ಬೆಳೆಹಾನಿ ಪರಿಹಾರ ರೈತರಿಗೆ ಪಾವತಿಸಲು ಸರ್ಕಾರದಿಂದ ಅನುಮತಿ . ರಾಜ್ಯ ಸರ್ಕಾರದಿಂದ 2023ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ರೈತರಿಗೆ ಬೆಳೆಹಾನಿ ಪರಿಹಾರದ ಮೊದಲನೇ ಕಂತಾಗಿ ಅಥವಾ ಎಸ್‌ಡಿಆರ್ಎಫ್/ಎನ್‌ಡಿಆರ್ಎಫ್ ಮಾರ್ಗಸೂಚಿಯಂತೆ ಬೆಳೆಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಟ ರೂ.2000ರವರೆಗೆ ರೈತರಿಗೆ ಪಾವತಿಸಲು ಸರ್ಕಾರವು ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆಯಾದ ನಂತರ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆಯಿರುವ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಸರ್ಕಾರದ ನಿರ್ದೇಶನದಂತೆ ವಿಜಯನಗರ ಜಿಲ್ಲೆಯಲ್ಲಿ 2023ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ರೈತರಿಗೆ ಬೆಳೆ ಸಮೀಕ್ಷೆಯಲ್ಲಿ ಎಫ್.ಐ.ಡಿ ಹೊಂದಿರುವ ರೈತರ ಮಾಹಿತಿಯನ್ನಾಧರಿಸಿ ಪರಿಹಾರ ತಂತ್ರಾಂಶದ ಮೂಲಕ ಹಂತಹಂತವಾಗಿ ಪರಿಹಾರ ವಿತರಣೆ ಪ್ರಕ್ರಿಯೆ ಪ್ರಾರಂಭ.
ಅದರಂತೆ ಮೂರು ಹಂತಗಳಲ್ಲಿ ಒಟ್ಟು 1,00,333 ರೈತರಿಗೆ 19,77,13,264 ರೂ. ಗಳ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲು ಅನುಮೋದನೆ ನೀಡಲಾಗಿದ್ದು, ಸರ್ಕಾರದಿಂದ ನೇರವಾಗಿ ಆಧಾರ್ ಸಂಖ್ಯೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮೆ ಮಾಡಿರುತ್ತಾರೆ ಹಾಗೂ ಬಾಕಿ ಉಳಿದ ರೈತರಿಗೆ ಹಂತಹಂತವಾಗಿ ಪರಿಹಾರ ನೀಡುವುದು ಪ್ರಗತಿ ಹಂತದಲ್ಲಿದ್ದು ತುರ್ತಾಗಿ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಹಶೀಲ್ದಾರ ಕಾರ್ಯಾಲಯಕ್ಕೆ ಭೇಟಿ ನೀಡಬಹುದು ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.
ಬಿ.ಟಿ ಹತ್ತಿ ಬೆಳೆಗಾರರಿಗೆ ಕೃಷಿ ಇಲಾಖೆಯಿಂದ ಸಲಹೆಗಳು
ಬಿ.ಟಿ. ಹತ್ತಿಯ ಬಿತ್ತನೆ ಕಾಲಾವಧಿಯು ಜೂನ್ ಮೊದಲ ವಾರದಿಂದ ಜುಲೈ ಮೂರನೇ ವಾರದವರೆಗೆ ಇದ್ದು, ಈ ಕಾಲಾವಧಿಯ ಶಿಫಾರಸ್ಸನ್ನು ಅನುಸರಿಸುವಂತೆ ರಾಯಚೂರು ವಿಶ್ವ ವಿದ್ಯಾನಿಲಯದ ಕೃಷಿ ವಿಜ್ಞಾನಿಗಳು ಸೂಚಿಸಿದ್ದಾರೆ. ಹತ್ತಿ ಬೆಳೆಯುವ ರೈತರಿಗಾಗಿ ವಿವಿಧ ಬೀಜದ ಕಂಪನಿಗಳು ಅನೇಕ ಬಿ.ಟಿ. ಹತ್ತಿ ತಳಿಗಳನ್ನು ಮಾರಾಟಕ್ಕೆ ದಾಸ್ತಾನು ಇಟ್ಟಿರುತ್ತಾರೆ. ಈ ಎಲ್ಲಾ ತಳಿಗಳು ಬಿ.ಟಿ. ತಳಿಗಳಾಗಿದ್ದು, ಅವುಗಳಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ.
