ಸರ್ಕಾರವು ಗ್ಯಾರಂಟಿ ಯೋಜನೆಗಳ ಜೊತೆಗೆ ಕೃಷಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಕೃಷಿ ಇಲಾಖೆಯ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅನುಕೂಲವಾಗುವಂತೆ ಇಲಾಖೆಯಲ್ಲಿ ಖಾಲಿ ಇರುವ 750 ಹುದ್ದೆಗಳನ್ನು ಜೂನ್ ಮಾಹೆಯೊಳಗೆ ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದರು. ಅವರು ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕೃಷಿ ಇಲಾಖೆಯ 2023-24ನೇ ಸಾಲಿನಲ್ಲಿ ಇದುವರೆಗಿನ ಸಾಧನೆ ಕುರಿತು ಮಾಹಿತಿ ನೀಡಲು ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಖಾಲಿ ಹುದ್ದೆಯ ಭರ್ತಿಗೆ ಆರ್ಥಿಕ ಇಲಾಖೆಯು ಅಧಿಕೃತವಾಗಿ ಮಂಜೂರಾತಿ ನೀಡಿದೆ.
750 ಹುದ್ದೆಗಳಲ್ಲಿ 100 ಕೃಷಿ ಅಧಿಕಾರಿಗಳು ಮತ್ತು 650 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ
ಕಳೆದ 20 ವರ್ಷಗಳಿಂದ ಆಗದ ಮುಂಬಡ್ತಿಯನ್ನು ನಾವು ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ 04 ಉಪ ಕೃಷಿ ನಿರ್ದೇಶಕರು, 292 ಸಹಾಯಕ ಕೃಷಿ ನಿರ್ದೇಶಕರು, 253 ಕೃಷಿ ಅಧಿಕಾರಿಗಳು, 33 ಸಿಬ್ಬಂದಿಗಳು ಸೇರಿದಂತೆ ಒಟ್ಟು 582 ಹುದ್ದೆಗಳಿಗೆ ಮುಂಬಡ್ತಿ ನೀಡಲಾಗಿದೆ. ಇನ್ನೂ ಎರಡು-ಮೂರು ವರ್ಷದೊಳಗೆ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.
ಬರಗಾಲವಿದ್ದು ರೈತರಿಗೆ ಅನೂಕೂಲ ಕಲ್ಪಿಸಿಕೊಡಬೇಕಾಗಿರುವುದರಿಂದ, ಯಾವ ಯಾವ ಇಲಾಖೆಯಲ್ಲಿ ರೈತರಿಗೆ ಅನೂಕೂಲ ಕಲ್ಪಿಸುವ ಯೋಜನೆಗಳಿದ್ದರೆ, ಅವುಗಳನ್ನು ತುರ್ತಾಗಿ ಅನುಷ್ಠಾನಗೊಳಿಸುವಂತೆ ಮಾನ್ಯ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಅದರಂತೆ ಕೃಷಿ ಇಲಾಖೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಮೂರು ಬಾರಿ ಸಭೆ ನಡೆಸಲಾಗಿದೆ. ಈಗಲೂ ಸಭೆ ನಡೆಸಿ ಮಾರ್ಚ್ ಅಂತ್ಯದೊಳಗೆ ಕೃಷಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಎಲ್ಲಾ ಕೃಷಿ ಇಲಾಖೆಯ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದರು.
ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಿ ಮಳೆಯಾಶ್ರಿತ 24 ಬರ ಪೀಡಿತ ಜಿಲ್ಲೆಗಳಲ್ಲಿನ 106 ತಾಲ್ಲೂಕಿಗಳಲ್ಲಿ 100 ಕೋಟಿ ರೂ. ಗಳ ಅನುದಾನದಲ್ಲಿ
ಸುಮಾರು 10 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಕೃಷಿಯಲ್ಲಿ ಯಾಂತ್ರಿಕತೆಯನ್ನು ಪ್ರೋತ್ಸಾಹಿಸಲು 63,783 ಫಲಾನುಭವಿಗಳಿಗೆ 370 ಟ್ರ್ಯಾಕ್ಟರ್, 5,946 ಪವರ್ ಟಿಲ್ಲರ್, 12.060 ಸ್ವಯಂಚಾಲಿತ ಕೃಷಿ ಯಂತ್ರೋಪಕರಣಗಳು ಹಾಗೂ ಟ್ರ್ಯಾಕ್ಟರ್, ಎಂಜಿನ್, ಮೋಟಾರ್ ಚಾಲಿತ ಯಂತ್ರೋಪಕರಣಗಳು 36,907 ಮತ್ತು ಕೃಷಿ ಸಂಸ್ಕರಣಾ ಘಟಕಗಳಿಗೆ ರೂ.284.92 ಕೋಟಿ ಸಹಾಯ ಧನ ನೀಡಲಾಗಿದೆ.
ಬರಗಾಲದ ಹಿನ್ನೆಲೆಯಲ್ಲಿ ಬೆಳೆ ವಿಮೆ ಯೋಜನೆಯಡಿ 24.51 ಲಕ್ಷ ರೈತರ ಪ್ರಸ್ತಾವನೆಗಳು ಬಂದಿದ್ದು, 20.10 ಹೆಕ್ಟೇರ್ ಪ್ರದೇಶಕ್ಕೆ ನೋಂದಣಿಯಾಗಿದೆ. ಬಿತ್ತನೆ ವೈಫಲ್ಯ, ಮಧ್ಯಂತರ ಬೆಳೆ ವಿಮೆ ಪರಿಹಾರ, ಸ್ಥಳ ನಿರ್ಧಿಷ್ಟ ಪ್ರಕೃತಿ ವಿಕೋಪ ಹಾಗೂ ಕೊಲ್ಲೋತ್ತರ ಬೆಳೆ ನಷ್ಟದಡಿ 8.09 ಲಕ್ಷ ರೈತ ಫಲಾನುಭವಿಗಳಿಗೆ ರೂ. 574.52 ಕೋಟಿಗಳ ಬೆಳೆ ವಿಮೆ ಪರಿಹಾರ ವಿಮಾ ಸಂಸ್ಥೆಗಳಿಂದ ಇತ್ಯರ್ಥಪಡಿಸಲಾಗುತ್ತಿದೆ. ಇನ್ನುಳಿದ ರೈತರಿಗೆ ಮಾರ್ಚ್ ಅಂತ್ಯದೊಳಗೆ ಬೆಳೆ ವಿಮಾ ಪರಿಹಾರ ಪಾವತಿ ಮಾಡಲಾಗುವುದು. ಇದರಲ್ಲಿ ರೈತರ ಪಾಲಿನ ಬೆಳೆ ವಿಮಾ ಕಂತು ರೂ.184.78 ಕೋಟಿಗಳು ಪಾವತಿಯಾಗಿರುತ್ತದೆ ಎಂದರು.
ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಕೃಷಿ ನವೋದ್ಯಮಗಳಿಗೆ ಉತ್ತೇನ ನೀಡಲು 10.00 ಕೋಟಿಗಳ ಅನುದಾನ ಒದಗಿಸಲಾಗಿದ್ದು, 48 ನವೋದ್ಯಮಗಳನ್ನು ಸ್ಥಾಪಿಸಲಾಗುತ್ತಿದೆ. ಹೊಸ ಕೃಷಿ ನವೋದ್ಯಮಗಳಿಗೆ ರೂ. 5 ಲಕ್ಷ ದಿಂದ 20 ಲಕ್ಷದವರೆಗೆ ಮತ್ತು ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆಗೆ ರೂ. 20.00 ಲಕ್ಷ ದಿಂದ ರೂ 50. ಲಕ್ಷಗಳ ವರೆಗೆ ಆರ್ಥಿಕ ನೆರವನ್ನು ನೀಡಲಾಗಿದೆ.
