ಆತ್ಮೀಯ ರೈತ ಬಾಂಧವರೇ,
ಈಗಾಗಲೇ ಹಲವಾರು ಜಿಲ್ಲೆಗಳಲ್ಲಿನ ಆಯ ಹೋಬಳಿಗಳಲ್ಲಿ ಇರುವಂತಹ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳ ವಿತರಣೆಯನ್ನು ಮಾಡಲಾಗುತ್ತಿದೆ. ಅಂತೆಯೇ ಈ ಬೀಜಗಳು ಸಬ್ಸಿಡಿ ದರದಲ್ಲಿ ಎಂದರೆ ಸಹಾಯಧನದಲ್ಲಿ ನಿಮಗೆ ದೊರಕುತ್ತಿರುವ ಕಾರಣ ಎಲ್ಲಾ ರೈತರು ಇದರ ಉಪಯೋಗವನ್ನು ಮಾಡಿಕೊಂಡು ತಮಗೆ ಉಪಯುಕ್ತ ಮಾಡಿಕೊಳ್ಳಬಹುದು. ಈ ಬೀಜಗಳು ಒಳ್ಳೆಯ ಗುಣಮಟ್ಟವನ್ನು ಹೊಂದಿದ್ದು ಇದು ಹೆಚ್ಚಿನ ಇಳುವರಿ ಯನ್ನು ತಂದು ಕೊಡುವ ಭಾಗವಾಗಿದೆ. ಹಾಗಾಗಿ ಸರ್ಕಾರಿ ಸೌಲಭ್ಯಗಳನ್ನು ಯಾರು ನಿರ್ಲಕ್ಷಿಸಬಾರದೆಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಕರ್ನಾಟಕದ ಎಲ್ಲಾ ಭಾಗದಲ್ಲಿ ಮಳೆ ಆರಂಭವಾಗಿದ್ದು, ಮಳೆರಾಯನ ಆರ್ಭಟ ತುಂಬಾ ಜೋರಾಗಿದೆ. ಹಾಗೆಯೇ ಏಲಕ್ಕಿ ನಾಡು ಎಂದು ಪ್ರಸಿದ್ಧಿ ಹೊಂದಿರುವ ಹಾವೇರಿ ಜಿಲ್ಲೆಯಲ್ಲಿ ಎಂದರೆ ಹಾವೇರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ರೈತರು ಜಮೀನುಗಳನ್ನು ಹದಗೊಳಿಸುತ್ತಿದ್ದಾರೆ. ಇನ್ನು ಕೆಲವರು ಮುಂಗಾರುಪೂರ್ವ ಮಳೆಗೆ ಬಿತ್ತನೆ ಮಾಡುತ್ತಿದ್ದಾರೆ. ಕೆಲವು ರೈತರು ಶೇಂಗಾ ಮತ್ತು ಸೋಯಾಬಿನ್ ಬಿತ್ತನೆಗೆ ಭರದ ಸಿದ್ಧತೆ ನಡೆಸಿದ್ದು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಕ್ಕಾಗಿ ಮುಗಿಬೀಳುತ್ತಿದ್ದಾರೆ. ನಿಮ್ಮ ಆಧಾರ್ ಕಾರ್ಡ್ ಮತ್ತು ನಿಮ್ಮ ಎಫ್ ಐಡಿ ನಂಬರ್ ಗಳನ್ನು ತೆಗೆದುಕೊಂಡು ಹೋಗಿ ಮತ್ತು ಬೀಜವನ್ನು ಪಡೆಯಿರಿ.