ರೈತರು ಯಾವುದೇ ಒಂದು ಕಂಪನಿಯ ಯಾವುದಾದರೊಂದು ತಳಿಯು ಬೇಕೆಂದಲ್ಲಿ ಮಾರುಕಟ್ಟೆಯಲ್ಲಿ ಅಂತಹ ತಳಿಯ ಕೊರತೆಯುಂಟಾಗಿ, ಅಧಿಕ ಬೆಲೆಗೆ ಮಾರಾಟವಾಗುವುದು ಹಾಗೂ ಕಳಪೆ ಬೀಜವನ್ನು ಸರಬರಾಜು ಮಾಡುವುದು ಇತ್ಯಾದಿ ಅವ್ಯವಹಾರ ಪ್ರಾರಂಭವಾಗಿ, ರೈತರಿಗೆ ಅನ್ಯಾಯ ವಾಗುವುದೆಂಬುದನ್ನು ಮನಗಾಣಬೇಕು. ಕಾರಣ ಹತ್ತಿ ಬೆಳೆಗಾರರು ಮಾರುಕಟ್ಟೆಯಲ್ಲಿರುವ ವಿವಿಧ ತಳಿಗಳಲ್ಲಿ ಲಭ್ಯತೆಯ ಮೇಲೆ ಆಯ್ಕೆ ಮಾಡಿಕೊಳ್ಳಬೇಕು. ಆದರೆ ಕೊಳ್ಳುವ ಮುನ್ನ ಪ್ಯಾಕೇಟ್‌ನ್ನು ಪರಿಶೀಲಿಸಿ, ತಯಾರಕರ ಕಂಪನಿಯ ಪೂರ್ಣ ಹೆಸರು ಹಾಗೂ ವಿಳಾಸ ಸರಿಯಿರುವುದನ್ನು ಹಾಗೂ ಅದರೊಂದಿಗೆ ನಿಜ ಚೀಟಿ ಪತ್ರ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.
ಬಿತ್ತನೆ ಬೀಜವನ್ನು ಅಧಿಕೃತ ಪರವಾನಿಗೆ ಹೊಂದಿರುವವರಿಂದ ಕೊಂಡುಕೊಳ್ಳಬೇಕು ಹಾಗೂ ಮಾರಾಟಗಾರರಿಂದ ಕಡ್ಡಾಯವಾಗಿ ತಪ್ಪದೇ ರಸೀದಿಯನ್ನು ಕೇಳಿ ಪಡೆಯಬೇಕು. ಆ ತಳಿಯ ಬೇಸಾಯ ಪದ್ಧತಿಯ ಬಗ್ಗೆ ಕರಪತ್ರವನ್ನು ಪಡೆಯಬೇಕು. ಬಿತ್ತನೆ ಮಾಡಿದ ನಂತರ ಬೆಳೆ ಕಟಾವು ಆಗುವವರೆಗೆ ಬೀಜದ ಚೀಲ, ಅಲ್ಪ ಪ್ರಮಾಣದ ಬೀಜ, ರಸೀದಿ ಹಾಗೂ ಕರಪತ್ರವನ್ನು ಕಾಯ್ದಿರಿಸಿಕೊಳ್ಳಬೇಕು. ಬೆಳೆಯಲ್ಲಿ ಸಮಸ್ಯೆಯುಂಟಾದಾಗ ಇವುಗಳು ಪ್ರಯೋಜನಕ್ಕೆ ಬರುತ್ತವೆ.
ಪ್ರತಿ ಬಿ.ಟಿ. ಹತ್ತಿಯ ಪ್ಯಾಕೇಟ್ ಜೊತೆ 125 ಗ್ರಾಂ. ಬಿ.ಟಿ. ಯೇತರ (ರೆಪ್ಯೂಜಿ) ಬೀಜಗಳನ್ನು ನೀಡುತ್ತಿದ್ದು, ರೈತರು ತಮ್ಮ ಹೊಲದ ಸುತ್ತಲೂ 4 ಸಾಲಿನಲ್ಲಿ ಈ ಬೀಜಗಳನ್ನು ಖಡ್ಡಾಯವಾಗಿ ಬಿತ್ತನೆ ಮಾಡಬೇಕು. ಇದರಿಂದ ಕಾಯಿಕೊರಕ ಹುಳುವಿನಲ್ಲಿ ಬಿ.ಟಿ. ನಿರೋಧಕ ಶಕ್ತಿಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಹಾಗೂ ಕಾಯಿಕೊರಕದ ಬಾಧೆಯನ್ನು ಗುರುತಿಸಲು ಅನುಕೂಲವಾಗುತ್ತದೆ. ಕೆಲವೊಂದು ರೈತರು ಬಿ.ಟಿ. ಯೇತರ ಬೀಜವನ್ನು ಹುಸಿ ಗುಣಿಗಳಲ್ಲಿ ಬಳಸುತ್ತಿರುವುದು ಕಂಡು ಬರುತ್ತದೆ. ಆದರೆ ಹುಸಿಗುಣಿಗಳಿಗಾಗಿ ಬಳಸದೇ ಮೇಲೆ ತಿಳಿಸಿದಂತೆ ಅನುಸರಿಸಲು ರೈತರಿಗೆ ಕೋರಿದೆ. ಬಿತ್ತನೆ ಬೀಜಕ್ಕಾಗಿ ಹತ್ತಿ ಬೆಳೆಯುವ ರೈತರು ಕಡ್ಡಾಯವಾಗಿ ಕಂಪನಿಯೊಂದಿಗೆ ಅಥವಾ ಸೀಡ್ ಆರ್ಗನೈಸರ್ ಇವರೊಂದಿಗೆ ಒಡಂಬಡಿಕೆ ಮಾಡಿಕೊಂಡಿರಬೇಕು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.