 60 ದಿನಗಳಲ್ಲಿ ಉಪಯೋಗಿಸಿ ತ್ಯಾಜ್ಯ ಪದಾರ್ಥಗಳು ಮತ್ತು ಅವುಗಳಿಗೆ ಮಾಡಿದ ಉಪಚಾರಕ್ಕೆ ಅನುಗುಣವಾಗಿ ಎರೆಹುಳು ಗೊಬ್ಬರವು ಮಡಿಗಳ ಮೇಲ್ಬಾಗದಲ್ಲಿ ಸಂಗ್ರಹವಾಗುತ್ತದೆ. ಈ ಸಮಯಕ್ಕೆ ಸಂಗ್ರಹಗೊಂಡ ಎರೆಹುಳು ಗೊಬ್ಬರ ಉಪಯೋಗಿಸಿದ ತ್ಯಾಜ್ಯ ವಸ್ತುಗಳ ಅಂದಾಜು 1/3 ರಷ್ಟು ಇರುವುದು. ನಂತರ ಈ ತೆರನಾಗಿ ಸಂಗ್ರಹವಾಗಿರುವ ಗೊಬ್ಬರವನ್ನು ಮಡಿಯಿಂದ ತೆಗೆದು ನೆರಳಲ್ಲಿ ಒಣಗಿಸಿ (ಶೇ.25 ರಿಂದ 30 ರಷ್ಟು ತೇವಾಂಶವಿರುವಂತೆ) ಪಾಲಿಥಿನ್ ಚೀಲಗಳಲ್ಲಿ ತುಂಬಿ ಇಡಬೇಕು/ ಸಿಮೆಂಟ ಡೋಣಿಗಳಲ್ಲಿ ಅಂಕಣದಲ್ಲಿ ಸಂಗ್ರಹಿಸಬೇಕು.
- ಈ ರೀತಿಯಲ್ಲಿ ಪ್ರತಿ ಕಾಂಪೋಸ್ಟಿಂಗ್‌ನಲ್ಲಿ ಎರಡರಿಂದ ಮೂರ ಸಲ (30-45 ದಿನಗಳ ಅಂತರದಲ್ಲಿ) ಗೊಬ್ಬರ ತೆಗೆದು ಮಡಿಗಳನ್ನು ಮತ್ತೆ ತ್ಯಾಜ್ಯ ಪದಾರ್ಥಗಳಿಂದ ತುಂಬುವುದು.
- ನಂತರ ಮೇಲೆ ತಿಳಿಸಿರುವಂತೆ ಕಾಂಪೋಸ್ಟಿಂಗ್ ವಿಧಾನವನ್ನು ಪುನರಾರ್ತಿಸುವುದು.
- ಉತ್ಪಾದನೆಯಾದ 6 ತಿಂಗಳೊಳಗಾಗಿ ಗೊಬ್ಬರವನ್ನು ಉಪಯೋಗಿಸಿವುದು ಸೂಕ್ತವಾಗಿದೆ.
10.ಗೊಬ್ಬರವನ್ನು ಅ.ಸಂ.6 ರಲ್ಲಿ ಹೇಳಿದಂತೆ ಸಂಗ್ರಹಿಸಿ ಶೇಖರಣೆ ಮಾಡಬೇಕು.
ಹುಳು ವೈರಿಗಳು
ಗೊಬ್ಬರ ತಯಾರು ಮಾಡುವಾಗ ಮಡಿಗಳಲ್ಲಿ ಹಲವಾರು ತರಹದ ವೈರಿಗಳು ಹುಳುಗಳಿಗೆ ಬಾಧೆ ಮಾಡುತ್ತವೆ. ವೈರಿ ಕೀಟಗಳು ಮತ್ತು ಭಕ್ಷಗಳು ಸಂಖ್ಯೆಯಲ್ಲಿ ಹೆಚ್ಚಾದಾಗ, ಎರೆ ಹುಳಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಶ ಆಗುತ್ತವೆ. ಗೆದ್ದಲು, ಕಂಜಿಗ ಇರುವೆ, ಚಪಟೆ ಹುಳು (ಪ್ಲಾಟ್ ವರ್ಮ), ಕಪ್ಪೆ, ಹಂದಿ, ಪಕ್ಷಿಗಳು ಸಾಮಾನ್ಯವಾಗಿ ಕಾಣುವಂತಹ ವೈರಿಗಳು. ಇವುಗಳಲ್ಲಿ ಗೆದ್ದಲು, ಚಪ್ಪಟೆ ಹುಳು ಮತ್ತು ಕಂಜಿಗ ಇರುವೆ ಅತೀ ಮುಖ್ಯವಾದ ವೈರಿಗಳು, ಕೆಂಪು ಮಣ್ಣಿನಲ್ಲಿ ಗೆದ್ದಲು ಮತ್ತು ಇರುವೆ ಬಾಧೆ ಹೆಚ್ಚಿಗೆ ಇರುತ್ತದೆ. ಈ ವೈರಿ ಭಕ್ಷಕಗಳ ಬಾಧೆ ತಗುಲಿದಾಗ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಹುಳುಗಳನ್ನು ರಕ್ಷಿಸಬೇಕು.
