ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2023- 24ನೇ ಸಾಲಿನ ಪಿಯುಸಿ ಯಿಂದ ಪಿಹೆಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಹಾಗೂ ವೃತ್ತಿಪರ ಮತ್ತು ತಾಂತ್ರಿಕ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆರಿಟ್ ಕಮ್ ಮೀನ್ಸ್ ಶುಲ್ಕ ಮರುಪಾವತಿ ವಿದ್ಯಾರ್ಥಿವೇತನಕ್ಕಾಗಿ ಈಗಾಗಲೇ ಆಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ಮಾ.07 ರ ವರೆಗೆ ವಿಸ್ತರಿಸಲಾಗಿದೆ.
ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ ಸಮುದಾಯದ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ ಎಎಪಿ ಪೋರ್ಟನಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಮೌಲಾನ ಅಜಾದ ಭವನದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಅಥವಾ ಆಯಾ ತಾಲ್ಲೂಕು ವಿಸ್ತರಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು.
ಜಿಲ್ಲಾ ಹಾಗೂ ತಾಲ್ಲೂಕು ಮಾಹಿತಿ ಕೇಂದ್ರಗಳ ದೂ: 08392-245755, 9148889975, 9036925966
ಹೆಲ್ಸ್ ಡೆಸ್ಕ್ ನಂ: 08277799990 (24*7) ಸಹಾಯವಾಣಿಯ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಬಗ್ಗೆ ಮಾಹಿತಿ ಮತ್ತು ತಾಂತ್ರಿಕ ತೊಂದರೆಗಳಿದ್ದಲ್ಲಿ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಠೋಬಾ ಹೊನಕಾಂಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಆರ್ಥಿಕತೆಯ ಬೆನ್ನೆಲುಬು
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯವು ಆರ್ಥಿಕತೆಯ ಬೆನ್ನೆಲುಬಾಗಿದ್ದು, ಸಣ್ಣ ಕೈಗಾರಿಕೆಗಳು ಬೆಳವಣೆಗೆಯಾದರೆ ದೊಡ್ಡ ಕೈಗಾರಿಕೆಗಳು ಬೆಳವಣಿಗೆಗೆ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಅವರು ಅಭಿಪ್ರಾಯ ಪಟ್ಟರು.ಸಿಡ್ಡಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕಾಸಿಯಾ ಇವರ ಸಂಯುಕ್ತಾಶ್ರಯದಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ದಿನಮಾನಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೆಚ್ಚೆಚ್ಚು ಪ್ರೋತ್ಸಾಹಿಸಲಾಗುತ್ತಿದೆ.
ಹೀಗಾಗಿ ಇಂತಹ ಕಾರ್ಯಗಾರಗಳಲ್ಲಿ ಭಾಗವಹಿಸಿದರೆ ಎಂಎಎಂಇ ಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಮಹಾರುದ್ರ ಗೌಡ ಅವರು ಮಾತನಾಡಿ, ಎಂಎಎಂಇ ವಲಯಕ್ಕೆ ಸಂಬಂಧಿಸಿದಂತೆ ಇಂತಹ ಜಾಗೃತಿ ಸಭೆಗಳು ಸಂಕಷ್ಟದಲ್ಲಿ ಇರುವ ಅನೇಕ ಕೈಗಾರಿಕೆಗಳ ಪಾಲಿಗೆ ಸಂಜೀವಿನಿ ಆಗಲಿದೆ ಎಂದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ಮಾತನಾಡಿ, ಸಂಕಷ್ಟದಲ್ಲಿರುವ ಬಂಡವಾಳ ಹೂಡಿಕೆದಾರರು ಸರ್ಕಾರದಿಂದ ಪಡೆಯಬಹುದಾದ ಆರ್ಥಿಕ ನೆರವು, ತೆರಿಗೆ ವಿನಾಯಿತಿ, ಪಡೆದ ಸಾಲಕ್ಕೆ ಸಬ್ಸಿಡಿ, ರಫ್ತು ಘಟಕಗಳು ಪಡೆಯಬಹುದಾದ ನಾನಾ ರೀತಿಯ ರಿಯಾಯಿತಿಗಳ ಮಾಹಿತಿ ಆರ್ಥಿಕ ಸದೃಢತೆಗೆ ನೆರವಾಗಲಿದೆ ಎಂದು ತಿಳಿಸಿದರು. ಬೆಂಗಳೂರಿನ ಕಾಸಿಯಾ ಅಧ್ಯಕ್ಷರಾದ ಶಶಿಧರ್ ಶೆಟ್ಟಿ ಅವರು ಮಾತನಾಡಿ, ಹಣಕಾಸಿನ ನೆರವು ಎಲ್ಲಾ ಸಣ್ಣ ಪ್ರಮಾಣದ ವ್ಯವಹಾರಗಳು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಕ್ರೆಡಿಟ್ ಆಗಿದೆ ಎಂದು ತಿಳಿಸಿದರು.
ಬೆಂಗಳೂರಿನ ವಿಟಿಪಿಸಿ ಉಪ ನಿರ್ದೇಶಕ ಮನ್ಸೂರ್ ಅವರು, ಇ-ಕಾಮರ್ಸ್ ರಫ್ತು, ಎಂಎಎಂಇಗಳಿಗೆ ಹೇಗೆ ರಫ್ತು ಮಾಡುವುದು ಮತ್ತು ಇದರ ಅನುಕೂಲಗಳು ಹಾಗೂ ಅನಾನುಕಲಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ಕೆ.ಸಿ.ಸುರೇಶ್ ಬಾಬು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸೋಮಶೇಖರ, ಹ್ಯಾಲೀಸ್ ಬ್ಲೂ ಮಾಲಿಕರಾದ ಶಿವಮೂರ್ತಿ ಸೇರಿದಂತೆ ಜಿಲ್ಲಾ ಕೈಗಾರಿಕಾ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಸಮಿತಿಗಳ ವಿವಿಧ ಕೈಗಾರಿಕೆ ವಲಯಗಳ ಅಧಿಕಾರಿಗಳು, ಪದಾಧಿಕಾರಿಗಳು ಹಾಗೂ ಇತರೆ ಸಂಘ-ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.