ನಗರದ ಆಶಾದೀಪ ಸಂಸ್ಥೆಯ ನವಜೀವನ ವೃದ್ಧಾಶ್ರಮದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ (ನಬಾರ್ಡ್) ಮತ್ತು ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆಯ ಸಹಯೋಗದಲ್ಲಿ ಮಹಿಳೆಯರಿಗೆ ಏರ್ಪಡಿಸಿದ್ದ ಹೊಲಿಗೆ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ನಡೆಯಿತು. ಈ ವೇಳೆ ನಬಾರ್ಡ್ ಡಿಡಿಎಂ ಮಂಜುನಾಥ ರೆಡ್ಡಿ ಮಾತನಾಡಿ, ಹೊಲಿಗೆ ತರಬೇತಿ ಪಡೆದ ಮಹಿಳೆಯರು ಆಧುನಿಕತೆಗೆ ತಕ್ಕಂತೆ ಬಟ್ಟೆ ಹೊಲಿಯುವ ನೈಪುಣ್ಯತೆ ಬೆಳೆಸಿಕೊಳ್ಳಬೇಕು ಎಂದರು.
ಹುನಗುಂದ ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿ.ಎ.ಗಿರಿತಿಮ್ಮನವರ, ಆಶಾದೀಪ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಘು ಹುಬ್ಬಳ್ಳಿ ಮಾತನಾಡಿ, ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆಗಳ ಜತೆಗೆ ಆಧಾಯದ ಮೂಲವಾಗಿ ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡಲ್ಲಿ ಆರ್ಥಿಕವಾಗಿ ಸದೃಢತೆ ಹೊಂದಬಹುದಾಗಿದೆ ಎಂದರು.
ಹೊಲಿಗೆ ತರಬೇತಿ ಪಡೆದ ಮಹಿಳೆಯರು ತರಬೇತಿಯನ್ನು ಆಯೋಜನೆ ಮಾಡಿದ್ದ ನಬಾರ್ಡ್ ಹಾಗೂ ಆಶಾದೀಪ ಸಂಸ್ಥೆಯ ಕಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಹೊಲಿಗೆ ತರಬೇತಿ ಪಡೆದ 30 ಮಹಿಳೆಯರಿಗೆ ಪ್ರಮಾಣ ಪತ್ರ ಮತ್ತು ಗೌರವಧನ ನೀಡಲಾಯಿತು ಹಾಗೂ ನಬಾರ್ಡ್ ಡಿಡಿಎಂ ಮಂಜುನಾಥ ರೆಡ್ಡಿ ಅವರಿಗೆ ಆಶಾದೀಪ ಸಂಸ್ಥೆಯ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಆಶಾದೀಪ ಸಂಸ್ಥೆಯ ಅಧ್ಯಕ್ಷ ಚಂದ್ರು ಅಪ್ಪಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಹಕಾರ್ಯದರ್ಶಿ ಸಲಿಂ ಮುದಗಲ್, ತರಬೇತಿದಾರರಾದ ಅಂಬಿಕಾ ಚವ್ಹಾಣ, ಶಾರದಾ ರಾಠೋಡ ಸೇರಿದಂತೆ ಆಶಾದೀಪ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜಿಲ್ಲೆಗೆ ಶೇ.77.92 ರಷ್ಟು ಎಸ್.ಎಸ್.ಎಲ್.ಸಿ ಫಲಿತಾಂಶ
2024ರ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲತಾಂಶ ಗುರುವಾರ ಪ್ರಕಟವಾಗಿದ್ದು, ಬಾಗಲಕೋಟೆ ಜಿಲ್ಲೆ ಶೇ.77.92 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 13ನೇ ಸ್ಥಾನ ಪಡೆದುಕೊಂಡಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 14954 ಬಾಲಕರು ಮತ್ತು 15492 ಬಾಲಕಿಯರು ಸೇರಿ ಒಟ್ಟು 30446 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 11044 ಬಾಲಕರು, 13415 ಬಾಲಕಿಯರು ಸೇರಿ ಒಟ್ಟು 24459 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಈ ಬಾರಿಯು ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕರು ಶೇ.73.85 ರಷ್ಟು ತೇರ್ಗಡೆ ಹೊಂದಿದರೆ, ಬಾಲಕಿಯರು ಶೇ.86.59 ರಷ್ಟು ತೇರ್ಗಡೆ ಹೊಂದಿರುತ್ತಾರೆ. ಕಳೆದ 2022-23 ಫಲಿತಾಂಶ ಪಡೆಯುವ ಮೂಲಕ 27ನೇ ಸ್ಥಾನ ಪಡೆದುಕೊಂಡರೆ, 2023-24 ರಂದು 77.92 ರಷ್ಟು ಫಲಿತಾಂಶ ಪಡೆಯುವ ಮೂಲಕ 13ನೇ ಸ್ಥಾನ ಪಡೆದುಕೊಂಡಿದೆ.