ಬೇವಿನ ಹಿಂಡಿ, ಬೇವಿನ ಎಲೆಯ ಪುಡಿ, ಭಜೆ ಬೇರಿನ ಪುಡಿ ಹಾಗೂ ಚದುರಂಗ ಎಲೆಯ ಪುಡಿಗಳನ್ನು ತ್ಯಾಜ್ಯ ಪದಾರ್ಥಗಳೊಂದಿಗೆ ಶೇ.2 ರಷ್ಟು ಉಪಯೋಗಿಸಿ ವೈರಿಗಳ ಬಾಧೆಯನ್ನು ಕಡಿಮೆ ಮಾಡಬಹುದು.
ಎರೆಹುಳು ಗೊಬ್ಬರದ ಉತ್ಪಾದನೆ
ಎರೆಹುಳು ಗೊಬ್ಬರದ ಉತ್ಪಾದನೆಯು ನಾವು ಉಪಯೋಗಿಸುವ ತ್ಯಾಜ್ಯ ಪದಾರ್ಥದ ಪ್ರಮಾಣದ ಮೇಲೆ ಅವಲಂಭಿತವಾಗಿರುತ್ತದೆ. 1 ಟನ್ ತ್ಯಾಜ್ಯ ಪದಾರ್ಥದಿಂದ 6 ರಿಂದ 7 ಕ್ವಿಂಟಲ್ ಗೊಬ್ಬರವನ್ನು ಪಡೆಯಲಿಕ್ಕೆ ಸಾಧ್ಯ ಎಂದು ಸಂಶೋಧನೆ ಇಂದ ತಿಳಿದು ಬಂದಿದೆ. 1 ಗುಂಟೆ ವಿಸ್ತೀರ್ಣದ ಮಡಿಗಳಲ್ಲಿ 1 ವರ್ಷದಲ್ಲಿ 20 ಟನ್ ತ್ಯಾಜ್ಯ ಪದಾರ್ಥಗಳನ್ನು ನಿರ್ವಹಿಸಿ 14 ರಿಂದ 15 ಟನ್ ಎರೆಹುಳು ಗೊಬ್ಬರ ಪಡೆಯಬಹುದಾಗಿದೆ. ಹುಳುಗಳು 90 ದಿವಸಗಳಲ್ಲಿ 10 ರಿಂದ 15 ಪಟ್ಟು ಸಂಖ್ಯೆಯಲ್ಲಿ ವೃದ್ಧಿ ಹೊಂದುವುದು ದೃಢಪಟ್ಟಿರುತ್ತದೆ.
ಎರೆ ಹುಳುಗಳ ಚಟುವಟಿಕೆಯ ಲಾಭಗಳು ಏನು?
- ಭೂಮಿಯ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ 10 ಪಟ್ಟು ಹೆಚ್ಚು.
- ಬೆಳೆಗೆ ಅತ್ಯವಶ್ಯಕವಾಗಿ ಬೇಕಾಗುವ ಪೋಷಕಾಂಶಗಳು ಕರಗಿ ಅಂತರ್ಜಲಕ್ಕೆ ಸೇರಿ, ಸೋರಿ ಹೋಗದಂತೆ ತಡೆಯುವುದು.
- ಎರೆಗಬ್ಬರ ಬಳಸಿ ಬೆಳೆಗೆ ಕೀಟ ರೋಗದ ಬಾಧೆ ಕಡಿಮೆ.