2024ನೇ ಜನವರಿ 05 ರಿಂದ ಜನವರಿ 07 ವರೆಗೆ ಬೆಂಗಳೂರಿನ ಅರಮನೆ ಮೈದಾನ “ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ-2024″ನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಈ ಮೇಳದಲ್ಲಿ 16 ವಿವಿಧ ರಾಜ್ಯಗಳು ಹಾಗೂ 2 ಲಕ್ಷಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿದ್ದರು. ಮೇಳದಲ್ಲಿ ಸುಮಾರು 150 ಕೋಟಿ ರೂ. ಮೌಲ್ಯದ 41 ಒಪ್ಪಂದಗಳಾಗಿವೆ. ರೈತ ಸಮುದಾಯದ ಕಲ್ಯಾಣಕ್ಕಾಗಿ ಕೃಷಿ ಇಲಾಖೆ ವತಿಯಿಂದ ವಿವಿಧ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡುತ್ತಿದ್ದು, ಈ ಯೋಜನೆಗಳ ಕುರಿತು ರೈತರು ಮಾಹಿತಿ ಪಡೆಯಲು ಅನುಕೂಲವಾಗುವಂತೆ ನೂತನವಾಗಿ “ರೈತ ಕರೆ ಕೇಂದ್ರ” ವನ್ನು 1800-425-3553 ಏಕರೂಪ ಸಂಖ್ಯೆಯೊಂದಿಗೆ ಸ್ಥಾಪಿಸಲಾಗಿರುತ್ತದೆ. ನೆಟೆ ರೋಗ ಪರಿಹಾರ ಯೋಜನೆಯಲ್ಲಿ 2022-23ನೇ ಸಾಲಿನಲ್ಲಿ ತೊಗರಿ ಬೆಳೆ ನೆಟೆ ರೋಗದಿಂದ ಹಾನಿಗೊಳಗಾದ ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳ 2,98,338 ರೈತರಿಗೆ ಇಲ್ಲಿಯವರೆಗೆ ರೂ. 223.00 ಕೋಟಿ ಪರಿಹಾರವನ್ನು ನೇರ ನಗದು ಮೂಲಕ ವರ್ಗಾಯಿಸಲಾಗಿದೆ. ಪರಿಕರಗಳ ವಿತರಣೆಯಲ್ಲಿ ಸುಗಮವಾಗಿ ಹಾಗೂ ಪಾರದರ್ಶಕತೆಯನ್ನು ನಿರ್ವಹಿಸಲು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿರುವ ಎಲ್ಲಾ ಪರಿಕರಗಳಿಗೆ ಕೆ-ಕಿಸಾನ್ ತಂತ್ರಾಂಶದಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಇದರಿಂದ ರೈತರು ವಂಚನೆಗೊಳಗಾಗುವುದನ್ನು ತಪ್ಪಿಸಲಾಗಿದೆ ಎಂದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳಲ್ಲಿ ರಾಷ್ಟ್ರೀಯ ಆಹಾರ ಮತ್ತು ಸುರಕ್ಷತಾ ಅಭಿಯಾನ ಯೋಜನೆ, ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ನ್ಯಾಷನಲ್ ರೂರಲ್ ಲೈಲಿಹುಡ್ ಮಿಷನ್ ಯೋಜನೆ, ಕೌಶಲ್ಯಾಭಿವೃದ್ಧಿ ಮತ್ತು ಇತ್ಯಾದಿ ಯೋಜನೆಗಳನ್ನು ಒಗ್ಗೂಡಿಸಿ 697 ಆನ್‌ಲೈನ್ ಮತ್ತು ಆನ್‌ಲೈನ್ ಮೂಲಕ ಆಯೋಜಿಸಿರುವ ವಿವಿಧ ತರಬೇತಿ ಕಾರ್ಯಕ್ರಮಗಳಡಿ ಒಂದು ಲಕ್ಷಕ್ಕಿಂತ ಹೆಚ್ಚು ರೈತರಿಗೆ ಮತ್ತು ವಿಸ್ತರಣಾ ಅಧಿಕಾರಿಗಳಿಗೆ ವಿವಿಧ ತಾಂತ್ರಿಕತೆ ಮತ್ತು ಕೌಶಲ್ಯಗಳ ಕುರಿತು ತರಬೇತಿ ನೀಡಲಾಗಿದೆ.
