ಬೆಳೆಕಟಾವು ನಂತರ ಮೇವು ಸುಡದಂತೆ ರೈತರಿಗೆ ಮನವಿ. ಬೆಳೆ ಕಟಾವಿನ ನಂತರ ಉಳಿಯುವ ಮೇವನ್ನು ಬೆಂಕಿ ಹಚ್ಚಿ ಸುಡಬಾರದುಎಂದು ವಿಜಯನಗರ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಅವರು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದ್ದಾರೆ. ಭತ್ತ, ಕಬ್ಬು ಹಾಗೂ ಇತರೆ ಬೆಳೆಗಳ ಕಟಾವಿನ ನಂತರ ಉಳಿಯುವ ಬೆಳೆಗಳ ಕೊಯ್ಲಿ ಮತ್ತು ಹುಲ್ಲನ್ನು ಬೆಂಕಿಹಚ್ಚಿ ಸುಡುವುದರಿಂದ ಕೆಲವು ದುಷ್ಪರಿಣಾಮಗಳು ಉಂಟಾಗುತ್ತವೆ.
ಇದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಸುಟ್ಟು ಹೋಗುತ್ತದೆ. ಹೊಗೆಯಿಂದ ವಾತಾವರಣದಲ್ಲಿ ಇಂಗಾಲದ ಅನಿಲ (ಕಾರ್ಬನ್ ಡೈ ಆಕ್ಸೆಡ್)ದ ಪ್ರಮಾಣ ಹೆಚ್ಚಾಗುವುದರಿಂದ ವಾಯು ಮಾಲಿನ್ಯ ವಾಗುತ್ತದೆ. ಬೆಂಕಿಯಿಂದ ಸೂಕ್ಷ್ಮಜೀವಿಗಳು, ಉಪಕಾರಿ ಕೀಟಗಳು ನಾಶವಾಗುತ್ತವೆ. ಜೀವ ವೈವಿಧ್ಯತೆ ನಾಶವಾಗುತ್ತದೆ.
ಬೆಳೆಗಳ ಉಳಿಕೆಯನ್ನು ಈ ರೀತಿ ಉಪಯೋಗಿಸಿ
ಕಟಾವಾದ ಬೆಳೆಗಳ ಉಳಿಕೆಯನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನಲ್ಲಿ ಸಾವಯವ ಪದಾರ್ಥ ಹೆಚ್ಚಾಗುತ್ತದೆ. ಕಟಾವಾದ ಬೆಳೆಗಳ ಉಳಿಕೆಯನ್ನು ಪಶು ಆಹಾರವಾಗಿ, ಎರೆಹುಳು ಗೊಬ್ಬರಕ್ಕಾಗಿ, ಅಣಬೆಉತ್ಪಾದನೆಗಾಗಿ, ಬಯೋಗ್ಯಾಸ್ ಗೆ ಬಳಕೆ ಮಾಡಬಹುದಾಗಿದೆ.
ಹೇಗೆ ಅದನ್ನು ಬಳಸಬೇಕು?
ಕಟಾವಾದ ಬೆಳೆಗಳ ಉಳಿಕೆಗೆ ಕಾಂಪೊ ಸ್ಟ್‌ಕಲ್ಟರ್ ಡಿಕಾಂಪೋಸರ್ ಅನ್ನು 2 ಕೆಜಿ ಪ್ರತಿಟನ್ ಉಳಿಕೆಗೆ, 2 ಕೆಜಿ ಟೈಕೊಡರ್ಮ್‌ದೊಂದಿಗೆ ಬಳಸುವುದರಿಂದ ಬೇಗನೆ ಕೊಳೆತು ಗೊಬ್ಬರವಾಗಿ ಮಾರ್ಪಾಡಾಗುತ್ತದೆ. ಆದ್ದರಿಂದ ಜಿಲ್ಲೆಯ ರೈತರು ಕಟಾವಾದ ಭತ್ತ, ಕಬ್ಬು ಹಾಗೂ ಇತರೆ ಬೆಳೆಗಳ ಉಳಿಕೆಯನ್ನು ಸುಡುವುದರ ಬದಲು ಪ್ರಾಯೋಗಿಕವಾಗಿ ಉಪಯೋಗಿಸುವುದು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.