- ಎಲ್ಲವುಗಳಿಗಿಂತ ಮಿಗಿಲಾಗಿ ಫಸಲಿನ ಆರೋಗ್ಯ ಹೆಚ್ಚು ಉತ್ತಮವಾಗಿದ್ದು ನೀರು ಗಾಳಿ ಆಹಾರಾದಿಗಳಲ್ಲಿ ವಿಷ ಬೆರಿಕೆ ಕಡಿಮೆ ಆಗುತ್ತದೆ.
1 ಕ್ವಿಂಟಲ್ ಎರೆಗೊಬ್ಬರ ಸುಮಾರು 800 ಗ್ರಾಂ ಸಾರಜನಕ, 1100 ಗ್ರಾಂ ರಂಜಕ ಮತ್ತು 500 ಗ್ರಾಂ ಪೊಟ್ಯಾಶನ್ನು ಹೊಂದಿರುವದಾಗಿ ಸಂಶೋಧನೆಯಿಂದ ತಿಳಿದಿದೆ.
ಎರೆಗೊಬ್ಬರವನ್ನು ಸಗಣಿ ಗೊಬ್ಬರಕ್ಕೆ ಹೋಲಿಸಿದರೆ, ಎರೆಗೊಬ್ಬರ ಸಗಣಿಗೊಬ್ಬರಕ್ಕಿಂತ 2 ಪಟ್ಟು ಸಾರಜನಕ ಐದು ಪಟ್ಟು ಹೆಚ್ಚು ರಂಜಕ ಹಾಗೂ ಐದು ಪಟ್ಟು ಹೆಚ್ಚು ಬೊಟ್ಯಾರನ್ನು ಹೊಂದಿರಬೇಕು. ಎರೆ ಗೊಬ್ಬರವನ್ನು ರಾಸಾಯನಿಕ ಗೊಬ್ಬರದೊಡನೆ ಹೋಲಿಸಿದಾಗ 1 ಕ್ವಿಂಟಲ್ ಎರೆ ಗೊಬ್ಬರ ಕೊಟ್ಟರೆ ಎರಡು ಕಿ.ಗ್ರಾಂ ಯೂರಿಯಾ, ಏಳು ಕಿ.ಗ್ರಾಂ ರಂಜಕ, ಒಂದು ಕಿ.ಗ್ರಾಂ ಪೊಟ್ಯಾರ ಕೊಟ್ಟಂತೆ ಬೆಳೆಗಳು ಸಾಧು ಬೆಳೆಯುತ್ತವೆ.
ಎರೆಜಲ
ಎರೆಹುಳುಗಳನ್ನು ಸಾಕಾಣಿಕೆ ಮಾಡುವಾಗ ಉದಾಹರಣೆಗೆ: ಸಿಮೆಂಟ ಡೋಣಿ, ಪ್ಲಾಸ್ಟಿಕ್ ಡ್ರಮ್ ಅಥವಾ ಉಪಕರಣ. ಹುಳುವಿನ ಹಿಕ್ಕೆಗಳು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾದ ಸಮಯದಲ್ಲಿ ನೀರನ್ನು ಸಿಂಪರಣೆ ಮಾಡಿ ಘಟಕದಲ್ಲಿ ಹಾಯ್ದು ಹೊರ ಬರುವಂತೆ ಮಾಡಲಾಗುವುದು. ಈ ರೀತಿಯಲ್ಲಿ ಸಂಗ್ರಹಿಸುವ ಪದಾರ್ಥಕ್ಕೆ ಎರೆಜಲ ಎಂದು ಕರೆಯಲಾಗುವುದು. ವೈಜ್ಞಾನಿಕವಾಗಿ ಸಂಗ್ರಹಿಸಲು ಸಾಕಷ್ಟು ವಿಧಾನಗಳಿವೆ. ಎರೆ ಜಲವು ಬೆಳೆಗೆ ಬೇಕಾಗುವ ಪೋಷಕಾಂಶಗಳು ಮತ್ತು ಜೀವನಿರೋಧಕ ಪದಾರ್ಥಗಳನ್ನು ಹೊಂದಿರುತ್ತದೆ. ಇದನ್ನು ಬೆಳೆಗೆ ಸಿಂಪರಣೆ ಮಾಡಿದಲ್ಲಿ, ಬೆಳೆಗಳಲ್ಲಿ ಉತ್ಪಾದನೆ, ಗುಣಮಟ್ಟ, ಕೀಟನಿರೋಧಕ ಶಕ್ತಿ ಹೆಚ್ಚುವುದು ಕಾಣುತ್ತದೆ.