ಕೃಷಿಗೆ ಬೇಕಾದ ವಾತಾವರಣ ಇನ್ನೂ ಕಂಡುಬಂದಿಲ್ಲ: ಆದರೆ, ಪೂರ್ವ ಮುಂಗಾರಿಗೆ ಬೀಜ ಬಿತ್ತದಂತೆ ಹಾವೇರಿ ಕೃಷಿ ಇಲಾಖೆಯ ಜಂಟಿ ಸಹಾಯಕ ನಿರ್ದೇಶಕ ಮಂಜುನಾಥ್ ರೈತರಲ್ಲಿ ಮನವಿ ಮಾಡಿದ್ದಾರೆ. “ಪ್ರಸ್ತುತ ವರ್ಷ ಮುಂಗಾರುಪೂರ್ವ ಮಳೆ ಉತ್ತಮವಾಗಿದೆ. ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿರುವುದು ರೈತರಲ್ಲಿ ಸಂತಸ ತಂದಿದೆ. ಆದರೆ ಕೃಷಿಗೆ ಬೇಕಾದ ವಾತಾವರಣ ಇನ್ನೂ ಕಂಡುಬಂದಿಲ್ಲ. ಈ ಸಂದರ್ಭದಲ್ಲಿ ರೈತರು ಬಿತ್ತನೆ ಮಾಡಿದರೆ ಸರಿಯಾದ ಪ್ರಮಾಣದಲ್ಲಿ ಬೀಜಗಳು ಮೊಳಕೆಯೊಡೆಯುವುದಿಲ್ಲ. ಅಲ್ಲದೇ ಮಣ್ಣಿನಲ್ಲಿ ಕೊಳೆತು ಹೋಗುವ ಸಾಧ್ಯತೆಯೂ ಇದೆ. ಹೀಗಾಗಿ ರೈತರು ಬಿತ್ತನೆ ಮಾಡಬಾರದು” ಎಂದು ಸಲಹೆ ನೀಡಿದರು.
ಇದೇ ವೇಳೆ, ಈ ಸಮಯದಲ್ಲಿ ಬಿತ್ತನೆ ಮಾಡಿದರೆ ಇಳುವರಿ ಪ್ರಮಾಣವೂ ಕಡಿಮೆಯಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
“ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಕಾಲಕಾಲಕ್ಕೆ ತಕ್ಕಂತೆ ರೈತರಿಗೆ ಬೀಜ, ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ರೈತರು ಈಗ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿ ಮಾಡಿ ಮನೆಯಲ್ಲಿಟ್ಟುಕೊಳ್ಳಿ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಭೂಮಿ ಹದ ಮಾಡಿ ಮತ್ತು ವಾತಾವರಣ ತಂಪು ಇರುವ ಸಮಯದಲ್ಲಿ ಬಿತ್ತನೆ ಮಾಡಿ. ಇದರಿಂದ ಅಧಿಕ ಪ್ರಮಾಣದ ಬೆಳೆ ಬರಲಿದೆ.”
“ಜಿಲ್ಲೆಯಾದ್ಯಂತ 42 ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಗೋವಿಜೋಳ 60 ಸಾವಿರ ಟನ್, 800 ಕ್ವಿಂಟಲ್ ಭತ್ತ, 800 ಕ್ವಿಂಟಲ್ ಶೇಂಗಾ, ಸೋಯಾಬಿನ್ 3,063 ಕ್ವಿಂಟಲ್ ಸೇರಿದಂತೆ ರೈತರಿಗೆ ಬೇಕಾದಂತಹ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿದೆ. ಹಾಗಾಗಿ ರೈತರು ಹೆದರುವ ಅವಶ್ಯಕತೆ ಇಲ್ಲ” ಎಂದು ಕೃಷಿ ಅಧಿಕಾರಿ ತಿಳಿಸಿದರು.
ಆದರೆ, ಜಿಲ್ಲಾಡಳಿತ ಎಷ್ಟೇ ಮುಂಜಾಗೃತಾ ಕ್ರಮಗಳನ್ನು ಕೈಗೊಂಡರೂ ರೈತರಲ್ಲಿ ಆತಂಕ ಕಡಿಮೆಯಾಗಿಲ್ಲ. ತಮಗೆ ಬೇಕಾದ ಬಿತ್ತನೆ ಬೀಜ ಸಿಗುತ್ತೋ ಇಲ್ಲವೋ, ಗೊಬ್ಬರ ಸಿಗುತ್ತೋ ಇಲ್ಲವೋ ಎಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಸರತಿಯಲ್ಲಿ ನಿಂತು ಖರೀದಿ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತರು, “ಜಿಲ್ಲಾಡಳಿತ ಮೊದಮೊದಲು ಸಮರ್ಪಕ ದಾಸ್ತಾನಿದೆ ಎಂದು ತಿಳಿಸುತ್ತದೆ. ಆದರೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ, ಗೊಬ್ಬರ ಸಿಗದೇ ನಷ್ಟ ಅನುಭವಿಸಿದ್ದೇವೆ. ಒಂದೊಂದು ಬಾರಿ ಭೂಮಿ ಹದ ಇರುತ್ತದೆ, ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಸಿಗುವುದಿಲ್ಲ. ಮತ್ತೆ ನಮ್ಮ ಬೆಳೆಗೆ ಗೊಬ್ಬರದ ಅವಶ್ಯವಾಗಿರುತ್ತೆ. ಅಂತಹ ಸಮಯದಲ್ಲಿ ಗೊಬ್ಬರ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಬೆಳೆ ಹಾಳಾಗಿದ್ದನ್ನು ನೋಡಿದ್ದೇವೆ. ಜಿಲ್ಲಾಡಳಿತ ರೈತರಿಗೆ ಯಾವುದೇ ತೊಂದರೆಯಾಗದಂತೆ ಸಮರ್ಪಕ ಬಿತ್ತನೆ ಬೀಜ ಗೊಬ್ಬರ ನೀಡಿದರೆ ಸಾಕು” ಎಂದು ಹೇಳಿದರು.
ನಂಜನಗೂಡು ತಾಲ್ಲೂಕಿನ ಯಾಲಹಳ್ಳಿ ಗ್ರಾಮದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಗುರುವಾರ ಹಿರಿಯ ಪರೀಕ್ಷಕ ರಮೇಶ್ ಅವರು ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಿಸಿದರು.
ಬಳಿಕ ಮಾತನಾಡಿ, ‘ನೀರಾವರಿ ಜಮೀನು ಹೊಂದಿರುವ ರೈತರ ಜಾನುವಾರುಗಳಿಗೆ ಮೇವಿಗೆ ತೊಂದರೆ ಉಂಟಾಗಬಾರದೆಂಬ ಉದ್ದೇಶದಿಂದ ಪಶುಪಾಲನ ಇಲಾಖೆಯಿಂದ ಉಚಿತವಾಗಿ ಬಿತ್ತನೆ ಬೀಜದ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. ರೈತರು ಮೇವನ್ನು ಬೆಳೆದು ಜಾನುವಾರಗಳಿಗೆ ಮೇವಿನ ಕೊರತೆಯಾಗದಂತೆ ನಿರ್ವಹಿಸಬೇಕೆಂದು’ ಎಂದು ಹೇಳಿದರು.
ಪ್ರಸ್ತುತ ಮುಂಗಾರು ಬಿತ್ತನೆ ಹಿನ್ನೆಲೆಯಲ್ಲಿ ದೇಶದ ಖ್ಯಾತ ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಒಂದಾದ ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ಇತ್ತಿಚೆಗೆ ಬೀಜ ಮೇಳ ನಡೆಯಿತು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ರೈತರಿಗೆ ಬಿತ್ತನೆಗೆ ಬೇಕಾಗುವ ಹೆಸರು,ಉದ್ದು, ಸೋಯಾ ಅವರೆ, ಅಲಸಂದಿ,ಶೇಂಗಾ, ಗೋವಿನ ಜೋಳ,ರಾಗಿ,ನವಣೆ -ಮುಂತಾದ ಬೀಜಗಳ ಮಾರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಬೀಜ ಮೇಳದಲ್ಲಿ ಸಾವಿರಾರು ರೈತರು ಭಾಗವಹಿಸಿ ತಮಗೆ ಬೇಕಾದ ಬೀಜಗಳನ್ನು ಖರೀದಿಸಿದರು. ಪ್ರಸ್ತುತ ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ಲಭ್ಯವಿರುವ ಬೀಜಗಳು ಮತ್ತು ಅವುಗಳ ದರ ಕೆಳಗೆ ಚಿತ್ರದಲ್ಲಿ ನೀಡಲಾಗಿದೆ. ಬೀಜಗಳ ಅವಶ್ಯಕತೆ ಇರುವ ರೈತರು ಕೃಷಿ ವಿಶ್ವ ವಿದ್ಯಾಲಯ ಧಾರವಾಡದ ಬೀಜ ವಿಭಾಗಕ್ಕೆ ಭೇಟಿ ನೀಡಿ.