2023-24ನೇ ಸಾಲಿನಲ್ಲಿ 6.12 ಲಕ್ಷ ಕ್ವಿಂಟಾಲ್ ವಿವಿಧ ಬಿತ್ತನೆ ಬೀಜಗಳನ್ನು 13.09 ಲಕ್ಷ ರೈತರಿಗೆ ರೂ.155.36ಕೋಟಿ ಸಹಾಯಧನದಲ್ಲಿ ವಿತರಣೆ ಮಾಡಲಾಗಿದೆ. 42.27 ಲಕ್ಷ ಮೆಟ್ರಿಕ್ ಟನ್ ವಿವಿಧ ರಾಸಾಯನಿಕ ರಸಗೊಬ್ಬರಗಳ ಬೇಡಿಕೆ ಅಂದಾಜಿಸಿ ಸಕಾಲದಲ್ಲಿ ಪೂರೈಕೆಗಾಗಿ ಜಿಲ್ಲಾವಾರು, ಮಾಹೆವಾರು ಮತ್ತು ಸಂಸ್ಥೆವಾರು ಸರಬರಾಜು ಮಾಡುವ ಸಿದ್ಧತೆ ಮಾಡಲಾಗಿದೆ. 50.28 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜಾಗಿದ್ದು, 38.42 ಲಕ್ಷ ಮೆಟ್ರಿಕ್ ಟನ್ ಮಾರಾಟವಾಗಿದೆ ಹಾಗೂ 11.86 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿರುತ್ತದೆ. ಯಾವುದೇ ರಸಗೊಬರದ ಕೊರತೆ ಇರುವುದಿಲ್ಲ.
ಮುಂದಿನ ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ತೊಂದರೆಯಾಗದಂತೆ ಈಗಿನಿಂದಲೇ ರಸಗೊಬ್ಬರ, ಬಿತ್ತನೆ ಬೀಜ ವಿತರಿಸಲು ತಯಾರು ನಡೆಸಲಾಗುತ್ತಿದೆ ಎಂದರು. ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ದೂರದರ್ಶನದ ಚಂದನ ವಾಹಿನಿಯಲ್ಲಿ 12 ನೇರ ಫೋನ್ ಇನ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಗಳನ್ನು 10ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಿಸಿರುತ್ತಾರೆ. ಇದಲ್ಲದೆ, ಆಕಾಶವಾಣಿ ಮೂಲಕ 11 ರೇಡಿಯೋ ಪೊನ್ ಇನ್ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿರುತ್ತದೆ ಎಂದರು.
ಮಳೆ ಆಧಾರಿತ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮಗಳಡಿ ರೂ. 12.83 ಕೋಟಿ ವೆಚ್ಚ ಭರಿಸಿ 4,276 ಹೆಕ್ಟೇರ್ ಪ್ರದೇಶದಲ್ಲಿ ಸಮಗ್ರ ಕೃಷಿ ಪದ್ಧತಿ ಚಟುವಟಿಕೆಗಳ ಸೌಲಭ್ಯವನ್ನು 4.296 ಫಲಾನುಭವಿಗಳಿಗೆ ಒದಗಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ, 44,584 ಹೆಕ್ಟೇರ್ ಬದು ನಿರ್ಮಾಣ ಮತ್ತು ಕೃಷಿ ಹೊಂಡ ಸೇರಿದಂತೆ 5,176 ವಿವಿಧ ಮಣ್ಣು ಮತ್ತು ನೀರು ಸಂರಕ್ಷಣಾ ಚಟುವಟಿಕೆಗಳನ್ನು ಅನುಷ್ಟಾನ ಮಾಡಿ, 81.69 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದೆ.