ಆರ್ಥಿಕ ಸ್ವಾವಲಂಭಿಗೆ ತರಬೇತಿಗಳು ಅಗತ್ಯವಾಗಿದೆ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಮಾಜಿ ಶಾಸಕ ಹಾಗೂ ಬಿ.ವಿ.ವಿ.ಸಂಘ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಹೇಳಿದರು. ಅವರು ನಗರದ ಪ್ರತಿಷ್ಠಿತ ಬಿ.ವಿ.ಬಿ.ಸಂಘದ ಜನಶಿಕ್ಷ ಸಂಸ್ಥೆ ಬಾಗಲಕೋಟೆ ಇವರ ಆಶ್ರಯದಲ್ಲಿ ಸೋಮವಾರ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಟ್ರೈಲರಿಂಗ್ ತರಬೇತಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಬರುವ 18 ವಿವಿಧ ವೃತ್ತಿಗಳು ಬರುತ್ತವೆ, ಮಹಿಳೆಯರು ಈ ಟ್ರೈಲರಿಂಗ್ ತರಬೇತಿಯನ್ನು ಪಡೆದು ಯೋಜನೆ ಬೆರೆ ಬೆರೆ ಸೌಲಭ್ಯಗಳನ್ನು ಪಡೆದುಕೊಂಡು ಸ್ವಂತ ಉದ್ಯೋಗ ಪ್ರಾರಂಬಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಸ್ವಂತ ಉದ್ದಿಮೆಯನ್ನು ಪ್ರಾರಂಬಿಸಿ ಅನೇಕರಿಗೆ ಉದ್ಯೋಗವನ್ನು ನೀಡುವಂತರಾಗಿರಿ, ಆರ್ಥಿಕ ಸ್ವಾವಲಂಭಿಗಳಾಗಲು ಈ ತರಬೇತಿಗಳು ಅಗತ್ಯವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಿ.ವಿ.ವಿ. ಸಂಘದ ಗೌರವ ಕಾರ್ಯದರ್ಶಿಗಳು ಹಾಗೂ ಜನ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕಷರಾದ ಮಹೇಶ ಅಥಣಿ ಮಾತನಾಡಿದರು. ಸಂಘದ ಸದಸ್ಯರಾದ ಎಸ್.ಕೆ.ಶಾಬಾದಿ, ಎಸ್.ಆರ್.ಮನಹಳ್ಳಿ,ಬಿ.ಎಸ್.ಅಂಗಡಿ, ವೀರಣ್ಣ ಕಿರಗಿ, ಶರಣಬಸವ ಹುನ್ನೂರ, ನಾಗರತ್ನಾ ಟಿ.ಎಮ್. ವೇದಿಕೆ ಮೇಲೆ ಉಪಸ್ಥಿತರಿದ್ದರು. ಬಿ.ಕೆ.ಕೋರಿ ಕಾರ್ಯಕ್ರಮ ನೀರೂಪಿಸಿದರು, ಎ.ಎಸ್.ಗೌಡರ ಸ್ವಾಗತಿಸಿದರು,ಎಸ್.ಜಿ.ಕಬ್ಬಿಣ ವಂದಿಸಿದರು.
ಹೊಸ ನ್ಯಾಯಬೆಲೆ ಅಂಗಡಿ ಮಂಜೂರಿಗೆ ಅರ್ಜಿ
ಇಲಕಲ್ಲ ತಾಲೂಕಿನ ಚಿಕ್ಕ ಆದಾಪೂರ ಗ್ರಾಮಕ್ಕೆ ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿ ನೀಡುವ ಸಲುವಾಗಿ ಅರ್ಹ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಸಹಕಾರಿ ಸಂಘವು ಕನಿಷ್ಟ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು, ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಠ 2 ಲಕ್ಷ ರೂ.ಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು. ಖಾಸಗಿ ವ್ಯಕ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವದಿಲ್ಲ.