ಶೇಖಡಾವಾರು ಫಲಿತಾಂಶದಲ್ಲಿ ಕಳೆದ ಸಾಲಿನಿಂದ ಈ ಸಾಲಿಗೆ ಹೋಲಿಸಿದರೆ ಕಡಿಮೆ ಇದ್ದರೂ ಸ್ಥಾನದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. 625ಕ್ಕೆ 625 ಅಂಕ ಪಡೆದ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಅಂಕಿತಾ ಬಸಪ್ಪ ಕೊಣ್ಣೂರ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಅಂಕಿತಾ ರಾಜ್ಯಕ್ಕೂ ಜಿಲ್ಲೆಗೂ ಪ್ರಥಮ ಸ್ಥಾನ ಪಡೆದುಕೊಂಡರೆ, 625ಕ್ಕೆ 622 ಅಂಕ ಪಡೆದ ಮುಧೋಳನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಶೃತಿ ಹಂಚಾಟೆ, ಗುಳೇದಗುಡ್ಡ ಸರಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿ ಮಿನಾಜ ಕುರುಡಗಿ ಜಿಲ್ಲೆಗೆ ದ್ವಿತೀಯ ಸ್ಥಾನ, ಬಾಗಲಕೋಟೆ ಎಸ್.ಸಿ, ಎಸ್‌ಟಿ ಪ್ರತಿಭಾನ್ವಿತ ಶಾಲೆಯ ವಿದ್ಯಾರ್ಥಿ ದೀಪಾ ಕೊಕಟನೂರ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ.
ಗ್ಯಾರಂಟಿ, ಹಣ ಪ್ರಭಾವ ವರ್ಕೌಟ್ ಆಗಿಲ್ಲ : ಜಗದೀಶ್ ಶೆಟ್ಟರ್
ಲೋಕಸಭೆ ಚುನಾವಣೆ ಕೇಂದ್ರಕ್ಕೆ ಸಂಬಂಧಿಸಿದ್ದು, ಮೋದಿ ಮತ್ತೆ ಪ್ರಧಾನಿಯಾಗುವ ಹಿನ್ನೆಲೆಯಲ್ಲಿ ಈ ಗ್ಯಾರಂಟಿ, ಹಣದ ಪ್ರಭಾವ ವರ್ಕೌಟ್ ಆಗಿಲ್ಲ ಎಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಹಣದ ಪ್ರಭಾವ ಎಲ್ಲಿಯೂ ಆಗಿಲ್ಲ. ಗ್ಯಾರಂಟಿ ಯೋಜನೆಗಳು ರಾಜ್ಯಕ್ಕೆ ಸಿಮೀತವಾಗಿವೆ. ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಆದರೆ, ಗೆಲುವಿನ ಅಂತರದ ಲೆಕ್ಕಾಚಾರ ಹಾಕಿಲ್ಲ. ನಾನು ಮಾರ್ಚ್ 27ಕ್ಕೆ ಬೆಳಗಾವಿ ಬಂದ ನಂತರ ನಿರಂತರವಾಗಿ ಪ್ರವಾಸ ಮಾಡಿ ಇಡೀ ಕ್ಷೇತ್ರ ಸುತ್ತಿದ್ದೇನೆ. ದಿನದಿಂದ ದಿನಕ್ಕೆ ಜನರ ಬೆಂಬಲ ಜಾಸ್ತಿ ಆಗುತ್ತ ಹೋಯಿತು. ಅದು ಕಡಿಮೆ ಆಗಲಿಲ್ಲ. ನಮ್ಮ ವಿಶ್ವಾಸ ಹೆಚ್ಚಾಗಿದೆ ಎಂದು ತಿಳಿಸಿದರು.
ಹಣ ಹಂಚಿ ಚುನಾವಣೆ ಮಾಡುವುದಾದರೇ ರಾಜಕೀಯ ಎಂಬುವುದು ಒಂದು ವ್ಯವಹಾರ ಆಗುತ್ತದೆ. ದುಡ್ಡು ಹೂಡಿಕೆ ಮಾಡಿ ದುಡ್ಡು ತೆಗೆಯುವುದು ಆಗುತ್ತದೆ. ಅಲ್ಲದೇ ಜನರನ್ನು ಕೆಡಿಸಿದಂತೆ ಆಗುತ್ತದೆ. ಈ ರೀತಿ ನೀವು ಜನರಿಗೆ ಹಣ ಕೊಡುವ ಚಟ ಹಚ್ಚಿಸಿದರೇ ರಾಜಕಾರಣ ಒಂದು ವ್ಯವಹಾರ ಆಗುತ್ತದೆ. ಆದರೆ, ರಾಜಕಾರಣಕ್ಕೆ ನಾವೆಲ್ಲ ಬಂದಿರೋದು ಜನರ ಸೇವೆ ಮಾಡಲು. ಹಾಗಾಗಿ ಈ ರೀತಿ ದುಡ್ಡು ಹಂಚಿದರೇ ರಾಜಕಾರಣಕ್ಕೆ ಅರ್ಥವೇ ಉಳಿಯುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಕತ್ತನ್ನು ಹಿಸುಕಿದಂತಾಗುತ್ತದೆ. ನನ್ನ 8 ಚುನಾವಣೆಗಳಲ್ಲಿ ಮತದಾರರಿಗೆ ಯಾವತ್ತೂ ಹಣ ಹಂಚಿಲ್ಲ. ಕಾರ್ಯಕರ್ತರಿಗೆ ಚಹ, ತಿಂಡಿ ಸೇರಿ ಸಣ್ಣ ಪುಟ್ಟ ಖರ್ಚು ಮಾಡಿರಬಹುದು ಎಂದು ಸ್ಪಷ್ಟಪಡಿಸಿದರು.
ಪ್ರಜ್ವಲ್ ರೇವಣ್ಣ ಪೆನ್‌ಡೈವ್ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಗಳು ಸಾರ್ವಜನಿಕ ಬದುಕಿಗೆ ಬಂದಾಗ ಈ ರೀತಿ ವ್ಯವಸ್ಥೆಗೆ ಆಸ್ಪದ ಕೊಡಬಾರದು. ಆ ಘಟನೆ ಆದ ಮೇಲೆ ರಾಜ್ಯ ಸರ್ಕಾರ ರಾಜಕೀಯ ದ್ವೇಷ ಸಾಧಿಸುತ್ತಿದೆ. ಈಗ ಡಿ.ಕೆ.ಶಿವಕುಮಾರ ಹೆಸರು ಬಂದಿದೆ. ಹಿಂದೆಯೂ ಅನೇಕ ಬಾರಿ ಅವರ ಹೆಸರು ಕೇಳಿ ಬಂದಿದೆ. ಆದರೆ, ಇದರಲ್ಲಿ ನನ್ನ ಪಾತ್ರ ಇಲ್ಲ ಎಂದು ಹೇಳಿದ್ದಾರೆ. ಇನ್ನು ದೇವರಾಜೇಗೌಡ ಹೇಳಿಕೆ ನೀಡಿದ ಮೇಲೆ ಡಿಕೆಶಿ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯ ಸತ್ಯವಾಯಿತು. ಆದರೂ, ಅದನ್ನು ಅಲ್ಲಗಳೆಯಲು ಡಿ.ಕೆ.ಶಿವಕುಮಾರ ಮುಂದಾಗಿದ್ದಾರೆ ಎಂದು ದೂರಿದರು. ಯಾರೂ ಕೂಡ ಒಬ್ಬರ ಚಾರಿತ್ರ್ಯ ಹರಣ ಮಾಡಲು ಹೋಗಬಾರದು. ರಾಜಕೀಯವಾಗಿ ಯಾರನ್ನೋ ಮುಗಿಸುವ ಕಾರಣದಿಂದ ಅವರ ದೋಷಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಸರಿಯಲ್ಲ. ಯಾವುದೇ ಪಕ್ಷದಲ್ಲೂ ಈ ರೀತಿ ಬ್ಲಾಕ್‌ಮೇಲ್ ಮಾಡುವುದಕ್ಕೆ ಆಸ್ಪದ ಕೊಡಬಾರದು.
ಇನ್ನು ಪೆನ್‌ಡೈವ್ ಪ್ರಕರಣದಲ್ಲಿ ಯಾರಿಗೆ ಅನ್ಯಾಯ ಆಗಿದೆಂಬ ಬಗ್ಗೆ ನ್ಯಾಯಯುತವಾಗಿ ತನಿಖೆ ಆಗಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಅವರು ವೈಯಕ್ತಿವಾಗಿ ಹೋರಾಟ ಮಾಡಲಿ. ಅದನ್ನು ಬಿಟ್ಟು ಈ ವಿಚಾರವನ್ನು ಸಾರ್ವಜನಿಕವಾಗಿ ರಾಜಕೀಯಗೊಳಿಸುವುದು, ಒಂದು ರೀತಿ ವೈಯಕ್ತಿಕವಾಗಿ ಚಾರಿತ್ರ್ಯ ಹರಣ ಮಾಡುವ ಕೆಲಸ ಸರಿಯಲ್ಲ ಎಂದು ತಿಳಿಸಿದರು. ವಿರೋಧಿಗಳ ಹಣದ ಹಂಚಿಕೆ ನಮಗೆ ಸಮಸ್ಯೆ ಆಗಿತ್ತು. ಇತ್ತು. ಆದರೆ, ಹಣಕ್ಕೆ ಜನ ಮರಳು ಆಗಲಿಲ್ಲ. ತತ್ವ, ಸಿದ್ಧಾಂತ, ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎನ್ನುವುದಕ್ಕೆ ಜನ ಬೆಂಬಲಿಸಿದರು. ಹಣಕ್ಕೆ ಬೆಂಬಲ ಕೊಡಲಿಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನೂ ಸೇರಿಸಿ 8 ವಿಧಾನಸಭೆ ಕ್ಷೇತ್ರಗಳಲ್ಲಿ ಲೀಡ್ ಆಗುತ್ತದೆ ಎಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.