ಇದನ್ನೂ ಓದಿ :- 21000 ರೂಪಾಯಿ ಹಣ ರೈತರ ಖಾತೆಗೆ ಜಮಾ 3ನೆ ಹಂತದ ಹಣ ಬಿಡುಗಡೆಗೆ ಮುಹೂರ್ತ ಫಿಕ್ಸ್
ತೋಟಗಾರಿಕೆ ತರಬೇತಿಗೆ ಅರ್ಜಿ
ಬಾಗಲಕೋಟೆ : ಪ್ರಸಕ್ತ ಸಾಲಿಗೆ ತೋಟಗಾರಿಕೆ ಇಲಾಖೆಯಿಂದ ಬೆಳಗಾವಿ ಜಿಲ್ಲೆಯ ಹಿಡಕಲ್ ಡ್ಯಾಂ ತರಬೇತಿ ಕೇಂದ್ರದಲ್ಲಿ ಜುಲೈ 1, 2024 ರಿಂದ ಮಾರ್ಚ 31, 2025 ವರೆಗೆ ಒಟ್ಟು 9 ತಿಂಗಳ ತೋಟಗಾರಿಕೆ ತರಬೇತಿಗೆ ರೈತ ಪುರುಷ, ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸುವ ರೈತರು ಕನಿಷ್ಠ ಎಸ್. ಎಸ್.ಎಲ್.ಸಿ ಪಾಸಾಗಿರಬೇಕು. ಜಿಲ್ಲೆಗೆ 15 ಜನ ರೈತರನ್ನು ಆಯ್ಕೆ ಮಾಡಲು ಗುರಿ ನಿಗಧಿಪಡಿಸಲಾಗಿದೆ. ಅರ್ಜಿಯ ಜೊತೆಗೆ ಉತಾರ, ಹಿಡುವಳಿ, ದೃಢೀಕರಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ ಧೃಡೀಕರಿಸಿದ ನಕಲು ಪ್ರತಿ ಹಾಗೂ ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ ಮತ್ತು ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 30 ರೂ. ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 15 ರೂ.ಗಳ ಪೋಸ್ಟಲ ಆರ್ಡರ ಅಥವಾ ಅಕೌಂಟ್ ರಹಿತ ಡಿಡಿ ಮೂಲಕ ಸಲ್ಲಿಸಬೇಕು. ಅರ್ಜಿಯನ್ನು ಮೇ 22 ರಿಂದ ಜೂನ್ 3 ಆಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಜೂನ್ 3 ಸಂಜೆ 5.30 ಗಂಟೆಯೊಳಗಾಗಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯ ವಲಯ, ಬಾಗಲಕೋಟೆ ಕಚೇರಿ ದೂಸಂ.9741730399, 9901435117ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಇಂದಿನಿಂದ ಮಾವು ಪ್ರದರ್ಶನ & ಮಾರಾಟ ಮೇಳ
ಬಾಗಲಕೋಟೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಮೇ 24 ರಿಂದ 26 ವರೆಗೆ 3 ದಿನಗಳ ಕಾಲ ವಿದ್ಯಾಗಿರಿಯ ಕಾಳಿದಾಸ ಕಲ್ಯಾಣ ಮಂಟಪ ಆವರಣದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದ್ದು, ರೈತರು ಹಾಗೂ ಗ್ರಾಹಕರು ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.