ವಿಕಲಚೇತನ ವ್ಯಕ್ತಿಗಳು ಹಾಗೂ ತೃತೀಯ ಲಿಂಗದ ವ್ಯಕ್ತಿಗಳೆಂದು ದೃಢೀಕರಿಸುವ ಬಗ್ಗೆ ವೈದ್ಯಕೀಯ ಅಧಿಕಾರಿಗಳಿಂದ ಪಡೆದ ದೃಢೀಕರಣ ಪತ್ರ ಹಾಜರುಪಡಿಸತಕ್ಕದ್ದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಕಲ್ಲ ತಹಶೀಲ್ದಾರ ಅಥವಾ ಆಹಾರ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಸಂಪರ್ಕಿಸಿ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಮಾರ್ಚ 2 ರಂದು ಸಂಜೆ 5.30 ರೊಳಗಾಗಿ ಇಳಕಲ್ಲ ತಹಶೀಲ್ದಾರ ಕಚೇರಿಗೆ ಸಲ್ಲಿಸುವಂತೆ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳಾ ಸಬಲೀಕರಣಕ್ಕೆ ಪೂರಕವಾದ ಶಕ್ತಿ ಯೋಜನೆ
ಶಕ್ತಿ ಯೋಜನೆಯಡಿ 146 ಕೋಟಿ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿನಿಯರು ಉಚಿತವಾಗಿ ಪ್ರಯಾಣ ಮಾಡಿದ್ದು, ಮಹಿಳಾ ಸಬಲೀಕರಣಕ್ಕೆ ಶಕ್ತಿ ಯೋಜನೆ ಪೂರಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ 100 ಹೊಸ ವಿನ್ಯಾಸ ಕರ್ನಾಟಕ ಸಾರಿಗೆ ಬಸ್ಸುಗಳ(ಅಶ್ವಮೇಧ ಕ್ಲಾಸಿಕ್ ಪ್ರಯಾಣದ ಮರುಕಲ್ಪನೆ ಪಾಯಿಂಟ್ ಟು ಪಾಯಿಂಟ್ ಎಕ್ಸೆಸ್) ಬಸ್ಸುಗಳನ್ನು ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈ ವರ್ಷ ಒಂದು ಸಾವಿರ ಬಸ್ಸುಗಳನ್ನು ಸೇರ್ಪಡೆ ಮಾಡುತ್ತಿದ್ದು ಇಂದು ನೂರು ಬಸ್ಸುಗಳ ಬಿಡುಗಡೆಯಾಗಿದೆ. ರಾಜ್ಯದ ಜನರಿಗೆ 4 ಕಾರ್ಪೋರೇಷಗಳು ಬಸ್ಸುಗಳ ಸೇವೆಯನ್ನು ಒದಗಿಸುತ್ತಿದೆ. ನಾಲ್ಕು ವರ್ಷಗಳಿಂದ ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಕೂಡ ಕೆಲವು 3800 ಬಸ್ಸುಗಳನ್ನು ಸ್ಥಗಿತಗೊಳಿಸಲಾಗಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಸಂಸ್ಥೆಗೆ 5800 ಬಸ್ಸುಗಳನ್ನು ಸೇರ್ಪಡೆ ಮಾಡುತ್ತಿದ್ದೇವೆ. ಈ ರಾಜ್ಯದ ಜನರಿಗೆ ಸುರಕ್ಷಿತ ಮತ್ತು ಸರಾಗ ಪ್ರಯಾಣ ಮಾಡಲು ಅಗತ್ಯ ಅನುಕೂಲಗಳನ್ನು ಮಾಡಿಕೊಡಲಿದೆ ಎಂದರು.
ಸಿಬ್ಬಂದಿಗೆ ವಿಮಾ ಸೌಲಭ್ಯ :
ಕೆಎಸ್ ಆರ್ ಟಿಸಿ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯವನ್ನು 1 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಕರ್ತವ್ಯದ ವೇಳೆ ಮೃತಪಡುವ ಸಿಬ್ಬಂದಿಗಳಿಗೆ ಪರಿಹಾರ ಮೊತ್ತವನ್ನು 3 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಚುನಾವಣಾ ಪೂರ್ವದ ಭರವಸೆ ಈಡೇರಿಸಲಾಗಿದೆ. ಚುನಾವಣಾ ಪೂರ್ವದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕ.ರ.ಸಾ.ಸಂ ಮತ್ತು ಇತರೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸುತ್ತೇವೆ ಎಂದು ಹೇಳಿದ್ದೆವು. ಬೆಲೆಯೇರಿಕೆ. ಹಣದುಬ್ಬರು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವ ಪರಿಸ್ಥಿತಿಯಲ್ಲಿ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಿದ್ದೇವೆ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಕ.ರ.ಸಾ.ಸಂ ಅಧ್ಯಕ್ಷ ಗೋಪಿ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಮೊದಲಾದವರು ಉಪಸ್ಥಿತರಿದ್ದರು.