ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ, ವಿಜಯಪುರ ಜಿಲ್ಲಾ ತೋಟಗಾರಿಕಾ ಸಂಘ (ರಿ), ಕನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಹಾಗೂ ಹಾಪ್‌ಕಾಮ್ಸ್ ಇವರ ಸಹಯೋಗದೊಂದಿಗೆ ತೋಟಗಾರಿಕೆ ಕಚೇರಿ ಆವರಣದ ಬಸವ ವನದಲ್ಲಿ ಜ.13ರಿಂದ 15ರವರೆಗೆ 2023-24ನೇ ಸಾಲಿನ ಫಲ-ಪುಷ್ಪ ಪ್ರದರ್ಶನ,ಹಣ್ಣುಗಳ ಮೇಳ ಹಾಗೂ ತೋಟಗಾರಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ರೈತರು ಬೆಳೆದಿರುವ ವಿವಿಧ ಹಾಗೂ ಅತ್ಯುತ್ತಮ ತೋಟಗಾರಿಕೆ ಬೆಳೆಗಳ ಪ್ರದರ್ಶನ, ಇಲಾಖೆ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿಯೊಂದಿಗೆ ಹೂ- ಹಣ್ಣು ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗಿದೆ. ತೋಟಗಾರಿಕೆಯಲ್ಲಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯ ತೋಟಗಾರಿಕಾ ನಿರ್ದೆಶಕ ಸಚಿನ ಉಟಗಿ (ಮೊ.7795952653), ಸಹಾಯ ತೋಟಗಾರಿಕಾ ನಿರ್ದೆಶಕ ಆನಂದ ಬಿರಾದಾರ (ಮೊ.9611071071) ಇವರನ್ನು ಸಂಪರ್ಕಿಸಬಹುದು ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಿಲ್ಲೆಯ ರೈತರು, ಸಾರ್ವಜನಿಕರು ಶಾಲಾ ಕಾಳೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಫಲ-ಪುಷ್ಪ ಪ್ರದರ್ಶಣ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತೋಟಗಾರಿಕಾ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಡಿಯೋಗ್ರಾಫಿ, ವಾರ್ತಾ ವಾಚಕ, ಬ್ಯೂಟಿಷಿಯನ್ ತರಬೇತಿಗೆ ಅರ್ಜಿ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿ ಯುವಜನರಿಗೆ ವಿಡಿಯೋಗ್ರಾಫಿ, ನಿರೂಪಣಾ ಮತ್ತು ವಾರ್ತಾ ವಾಚಕರ, ಜಿಮ್, ಫಿಟ್‌ನೆಸ್ ತರಬೇತಿ ಹಾಗೂ ಯುವತಿಯರಿಗೆ ಬ್ಯೂಟಿಷಿಯನ್ ತರಬೇತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ. ಜಿಮ್, ಫಿಟ್‌ನೆಸ್ ತರಬೇತಿ ಶಿಬಿರವು ಜನವರಿ 24 ರಿಂದ ಫೆಬ್ರವರಿ 7 ವರೆಗೆ ಒಟ್ಟು 15 ದಿನಗಳ ಕಾಲ ನಡೆಯಲಿದೆ. ಈ ತರಬೇತಿಗೆ ದ್ವಿತೀಯ ಪಿಯುಸಿ ಪಾಸಾಗಿದ್ದು, 16 ರಿಂದ 30 ವರ್ಷದೊಳಗಿರಬೇಕು. ತರಬೇತಿ ಬೆಂಗಳೂರಿನ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ ವಿದ್ಯಾನಗರ, ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಬ್ಯೂಟಿಷಿಯನ್ ತರಬೇತಿಯು ಜನವರಿ 26 ರಿಂದ 13 ದಿನಗಳ ವರೆಗೆ ನಡೆಯಲಿದ್ದು, ಎಸ್.ಎಸ್.ಎಲ್.ಸಿ ಪಾಸ್/ಪೇಲ್ ಆಗಿರಬೇಕು.
15 ರಿಂದ 29 ವಯಸ್ಸು ಮೀರಿರಬಾರದು. ವಿಡಿಯೋಗ್ರಾಫಿ ತರಬೇತಿಯು ಜನವರಿ 27 ರಿಂದ 12 ದಿನಗಳ ವರೆಗೆ ನಡೆಯಲಿದೆ. ದ್ವಿತೀಯ ಪಿಯುಸಿ ಪಾಸಾಗಿದ್ದು, 15 ರಿಂದ 29 ವರ್ಷ ಮೀರಿರಬಾರದು. ತರಬೇತಿ ಬೆಂಗಳೂರಿನ ಕುಂಬಳಗೋಳ ತರಬೇತಿ ಕೇಂದ್ರದಲ್ಲಿ ನಡೆಸಲಾಗುತ್ತಿದೆ. ನಿರೂಪಣಾ ಮತ್ತು ವಾರ್ತಾ ವಾಚಕರ ತರಬೇತಿಯು ಜನವರಿ 31 ರಿಂದ 8 ದಿನಗಳ ಕಾಲ ನಡೆಯಲಿದೆ. ಪದವಿ ಹಾಗೂ ಜರ್ನಲಿಸಂಗೆ ಪ್ರಾಮುಖ್ಯತೆ ನೀಡಲಾಗುತ್ತದೆ. 15 ರಿಂದ 29 ವರ್ಷದೊಳಗಿರಬೇಕು. ತರಬೇತಿಯನ್ನು ಬೆಂಗಳೂರಿನ ಯುವಿಕಾ ಸಭಾಂಗಣದಲ್ಲಿ ನಡೆಸಲಾಗುತ್ತಿದೆ.
ಶಿಬಿರದಲ್ಲಿ ಭಾಗವಹಿಸುವ ಯುವಜನರಿಗೆ ಊಟೋಪಚಾರ, ಪ್ರಮಾಣ ಪತ್ರ, ಸಾಮಾನ್ಯ ವಸತಿ ವ್ಯವಸ್ಥೆ ನೀಡಲಾಗುತ್ತದೆ. ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಚೇರಿ, ಕ್ರೀಡಾ ಇಲಾಖೆ, ನವನಗರ, ಬಾಗಲಕೋಟೆ ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜನವರಿ 20 ರಂದು ಸಂಜೆ 4 ಗಂಟೆಯೊಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 08354-235896, 9739722700, 9945284771 ಸಂಪರ್ಕಿಸಬಹುದಾಗಿದೆ.
ಜ.10 ರಂದು ವಾಕ್ ಇನ್ ಇಂಟರ್‌ವ್ಯೂವ್
ನಗರದ ಭೂಮಿ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ ಅವರಿಂದ ಜನವರಿ 10 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.30 ಗಂಟೆಯವರೆಗೆ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಯೋಜಿಸಲಾಗಿದೆ. ಅಶೋಕ ಸರ್ಕಲ್ ಹತ್ತಿರವಿರುವ ಲಯನ್ಸ್ ಆಸ್ಪತ್ರೆ ಕಾಂಪ್ಲೆಕ್ಸ್ ಭೂಮಿ ಸ್ಟಡಿ ಸರ್ಕಲ್ ಕಚೇರಿಯಲ್ಲಿ ವಾಕ್ ಇನ್ ಇಂಟರ್‌ವ್ಯೂವ್ ನಡೆಯಲಿದ್ದು, ನುರಿತ ಉಪನ್ಯಾಸಕ/ಕಿ ಹುದ್ದೆಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ.
ಬಿ.ಎ.-ಬಿಎಡ್ ಅಥವಾ ಎಂ.ಎ.-ಬಿಎಡ್, ಬಿ.ಎಸ್ಸಿ.- ಬಿಎಡ್(ಕೆಮಿಸ್ಟ್ರಿ) ಅಥವಾ ಎಂ.ಎಸ್ಸಿ.-ಬಿಎಡ್ (ಕೆಮಿಸ್ಟ್ರಿ), ಬಿ.ಎಸ್ಸಿ.-ಬಿಎಡ್ (ಫಿಜಿಕ್ಸ್) ಅಥವಾ ಎಂ.ಎಸ್ಸಿ.- ಬಿಎಡ್(ಫಿಜಿಕ್ಸ್) ವಿದ್ಯಾರ್ಹತೆ ಹೊಂದಿರುವ, ಕನಿಷ್ಠ 1 ರಿಂದ 2 ವರ್ಷಗಳ ಸೇವಾನುಭವ ಹೊಂದಿರುವ, 21 ರಿಂದ 30 ವರ್ಷ ವಯೋಮಾನದ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಂಡು ಉದ್ಯೋಗದ ನೆರವನ್ನು ಪಡೆಯಬಹುದು.
ಆಸಕ್ತ ನಿರುದ್ಯೋಗಿ ಯುವಕ ಮತ್ತು ಯುವತಿಯರು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳ ಪ್ರತಿಗಳು, ಆಧಾರ್ ಕಾರ್ಡ್ ಪ್ರತಿ, ಬಯೋಡೇಟಾ ಹಾಗೂ ಪಾಸ್‌ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ, ಮೊ.ನಂ: 8105693234 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್‌ಸೆಟಿ ಸಂಸ್ಥೆಯಿಂದ ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯಿಂದ ಟಿವಿ ಟೆಕ್ನಿಷಿಯನ್, ಸೋಲಾರ್ ಟೆಕ್ನಿಷಿಯನ್ ಮತ್ತು ಜೆಸಿಬಿ ಆಪರೇಟರ್ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 45 ವಯೋಮಾನದ ನಿರುದ್ಯೋಗಿ ಯುವಕರಿಗಾಗಿ ಜನವರಿ ಮತ್ತು ಫೆಬ್ರವರಿ ಮಾಹೆಗಳಲ್ಲಿ ಟಿವಿ ಟೆಕ್ನಿಷಿಯನ್, ಸೋಲಾರ್ ಟೆಕ್ನಿಷಿಯನ್ ಮತ್ತು ಜೆಸಿಬಿ ಆಪರೇಟರ್ ತರಬೇತಿಗಳನ್ನು ನೀಡಲಾಗುತ್ತದೆ. ಈ ತರಬೇತಿಗಳು ಸ್ವ- ಉದ್ಯೋಗ ಪ್ರಾರಂಭಿಸಿ, ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿವೆ.
ತರಬೇತಿಯು ಊಟ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ತರಬೇತಿಯಲ್ಲಿ ಕೌಶಲ್ಯ, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿನಿಂದ ಸಾಲ ಪಡೆದು ಸ್ವ-ಉದ್ಯೋಗ ಪ್ರಾರಂಭಿಸಲು ಬೇಕಾಗುವ ಜ್ಞಾನ, ಸರಕಾರಿ ಯೋಜನೆಗಳ ಮತ್ತು ಯೋಜನಾ ವರದಿ ತಯಾರಿಕೆ ಇನ್ನಿತರ ಮಾಹಿತಿಗಳನ್ನು ನೀಡಲಾಗುತ್ತದೆ.
ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸಗಳನ್ನು ನೋಂದಾಯಿಸಲು ಜನವರಿ 17 ಕೊನೆಯ ದಿನವಾಗಿದೆ. ಆಸಕ್ತರು ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ, ಆರ್‌ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಅಥವಾ ಮೊ.ಸಂ: 8217236973, 9483485489, 9482188780.
ಯುವನಿಧಿ ಯೋಜನೆಯ ನೋಂದಣಿಗೆ ಧಾರವಾಡ ಜಿಲ್ಲೆಯ 8,537 ವಿದ್ಯಾರ್ಥಿಗಳು ಅರ್ಹ
ಧಾರವಾಡ : 2022-23ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯ ಪದವಿ ಕಾಲೇಜುಗಳಲ್ಲಿ 7,246 ವಿದ್ಯಾರ್ಥಿಗಳು ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿರುವ 1,291 ವಿದ್ಯಾರ್ಥಿಗಳು ಸೇರಿ ಅಂದಾಜು ಒಟ್ಟು 8,537 ವಿದ್ಯಾರ್ಥಿಗಳು ತೇರ್ಗಡೆಯನ್ನು ಹೊಂದಿರುತ್ತಾರೆ.
ತೇರ್ಗಡೆಯಾಗಿರುವ ನಗರ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಸೇವಾ ಸಿಂಧು, ಕರ್ನಾಟಕ-ಒನ್ ಪೊರ್ಟಲ್ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ-ಒನ್, ಬಾಪೂಜಿ ಸೇವಾ ಕೇಂದ್ರದಲ್ಲಿ ಅಭ್ಯರ್ಥಿಗಳ ನೋಂದಣಿ ಮಾಡಲು ತಿಳಿಸಲಾಗಿದೆ.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ವಿಡಿಯೋ ಸಂವಾದದಲ್ಲಿ ನಿರ್ದೇಶಿಸಿದಂತೆ, ಎಎಡಿ ಪೊರ್ಟಲ್‌ನಲ್ಲಿ ನೋಂದಾಯಿಸಿರುವ ಸುಮಾರು 4 ಲಕ್ಷ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಗೆ ನೋಂದಾಯಿಸಿಕೊಳ್ಳಲು ಅವರ ಮೊಬೈಲ್‌ಗಳಿಗೆ ಸಮೂಹ ಸಂದೇಶ ರವಾನಿಸಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 18005999918 ಗೆ ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕಲಚೇತನ ರಿಯಾಯತಿ ಬಸ್‌ಪಾಸ ನವೀಕರಿಸಲು ಅರ್ಜಿ
2024ನೇ ಸಾಲಿಗೆ ವಿಕಲಚೇತನ ರಿಯಾಯತಿ ಬಸ್ ಪಾಸುಗಳನ್ನು ನವಿಕರಿಸಿಕೊಳ್ಳುವಂತೆ ವಿಜಯಪುರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಯನ್ನು ನೋಂದಾಯಿಸಿ, ನಿಗದಿತ ಅವಧಿಯೊಳಗೆ ತಮ್ಮ ತಾಲೂಕಿನ ವ್ಯಾಪ್ತಿಯ ಬಸ್ ನಿಲ್ದಾಣದ ಕಚೇರಿಯಲ್ಲಿ ರೂ.660 ಶುಲ್ಕವನ್ನು ಭರಿಸಿ ಬಸ್ ಪಾಸ್ ನವೀಕರಿಸಿಕೊಳ್ಳಬಹುದಾಗಿದೆ. ಪಾಸು ನವೀಕರಣಗೊಳ್ಳುವವರೆಗೂ 2023ನೇ ಸಾಲಿನ ಹಳೆಯ ಬಸ್ ಪಾಸ್‌ನ್ನು ದಿನಾಂಕ 29-02-2024ರವರೆಗೆ ಬಳಸಲು ಮಾನ್ಯತೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.